ದೇಶ ಉಳಿಸಿ; ಪ್ರಜಾಪ್ರಭುತ್ವ ರಕ್ಷಿಸಿ: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಕರೆ

ಕೋಲ್ಕತಾ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದೇಶ ಹೊಸ ಪ್ರಧಾನಿಯನ್ನು ಕಾಣಬೇಕಿದೆ. ಕೇಂದ್ರ ಎನ್ ಡಿಎ ಸರ್ಕಾರವನ್ನು ಬದಲಿಸುವ ಮೂಲಕ ದೇಶವನ್ನು ಉಳಿಸಿ, ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಿದೆ ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಕರೆ ನೀಡಿದ್ದಾರೆ.

ಕೋಲ್ಕತ್ತಾದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಯೋಜಿಸಿರುವ ಒಕ್ಕೂಟ ಭಾರತ ಸಮಾವೇಶದಲ್ಲಿ ಮಾತನಾಡಿದ ಚಂದ್ರಬಾಬು ನಾಯ್ಡು ಅವರು, ಭಾರತ ಉಳಿಸಿ, ಪ್ರಜಾಪ್ರಭುತ್ವ ರಕ್ಷಿಸಿ ಎಂದು ಜನತೆಗೆ ಕರೆ ನೀಡಿದರು.

ಐದು ವರ್ಷಗಳ ಹಿಂದೆ ದೇಶದ ಜನರು ಬಿಜೆಪಿಗೆ ಜನಾದೇಶ ನೀಡಿದ್ದರು. ಆದರೆ, ಅವರು ದೇಶದ ಜನತೆಗೇ ಬಿಜೆಪಿ ಮೋಸ ಮಾಡಿತು. ಪ್ರಧಾನಿ ಮೋದಿ ಕೇವಲ ಘೋಷಣೆಗಳನ್ನು ನೀಡಿದರು ಹೊರತು ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ಮೋದಿ ಒಬ್ಬ ಪ್ರಚಾರ ಪ್ರಿಯ ವ್ಯಕ್ತಿ. ದೇಶದ ಅಭಿವೃದ್ಧಿ, ಜನತೆಯ ಆಶಯದತ್ತ ಗಮನ ಹರಿಸುವ ಹಾಗೂ ದೇಶಕ್ಕಾಗಿ ಕೆಲಸಮಾಡುವ ವ್ಯಕ್ತಿ ಅವರಲ್ಲ ಎಂದು ವಾಗ್ದಾಳಿ ನಡೆಸಿದರು.

ಜನ್‌ಧನ್‌, ಮುದ್ರಾ ಯೋಜನೆ, ಉತ್ತಮ ಆಡಳಿತ, ಸ್ಮಾರ್ಟ್‌ ಸಿಟಿ, ಕಪ್ಪು ಹಣವನ್ನು ವಾಪಸ್‌ ತರುವುದು, ಎರಡು ಕೋಟಿ ಉದ್ಯೋಗ ಸೃಷ್ಟಿ, ಅಚ್ಚೇದಿನ್‌ ಸೇರಿ ಹಲವು ಘೋಷಣೆಗಳನ್ನಷ್ಟೇ ನೀಡಿದರು. ಯಾವುದು ಈಡೇರಿಲ್ಲ ಎಂದು ಹೇಳಿದರು.

ಇನ್ನು ನೋಟು ಅಮಾನ್ಯೀಕರಣ ಒಂದು ರಾಜಕೀಯ ಗಿಮಿಕ್, ಜಿಎಸ್ ಟಿ ಒಂದು ಅತಿ ದೊಡ್ಡ ವಂಚನೆ ಕೇಂದ್ರ ಸರ್ಕಾರಕ್ಕೆ ದೇಶದ ಅಭಿವೃದ್ಧಿ ಬೇಕಾಗಿಲ್ಲ ಎಂದರು.

ಬಿಜೆಪಿಯು ದೇಶವನ್ನು ಒಡೆಯುತ್ತಿದೆ. ನಮಗೆ ಭಾರತದ ಏಕತೆ ಬೇಕಾಗಿದೆ. ಹಾಗಾಗಿ ನಾವೆಲ್ಲ ನಾಯಕರೂ ಇಲ್ಲಿ ಸೇರಿದ್ದೇವೆ. ಇದಲ್ಲದೆ, ಮೋದಿ ಸರ್ಕಾರವನ್ನು ರಫೇಲ್‌ ಜೆಟ್‌ ವಿಮಾನ ವಿವಾದ ಮತ್ತು ನೋಟು ಅಮಾನ್ಯೀಕರಣದಿಂದಾಗಿ ದೇಶದ ರೈತರು ಮತ್ತು ಸಣ್ಣ ವ್ಯಾಪಾರಿಗಳು ಕಷ್ಟಪಡುವಂತಾಯಿತು. ಜಿಎಸ್‌ಟಿ ಕೂಡ ವಂಚನೆಯಾಗಿದ್ದು, ಆರ್ಥಿಕ ಬೆಳವಣಿಗೆ ಇಂದು ಕುಂಠಿತಗೊಂಡಿರುವುದನ್ನು ಕಾಣುತ್ತಿದ್ದೀರಿ ಎಂದು ಹೇಳಿದರು.

ರಾಜ್ಯಗಳ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಅವರು ಹೇಗೆ ನಡೆದುಕೊಂಡರು ಎಂಬುದು ತಿಳಿದಿದೆ. ಕರ್ನಾಟಕ ಸರ್ಕಾರವನ್ನು ಕೂಡ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆಲ್ಲ ಅವರು ತಕ್ಕ ಬೆಲೆಯನ್ನೇ ತೆರಲಿದ್ದಾರೆ ಎಂದು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದೇವೇಳೆ ಪ್ರತಿಪಕ್ಷಗಳ ಮೆಗಾ ರ್ಯಾಲಿಯಲ್ಲಿ ಮಾತನಾಡಿದ ಎಸ್ ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಮಮತಾ ಬ್ಯಾನರ್ಜಿ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ. ಪ್ರತಿಪಕ್ಷಗಳು ಒಂದಾಗಲು ಸಾಧ್ಯವೇ ಇಲ್ಲ ಎಂದು ಜನ ಭಾವಿಸಿದ್ದರು. ಆದರೆ ದೀದಿ ಅದನ್ನು ಸಾಧ್ಯವಾಗಿಸಿದ್ದಾರೆ ಎಂದರು.

ಇನ್ನು ಸಮಾವೇಶ ಉದ್ದೇಶಿಸಿ ಮಾತನಾಡಿದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು, ದೇಶದಲ್ಲಿ ಸ್ಥಿರ ಸರ್ಕಾರದ ಅಗತ್ಯ ಇದೆ. 13 ಮಿತ್ರ ಪಕ್ಷಗಳ ಜೊತೆ ಸೇರಿ ನಾನು ಪ್ರಧಾನಿಯಾಗಿದ್ದೆ. ಹಾಗೆ ಕಾಂಗ್ರೆಸ್ ಸಹ ನನಗೆ ಬೆಂಬಲ ನೀಡಿತ್ತು ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು 282 ಸ್ಥಾನಗಳನ್ನು ಗೆದ್ದಿದ್ದಾರೆ. ಆದರೆ ಇಂದು ಏನಾಗುತ್ತಿದೆ? ಮೋದಿ ದೇಶದ ಜಾತ್ಯತೀತ ಸಂಸ್ಥೆಗಳನ್ನು ಮತ್ತು ಸಂವಿಧಾನಾತ್ಮಕ ಸಂಸ್ಥೆಗಳನ್ನು ನಾಶ ಮಾಡುತ್ತಿದ್ದಾರೆ. ಇದು ಮೋದಿ ಸರ್ಕಾರದ ಅತಿ ದೊಡ್ಡ ಸಾಧನೆ ಎಂದು ವಾಗ್ದಾಳಿ ನಡೆಸಿದರು.

ಇದೇವೇಳೆ ದೇಶದಲ್ಲಿ ಜಾತ್ಯತೀತ ಸರ್ಕಾರ ಆಡಳಿತಕ್ಕೆ ಬರಲು ನಡೆಸಿದ ಐತಿಹಾಸಿಕ ಪ್ರಯತ್ನವಿದು ಎಂದು ಮಮತಾ ಬ್ಯಾನರ್ಜಿ ಅವರನ್ನು ದೇವೇಗೌಡರು ಶ್ಲಾಘಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ