ಈ ಬಾರಿ ಬಿಬಿಎಂಪಿಯಿಂದ ಜನಸ್ನೇಹಿ ಬಜೆಟ್ ಮಂಡನೆ

ಬೆಂಗಳೂರು, ಜ.18- ಈ ಬಾರಿ ನಗರದ ಅಭಿವೃದ್ಧಿಗೆ ಪೂರಕವಾದ ಜನಸ್ನೇಹಿ ಬಜೆಟ್ ಮಂಡನೆ ಮಾಡಲಾಗುವುದು ಎಂದು ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಗೋಪಾಲಯ್ಯ ತಿಳಿಸಿದರು.

ಫೆ.8ರಂದು ರಾಜ್ಯ ಸರ್ಕಾರ ಬಜೆಟ್ ಮಂಡನೆ ಮಾಡಲಿದೆ.ನಗರ ಅಭಿವೃದ್ಧಿಗೆ ನೀಡಲಾಗುವ ಅನುದಾನ ನೋಡಿಕೊಂಡು ಬಿಬಿಎಂಪಿಯಲ್ಲಿ ನಾವು ಜನಸ್ನೇಹಿ ಬಜೆಟ್ ಮಂಡನೆ ಮಾಡಲು ತಯಾರಿ ನಡೆಸಿದ್ದೇನೆ ಎಂದರು.

ನಮ್ಮದೇ ಸರ್ಕಾರ ಇರುವುದರಿಂದ ನಾವು ನಿರೀಕ್ಷೆ ಮಾಡಿದಷ್ಟು ಅನುದಾನ ಸಿಗುವ ನಿರೀಕ್ಷೆ ಇದೆ.ಈ ಅನುದಾನ ಬಳಕೆ ಮಾಡಿಕೊಂಡು ನಗರದ ಸರ್ವಾಂಗೀಣ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡನೆ ಮಾಡುತ್ತೇವೆ ಎಂದು ತಿಳಿಸಿದರು.

ಮೇಯರ್ ಗಂಗಾಂಬಿಕೆ, ಆಯುಕ್ತ ಮಂಜುನಾಥ್ ಪ್ರಸಾದ್ ಅವರೊಂದಿಗೆ ಮಾತುಕತೆ ನಡೆಸಿ ನಾಳೆಯಿಂದ ಬಜೆಟ್ ಮಂಡನೆ ಪೂರ್ವಭಾವಿ ಸಭೆ ಆರಂಭಿಸುತ್ತೇನೆ. ಒಂದೆರಡು ದಿನಗಳಲ್ಲಿ ಬಜೆಟ್ ಮಂಡನೆಯ ಕರಡು ಪ್ರತಿ ನಮ್ಮ ಕೈ ಸೇರಿದಲಿದೆ. ಆನಂತರ ಸಂಘ-ಸಂಸ್ಥೆಗಳು, ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು, ತಜ್ಞರು ಮತ್ತಿತರರ ಸಭೆ ನಡೆಸಿ ಅಂತಿಮ ರೂಪುರೇಷೆ ಸಿದ್ಧಪಡಿಸುತ್ತೇವೆ ಎಂದು ಹೇಳಿದರು.

ಈಗಾಗಲೇ ಬಜೆಟ್ ಗಾತ್ರ ನಿರ್ಧರಿಸಲಾಗುವುದಿಲ್ಲ. ಎಲ್ಲ ಸಾಧಕ-ಬಾಧಕ ಅವಲೋಕಿಸಿ ಅಂತಿಮ ರೂಪ ನೀಡಲಾಗುವುದು.ಕಳೆದ ಸಾಲಿನಲ್ಲಿ ಮಂಡನೆಯಾದ ಬಜೆಟ್‍ನಲ್ಲಿನ ಹಲವು ಕಾಮಗಾರಿಗಳು ಬಾಕಿ ಇವೆ.ಇವುಗಳ ಜತೆಗೆ ಪ್ರಸಕ್ತ ಸಾಲಿನ ಯೋಜನೆಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುತ್ತೇವೆ ಎಂದು ಹೇಮಲತಾ ಗೋಪಾಲಯ್ಯ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ