ಕೋಲ್ಕತಾ: ದೇಶದ ಜನತೆಗೆ ಅಚ್ಚೇ ದಿನ್ ತರುವುದಕ್ಕಾಗಿ ಬಿಜೆಪಿಗೆ ಸಾಕ್ಷ್ಟು ಸಮಯ ಅವಕಾಶಗಳನ್ನು ನೀಡಲಾಗಿತ್ತು. ಆದರೆ ಬಿಜೆಪಿ ಜನರಿಗೆ ಅಚ್ಚೇ ದಿನ್ ತರಲಿಲ್ಲ. ಬಿಜೆಪಿಗೆ ಇನ್ನಷ್ಟು ಸಮಯಗಳನ್ನು ನೀಡಲು ಸಾಧ್ಯವಿಲ್ಲ. ದೇಶದ ಜನತೆಯ ಅಭಿವೃದ್ಧಿ ಹಾಗೂ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ವಿಪಕ್ಷಗಳು ಒಗ್ಗಟ್ಟಿನಿಂದ ಕೆಲಸ ಮಾಡಲಿವೆ. ಕೇಂದ್ರದ ಬಿಜೆಪಿ ಸರ್ಕಾರವನ್ನು ಕೆಳಗಿಳಿಸಬೇಕಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಕೋಲ್ಕತಾದಲ್ಲಿ ಪ್ರತಿಪಕ್ಷಗಳ ಶಕ್ತಿ ಪ್ರದರ್ಶನಕ್ಕಾಗಿ ಆಯೋಜಿಸಲಾಗಿದ್ದ ಒಕ್ಕೂಟ ಭಾರತ ಸಮಾವೇಶದಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ಇನ್ನು ಮುಂದೆ ಬಿಜೆಪಿಗೆ ಯಾವತ್ತೂ ಅಚ್ಛೆ ದಿನ್ ಬರುವುದಿಲ್ಲ ಎಂದರು.
ಪ್ರಧಾನಿ ಮೋದಿ ಸರ್ಕಾರದ ಅವಧಿ ಮುಗಿದಿದೆ. ಪ್ರತಿಪಕ್ಷಗಳು ಒಗ್ಗಟ್ಟಾಗಿ ಕೆಲಸ ಮಾಡುವುದಾಗಿ ಪ್ರಮಾಣ ಮಾಡಿದ್ದು, ಲೋಕಸಭೆ ಚುನಾವಣೆ ನಂತರ ಪ್ರಧಾನಿ ಅಭ್ಯರ್ಥಿಯನ್ನು ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.
ಇದೇವೇಳೆ ಮಮತಾ ‘ಬದಲಿಸಿ, ಬದಲಿಸಿ, ಕೇಂದ್ರ ಸರ್ಕಾರ ಬದಲಿಸಿ’ ಎಂಬ ಘೋಷಣೆಯನ್ನು ಕೂಗಿದರು. ಕೋಲ್ಕತಾದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ನಡೆಯುತ್ತಿರುವ ಒಕ್ಕೂಟ ಭಾರತ ಸಮಾವೇಶ ಪ್ರತಿಪಕ್ಷಗಳ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಗಿದ್ದು, ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ಜುಲ್ಲಾ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದಾರೆ.
Mamata Banerjee,united india rally,lok sabha