ಕ್ಷೇತ್ರದಲ್ಲಿ ಪ್ರತ್ಯಕ್ಷರಾದ ಕಾಂಗ್ರೇಸ್ ಶಾಸಕ ಮಹೇಶ್ ಕಮಟಳ್ಳಿ

ಬೆಂಗಳೂರು,ಜ.25- ಅಪರೇಷನ್ ಕಮಲಕ್ಕೆ ಒಳಗಾಗಿ ಮುಂಬೈನಲ್ಲಿದ್ದಾರೆ ಎನ್ನಲಾದ ಅಥಣಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಮಹೇಶ್ ಕುಮಟಳ್ಳಿ ಅವರು ಕ್ಷೇತ್ರದಲ್ಲಿ ದಿಢೀರ್ ಪ್ರತ್ಯಕ್ಷರಾಗಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ಜೊತೆ ಯಾವುದೇ ಮುನಿಸಿಲ್ಲ. ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಅಸಮಾಧಾನವಿತ್ತೇ ಹೊರತು ಬೇರೆ ಯಾವುದೇ ಕಾರಣವಿಲ್ಲ ಎಂದರು.

ಕಳೆದ 25 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಕಟ್ಟಾ ಕಾರ್ಯಕರ್ತನಾಗಿದ್ದು, ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ. ನಾನು ಹಣ, ಆಮಿಷಕ್ಕಾಗಿ ಕ್ಷೇತ್ರ ಬಿಟ್ಟು ಹೋಗಿಲ್ಲ. ಬೆನ್ನು ನೋವಿನ ಕಾರಣಕ್ಕಾಗಿ ಚಿಕಿತ್ಸೆಗಾಗಿ ಮುಂಬೈಗೆ ಹೋಗಿದ್ದೆ.

ಹಾಗಾಗಿ ಸಿಎಲ್‍ಪಿ ಸಭೆಗೆ ಬರಲು ಆಗಲಿಲ್ಲ. ನಾನು ಪಕ್ಷ ಬಿಡುತ್ತೇನೆ ಎಂಬುದು ಕೇವಲ ಊಹಾಪೋಹ. ಯಾವುದೇ ಕಾರಣಕ್ಕೂ ನಾನು ಕಾಂಗ್ರೆಸ್ ಪಕ್ಷವನ್ನು ತೊರೆಯುವುದಿಲ್ಲ. ಈ ಬಗ್ಗೆ ನಮ್ಮ ನಾಯಕರಿಗೆ ವಿವರಗಳನ್ನು ನೀಡಿದ್ದೇನೆ ಎಂದು ಹೇಳಿದರು.

ಮಾಜಿ ಸಚಿವ ರಮೇಶ್ ಜಾರಕಿಹೊಳಿಯ ಆಪ್ತರಾದ ಮಹೇಶ್ ಕುಮಟಳ್ಳಿಯವರು ರಮೇಶ್ ಅವರೊಂದಿಗೆ ಪಕ್ಷ ತೊರೆಯುತ್ತಾರೆ ಎಂಬ ವದಂತಿ ದಟ್ಟವಾಗಿತ್ತು. ಮಹೇಶ್ ಅವರು ಅತೃಪ್ತರೊಂದಿಗೆ ಗುರುತಿಸಿಕೊಂಡಿದ್ದು, ಬಿಜೆಪಿಗೆ ಬೆಂಬಲ ನೀಡಲಿದ್ದಾರೆ ಎಂದು ಹೇಳಲಾಗಿತ್ತು.

ಇದಕ್ಕಾಗಿ ಕಳೆದ ಹಲವು ದಿನಗಳಿಂದ ಕಸರತ್ತು ನಡೆದಿತ್ತು.ಆದರೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರು ಕರೆದ ಸಿಎಲ್‍ಪಿ ಸಭೆಗೆ ಹಾಜರಾಗದ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಉಮೇಶ್ ಜಾಧವ್, ನಾಗೇಂದ್ರ ಅವರಿಗೆ ನೋಟಿಸ್ ನೀಡಿದ್ದರು.

ನೋಟಿಸ್ ಹಿನ್ನೆಲೆಯಲ್ಲಿ ಈ ನಾಲ್ವರು ಸಿಎಲ್‍ಪಿ ಸಭೆಗೆ ಹಾಜರಾಗದ ಕುರಿತಾಗಿ ನಾಯಕರಿಗೆ ಉತ್ತರ ನೀಡಿದ್ದಾರೆ. ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ