ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿರುವ ಶ್ರೀಗಳ ಕ್ರಿಯಾ ಸಮಾಧಿ

ಬೆಂಗಳೂರು, ಜ.22- ಕರುಣೆಯ ಮೇರು ಪರ್ವತ, ದಯೆಯ ಸಾಕಾರಮೂರ್ತಿ, ಲಕ್ಷಾಂತರ ಮನೆಗಳಲ್ಲಿ ಅಕ್ಷರ ದೀಪ ಹಚ್ಚಿದ ಮಾತೃಹೃದಯಿ ಕರ್ನಾಟಕ ರತ್ನ, ಅಭಿನವ ಬಸವಣ್ಣ, ಭಕ್ತರ ಪಾಲಿನ ನಡೆದಾಡುವ ದೇವರು ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ ಲಿಂಗ ಶರೀರದ ಕ್ರಿಯಾ ಸಮಾಧಿ ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ.

ಇಂದು ಸಂಜೆ 4 ಗಂಟೆ 30 ನಿಮಿಷಕ್ಕೆ ಕ್ರಿಯಾ ಸಮಾಧಿ ನಡೆಯಲಿದೆ. ಹಳೆಯ ಮಠದ ಅವರಣದಲ್ಲೇ ಶ್ರೀಗಳ ಗದ್ದುಗೆ ನಿರ್ಮಾಣವಾಗಿದ್ದು, ಈ ಸ್ಥಳದಲ್ಲಿ ಲಿಂಗದರೂಪದಲ್ಲಿ ದರ್ಶನ ನೀಡಲಿದ್ದಾರೆ. ಶ್ರೀಗಳು ಲಿಂಗೈಕ್ಯರಾಗಲಿರುವ ಗರ್ಭಗುಡಿಯಲ್ಲಿ 12 ಅಡಿ ಆಳದ ಕ್ರಿಯಾಸಮಾಧಿ ಗುಂಡಿ ತೆಗೆಯಲಾಗಿದೆ.
ಲಿಂಗಾಯತ ಸಂಪ್ರದಾಯದಂತೆ ಕ್ರಿಯಾವಿಧಿವಿಧಾನಗಳು ನೆರವೇರಲಿವೆ.

ಮೈಸೂರು ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಕನಕಪುರದ ಶ್ರೀ ಕಾಡ ಸಿದ್ದೇಶ್ವರ ಸ್ವಾಮೀಜಿ, ಸೇರಿದಂತೆ ಐದು ಮಂದಿ ಸ್ವಾಮೀಜಿಗಳ ನೇತೃತ್ವದಲ್ಲಿಕ್ರಿಯಾ ವಿಧಿಗಳು ನೆರವೇರಲಿದೆ. ಒಟ್ಟು 30 ಮಂದಿ ಮಠಾಧೀಶರ ತಂಡ ಈ ಕ್ರಿಯಾವಿಧಿಯಲ್ಲಿ ಪಾಲ್ಗೊಳ್ಳಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯ ಸರ್ಕಾರದಿಂದ ಸಕಲ ಸರ್ಕಾರಿ ಗೌರವಗಳೊಂದಿಗೆ ಲಿಂಗಾಯಿತ ಆಗಮೋಕ್ತ ವಿಧಿವಿಧಾನದ ಪ್ರಕಾರ ನಡೆದಾಡುವ ದೇವರನ್ನು ಬೀಳ್ಕೊಡಲಾಗುತ್ತದೆ.

ಇನ್ನು ಶಿವಕುಮಾರ ಸ್ವಾಮೀಜಿ ಅವರ ಕ್ರಿಯಾಸಮಾಧಿಗೂ ಮುನ್ನ ಧಾರ್ಮಿಕ- ವಿಧಿ ವಿಧಾನಗಳು ನಡೆಯಲಿದ್ದು, ಶ್ರೀಗಳ ಕ್ರಿಯಾಕಾರ್ಯಗಳು ಬೆಳಗ್ಗೆ 8 ಗಂಟೆಯಿಂದಲೇ ಆರಂಭವಾಗಲಿದೆ. ಮೊದಲಿಗೆ ಲಿಂಗಶರೀರದ ಶುದ್ಧೀಕರಣ ಮಾಡಲಾಗುತ್ತದೆ.ನಂತರ ಕಲಶ ಪೂಜೆ, ಅಷ್ಟದಿಕ್ಪಾಲಕರ ಪೂಜೆ, ಪುಣ್ಯ, ನಂದಿಪೂಜೆ. ಪಂಚಕಳಸ ಪೂಜೆ, ಸಪ್ತರ್ಶಿ ಪೂಜೆ ಸೇರಿದಂತೆ ವಿವಿಧ ಪೂಜೆಗಳನ್ನು ಸಂಪ್ರದಾಯದಂತೆ ನಡೆಸಲಾಗುತ್ತದೆ.

ಸಂಜೆ ಗೋಸಲ ಸಿದ್ದೇಶ್ವರ ವೇದಿಕೆಯಿಂದ ಮಠದ ಬೀದಿಯಲ್ಲಿ ಸ್ವಾಮೀಜಿಯವರ ಮೆರವಣಿಗೆ ನಡೆಸಿ ಗದ್ದುಗೆ ಭವನಕ್ಕೆಕರೆತರಲಾಗುತ್ತದೆ.ಅಲ್ಲಿ ಗದ್ದುಗೆಗಾಗಿ ಸಿದ್ಧಪಡಿಸಿರುವ ಸ್ಥಳದಲ್ಲಿ ಲಿಂಗೈಕ್ಯ ಶ್ರೀಗಳನ್ನು ಕೂರಿಸಲಾಗುತ್ತದೆ. ಇದಕ್ಕೂ ಮೊದಲು ಎರಡು ಕ್ವಿಂಟಾಲ್ ವಿಭೂತಿ, ಉಪ್ಪು ಹಾಕಲಾಗುತ್ತದೆ.ಸ್ವಾಮೀಜಿ ಅವರ ಸಮಾಧಿ ಬಳಿಕ ಲಿಂಗ ಪ್ರತಿಷ್ಠಾಪನೆ ಮಾಡಲಾಗುತ್ತದೆ.

ಶ್ರೀಗಳ ಕ್ರಿಯಾ ಸಮಾಧಿ ನಡೆಯಲಿರುವ ಭವನವನ್ನು ತಳಿರು ತೋರಣ, ಹೂಗಳಿಂದ ಅಲಂಕರಿಸಲಾಗುಗಿದೆ. ಸಿದ್ದಗಂಗಾ ಶ್ರೀಗಳ ಕ್ರಿಯಾಸಮಾಧಿ ಕಾರ್ಯದ ವೇಳೆ ವಿಭೂತಿಗಟ್ಟಿ ಮತ್ತು ಉಪ್ಪನ್ನು ಬಳಸಲಾಗುತ್ತದೆ.ಗದ್ದುಗೆಯ ಗರ್ಭಗುಡಿಯಲ್ಲಿ.ಸ್ಥಳಶುದ್ಧಿ, ಪಂಚ ಕಳಸ ಪೂಜೆ, ಅಷ್ಟ ದಿಕ್ಪಾಲಕರು, ಸಪ್ತರ್ಷಿಗಳ ಪೂಜೆ ನಡೆಯಲಿದೆ.

ತಮ್ಮ ಗುರುಗಳಾದ ಉದ್ಧಾನ ಶಿವಯೋಗಿಗಳ ಗದ್ದುಗೆಯ ಪಕ್ಕದಲ್ಲೇ ಸಿದ್ದಗಂಗಾ ಶ್ರೀ ಚಿರಸ್ಥಾಯಿಯಾಗಲಿದ್ದಾರೆ. 70ನೇ ವರ್ಷದಲ್ಲಿದ್ದಾಗ ಶ್ರೀಗಳು ತಾವು ಐಕ್ಯವಾಗುವ ಸ್ಥಳವನ್ನು ಗುರುತಿಸಿದ್ದರು. ಈ ಸ್ಥಳ ಸೂಚಿಸಲು ಕಾರಣವಿದೆ.ಐಕ್ಯ ಸ್ಥಳಕ್ಕಾಗಿ ಜಾಗ ಹುಡುಕುತ್ತಿದ್ದಾಗ ಉದ್ಧಾನ ಶಿವಯೋಗಿಗಳು ನೀರನ್ನು ಎರೆದು ಪೋಷಿಸಿದ್ದ ಬೃಹತ್‍ಆಲದ ಮರ ಉರುಳಿ ಬಿದ್ದಿತ್ತು.ಈ ಸ್ಥಳವನ್ನು ಶ್ರೀಗಳು ಆಯ್ಕೆ ಮಾಡಿದ್ದರು.

ಪೂರ್ಣ ಕೆಲಸ ಮುಗಿಸಬಾರದು ಎನ್ನುವ ಪ್ರತೀತಿ ಇರುವುದರಿಂದ ಒಂದಿಷ್ಟು ಕೆಲಸಗಳನ್ನು ಬಾಕಿ ಉಳಿಸಿಕೊಂಡಿದ್ದೇವೆ. ಇಂದಿನವರೆಗು ಒಂದೊಂದೇ ಕೆಲಸಗಳನ್ನು ಮುಗಿಸಲಾಗಿದೆ.ಬಹುತೇಕ ಇಂದಿನ ಎಲ್ಲ ಸಿದ್ದತಾ ಕಾರ್ಯ ಮುಗಿದಿದೆ.ಸಿದ್ದಲಿಂಗ ಶ್ರೀಗಳ ನೇತೃತ್ವದಲ್ಲಿ ಕೊನೆ ಪೂಜೆ ನಡೆಯಲಿದೆ.ಶ್ರೀಗಳ ಆಸೆಯಂತೆ ಎಲ್ಲವೂ ಈಡೇರಿದರೆ ಸಾಕು ಎಂದು ಗದ್ದುಗೆ ಉಸ್ತುವಾರಿ ವಹಿಸಿರುವ ವೇದಮೂರ್ತಿ ತಿಳಿಸಿದ್ದಾರೆ.

ಓಂ ನಮಃ ಶಿವಾಯ ಪರಿಕಲ್ಪನೆಯಲ್ಲಿ 5 ಮೆಟ್ಟಿಲುಗಳನ್ನೊಳಗೊಂಡ ಸಮಾಧಿ ನಿರ್ಮಾಣ ಮಾಡಲಾಗಿದೆ. ಲಿಂಗ ಶರೀರದ ಕ್ರಿಯಾಸಮಾಧಿಯ ಕೆಳಗೆ ವಿಶೇಷ ಪೀಠ ಹಾಗೂ ಗುಹೆ ನಿರ್ಮಾಣ ಮಾಡಲಾಗಿದೆ. ಪೀಠದ ಮೇಲೆ ಶ್ರೀಗಳನ್ನು ಕೂರಿಸಿ ಕೊನೆ ಪೂಜೆ ನೆರವೇರಿಸಲಾಗುವುದು. ಕಿರಿಯ ಶ್ರೀಗಳಾದ ಸಿದ್ದಲಿಂಗ ಶ್ರೀಗಳ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನಡೆಯಲಿದೆ.15 ಪುರೋಹಿತರಿಂದ ಶ್ರೀಗಳ ಅಂತಿಮ ವಿಧಿವಿಧಾನ ನೆರವೇರಲಿದೆ.ಮಧ್ಯಾಹ್ನದ ನಂತರ ಕ್ರಿಯಾ ಸಮಾಧಿ ಪೂಜೆ ನೆರವೇರಲಿದೆ.

100 ಕೆಜಿಗೂ ಹೆಚ್ಚು ವಿಭೂತಿ ಬಳಕೆ:ಸಿದ್ಧಗಂಗಾ ಶ್ರೀಗಳ ಕ್ರಿಯಾ ಪೂಜೆಗೆ ಹೆಚ್ಚು ವಿಭೂತಿಯನ್ನು ಬಳಸಲಾಗುತ್ತಿದೆ.ಮಠದ ಗದ್ದುಗೆಯಲ್ಲಿ ವಿಭೂತಿ ಸಂಗ್ರಹ ಮಾಡಲಾಗುವುದು. ಸುಮಾರು 100 ಕೆಜಿಗೂ ಹೆಚ್ಚು ವಿಭೂತಿ ಬಳಕೆ ಮಾಡಲಾಗುವುದು.ಕ್ರಿಯಾಪೂಜೆಗೆ 50 ಮೂಟೆಗೂ ಹೆಚ್ಚು ಉಪ್ಪು, 25 ಮೂಟೆಗೂ ಹೆಚ್ಚು ಅಕ್ಕಿ ಬಳಕೆ ಮಾಡಲಾಗುವುದು.ಇವೆಲ್ಲವನ್ನೂಗದ್ದುಗೆ ಒಳಭಾಗದಲ್ಲಿ ಸಂಗ್ರಹಿಸಲಾಗುವುದು.ಬಳಿಕ ಕಿರಿಯ ಶ್ರೀಗಳಿಂದ ಇಷ್ಟಲಿಂಗ ಪೂಜೆ ನೆರವೇರಲಿದೆ.
ಗದ್ದುಗೆಯ ವಿಶೇಷತೆ ಏನು?

ಗದ್ದುಗೆಯ ನಾಲ್ಕು ಮೂಲೆಗಳಲ್ಲಿ ಕರಡಿಗೆಯ ಚಿತ್ರವನ್ನು ಕೆತ್ತಲಾಗಿದೆ. ಈ ಭವನ ಸಂಪೂರ್ಣ ಅಮೃತಶಿಲೆಯಿಂದ ನಿರ್ಮಾಣಗೊಂಡಿದೆ. ಸ್ವಾಮೀಜಿ ನಿತ್ಯಓಡಾಡುತ್ತಿದ್ದ ತೇರಿನ ಬೀದಿಯಲ್ಲೇ ಈ ಭವನಇದೆ. ಲಿಂಗೈಕ್ಯರಾಗಲಿರುವ ಗದ್ದುಗೆ ಗರ್ಭಗುಡಿ ಶಿಲಾ ಬಾಗಿಲ ಮೇಲೆ 26 ದೇವರನ್ನುಕೆತ್ತಲಾಗಿದೆ.
ಬಾಗಿಲ ಎಡ, ಬಲ ಭಾಗದಲ್ಲಿ ಅಷ್ಟ ದಿಕ್ಪಾಲಕರು, ಸಿದ್ದಗಂಗಾ ಮಠದದೇವರಾದ ಸಿದ್ದಲಿಂಗೇಶ್ವರ ಸ್ವಾಮೀಜಿ, ಬಸವಣ್ಣ, ಲಿಂಗೈಕ್ಯ ಗೋಸಲ ಸಿದ್ದೇಶ್ವರ, ಉದ್ದಾನ ಶಿವಯೋಗಿ, ಯಡಿಯೂರು ಸಿದ್ದಲಿಂಗೇಶ್ವರ, ಅಟವಿ ಶಿವಯೋಗಿ, ಬೇಡರಕಣ್ಣಪ್ಪ, ಅಕ್ಕಮಹಾದೇವಿ ಸೇರಿದಂತೆ 26 ಮೂರ್ತಿಗಳನ್ನು ಕೆತ್ತಲಾಗಿದೆ.111 ವರ್ಷಗಳ ಸಾರ್ಥಕ ಜೀವನ ನಡೆಸಿದ ನಡೆದಾಡುವ ದೇವರು ಜನಮಾನಸದಲ್ಲಿ ಚಿರಸ್ಥಾಯಿ ಮಾತ್ರ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ