ಸ್ವತಂತ್ರ ರಾಷ್ಟ್ರಗಳ ಪೈಕಿ ವಿಶ್ವಬ್ಯಾಂಕ್ ನಿಂದ ಅತೀ ಹೆಚ್ಚು ಸಾಲ ಪಡೆದ ದೇಶ ಭಾರತ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದ ಅವಧಿಯಲ್ಲಿ ವಿಶ್ವ ಬ್ಯಾಂಕ್ ನಿಂದ ಭಾರತ ಸರ್ಕಾರ ಸಾಲ ಪಡೆದಿಲ್ಲ ಎಂಬ ಸುದ್ದಿಗಳು ಸುಳ್ಳು, 1/1/2015 ಮತ್ತು 31/12/2018ರ ಅವಧಿಯಲ್ಲಿ 66 ಯೋಜನೆಗಳಿಗಾಗಿ ಭಾರತ ಸರ್ಕಾರ ವಿಶ್ವ ಬ್ಯಾಂಕ್ ನಿಂದ ಸಾಲ ಪಡೆದಿದೆ ಎಂಬುದನ್ನು ದಾಖಲೆ ಸಮೇತ ದಿ ಲಾಜಿಕಲ್ ಇಂಡಿಯನ್ ವರದಿ ಮಾಡಿದೆ.

ಭಾರತಕ್ಕೆ ಸ್ವಾತಂತ್ರ ಸಿಕ್ಕಿ 70 ವರ್ಷಗಳು ಕಳೆದಿವೆ. ಇದರಲ್ಲಿ 2015 – 2018ರ ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ ಮಾತ್ರ ಭಾರತ ಸರ್ಕಾರ ವಿಶ್ವ ಬ್ಯಾಂಕ್‍ನಿಂದ ಸಾಲ ಪಡೆದಿಲ್ಲ ಎಂಬ ವಾಟ್ಸ್ಆ್ಯಪ್ ಸಂದೇಶವೊಂದು ಹರಿದಾಡುತ್ತಿದೆ. ಈ ಹಿನ್ನಲೆಯಲ್ಲಿ ದಿ ಲಾಜಿಕಲ್ ಇಂಡಿಯನ್ ಈ ಕುರಿತು ಪರಿಶೀಲನೆ ನಡೆಸಿದ್ದು, ಇದೊಂದು ಸುಳ್ಳು ಮಾಹಿತಿಯಾಗಿದ್ದು, ಪ್ರಧಾನಿ ಮೋದಿಯವರ ಅವಧಿಯಲ್ಲಿ ಭಾರತ ವಿಶ್ವ ಬ್ಯಾಂಕ್ ನಿಂದ ಸ್ವಚ್ಛ ಭಾರತ್ ಸೇರಿದಂತೆ ಹಲವು ಯೋಜನೆಗಳಿಗೆ ಸಾಲ ಪಡೆದುಕೊಂಡಿದೆ ಎಂದು ವಿವರಿಸಿದೆ.

ಹಿಂದೂಸ್ತಾನದ 70 ವರ್ಷದ ಇತಿಹಾಸದಲ್ಲಿ, 3 ವರ್ಷ ಮಾತ್ರ ವಿಶ್ವ ಬ್ಯಾಂಕ್‍ನಿಂದ ಒಂದೇ ಒಂದು ರೂಪಾಯಿ ಸಾಲ ಪಡೆದಿಲ್ಲ. ಅದು 2015-16, 2016-17, 2017-18. ಈ ಸಂದೇಶದ ಬಗ್ಗೆ ದಿ ಕ್ವಿಂಟ್ ಕೂಡಾ ವರದಿ ಮಾಡಿತ್ತು. ಫೇಸ್‍ಬುಕ್ ,ಟ್ವಿಟರ್ ಮತ್ತು ವಾಟ್ಸ್ಆ್ಯಪ್‍ನಲ್ಲಿ ಇದೇ ರೀತಿಯ ಸಂದೇಶ 2017, 2018ರಲ್ಲಿಯೂ ಹರಿದಾಡಿತ್ತು.
2018ರಲ್ಲಿ ಈ ಸಂದೇಶದ ಬಗ್ಗೆ ಆಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್ ಮಾಡಿತ್ತು.

ಒಟ್ಟಾರೆ ದಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ಮಾಡಿದಾಗ ತಿಳಿದು ಬಂದ ವಿಷಯವೆಂದರೆ ವಿಶ್ವ ಬ್ಯಾಂಕ್‍ ನ ದಾಖಲೆಗಳನ್ನು ಪರಿಶೀಲಿಸಿದಾಗ 1/1/2015 ಮತ್ತು 31/12/2018ರ ಅವಧಿಯಲ್ಲಿ 66 ಯೋಜನೆಗಳಿಗಾಗಿ ಧನ ಸಹಾಯ ಪಡೆಯಲಾಗಿದೆ. 2015 ಡಿಸೆಂಬರ್ 15ರಂದು ಸ್ವಚ್ಛ ಭಾರತ್ ಮಿಷನ್ ಸಪೋರ್ಟ್ ಆಪರೇಷನ್‍ಗಾಗಿ 1.5 ಬಿಲಿಯನ್ ಅಮೆರಿಕನ್ ಡಾಲರ್ ( 1,06,88,25,00,000.00 ರೂ) ಸಾಲ ಪಡೆಯಲಾಗಿದೆ ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ.

01/01/2015- 14/01/2019ರ ವರೆಗಿನ ಅವಧಿಯಲ್ಲಿ ಸಾಲದ ಬಗ್ಗೆ ವಿಶ್ವ ಬ್ಯಾಂಕ್ ಮಾಹಿತಿ ನೀಡಿದ್ದು, 2016ರಲ್ಲಿ ವಿಶ್ವ ಬ್ಯಾಂಕ್ ಪ್ರಕಟಿಸಿದ ವರದಿ ಪ್ರಕಾರ ಸ್ವತಂತ್ರ ರಾಷ್ಟ್ರಗಳ ಪೈಕಿ ಅತೀ ಹೆಚ್ಚು ಸಾಲ ಪಡೆದ ದೇಶ ಭಾರತ ಆಗಿದೆ. 1945- 2015ರ ಕಾಲಾವಧಿಯಲ್ಲಿ ವಿಶ್ವ ಬ್ಯಾಂಕ್ ಭಾರತಕ್ಕೆ 102.1 ಬಿಲಿಯನ್ ಅಮೆರಿಕನ್ ಡಾಲರ್ ಸಾಲ ನೀಡಿದೆ. ಕಳೆದ ಮೂರು ವರ್ಷಗಳಲ್ಲಿ ಸಾಲದ ಮೊತ್ತ ಅಧಿಕ ಆಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ