ಅಮಿತ್ ಶಾರನ್ನು ನಕಲಿ ಚಾಣಕ್ಯ ಎಂದು ಕರೆದ ಬಿ.ಕೆ.ಹರಿಪ್ರಸಾದ್

ಬೆಂಗಳೂರು, ಜ.17- ಆಪರೇಷನ್ ಕಮಲದ ವಿರುದ್ಧ ಬೆಂಗಳೂರು ಜಿಲ್ಲಾ ಕಾಂಗ್ರೆಸ್ ಆನಂದರಾವ್ ವೃತ್ತದ ಬಳಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಅವರು, ಕೆಲವು ಶಾಸಕರನ್ನು ಅಮಿತ್ ಷಾ ಕಿಡ್ನ್ಯಾಪ್ ಮಾಡಿ ಬಚ್ಚಿಟ್ಟಿದ್ದಾರೆ. ಅವರನ್ನು ಹುಡುಕಿಕೊಡುವಂತೆ ಕುಟುಂಬ ಸದಸ್ಯರು ನ್ಯಾಯಾಲಯಕ್ಕೆ ಎಬಿಎಸ್ ಕಾರ್ಪಸ್ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆಂದು ಹೇಳಿದರು.

ಬಿಜೆಪಿ ರಫಾಯಲ್ ಹಗರಣದಲ್ಲಿ ಸಂಪಾದಿಸಿದ 33 ಸಾವಿರ ಕೋಟಿ ಹಣದಿಂದ ಆಪರೇಷನ್ ಕಮಲ ಮಾಡಲು ಮುಂದಾಗಿದ್ದು, ಶಾಸಕರನ್ನು ಖರೀದಿಸುವ ಮೂಲಕ ರಾಜ್ಯದ ಜನರನ್ನು ಅವಮಾನಿಸಲು ಬಿಜೆಪಿಯ ಅಮಿತ್ ಷಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದರು ಎಂದು ಅವರು ಹರಿಹಾಯ್ದರು.
ನಕಲಿ ಚಾಣಕ್ಯ ಅಮಿತ್ ಷಾ ಅವರು ತಿರುಕನ ಕನಸು ಕಾಣುತ್ತಿದ್ದಾರೆ.ಕರ್ನಾಟಕದ ಸಮ್ಮಿಶ್ರ ಸರ್ಕಾರ ಪತನಗೊಳಿಸುವ ಪ್ರಯತ್ನ ಸಫಲವಾಗಲ್ಲ. ಬಿಜೆಪಿಯ ಆಪರೇಷನ್ ಕಮಲದ ಹಿಂದೆ ಸರ್ಕಾರ ಪತನಗೊಳಿಸುವ ಹುನ್ನಾರದ ಕಾರಣ ಒಂದು ಕಡೆಯಾದರೆ ಮತ್ತೊಂದು ಕಾರಣ ರಫಾಯಲ್ ಹಗರಣದಿಂದ ಜನರ ಗಮನ ಬೇರೆಡೆ ಸೆಳೆಯುವುದಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಅಮಿತ್ ಷಾ ಅವರಿಗೆ ಹಂದಿಜ್ವರ ಬಂದಿದೆ.ಮೊದಲು ಅವರು ಚಿಕಿತ್ಸೆ ಪಡೆದು ಗುಣಮುಖರಾಗಲಿ ಎಂದು ಹರಿಪ್ರಸಾದ್ ಹೇಳಿದರು.
ಸರ್ಕಾರ ಪತನಗೊಳಿಸುವಂತಹ ಪ್ರಯತ್ನ ಕೈ ಬಿಡದಿದ್ದರೆ ಈಗ ಹಂದಿಜ್ವರ ಬಂದಿದೆ.ಮುಂದೆ ವಾಂತಿ-ಭೇದಿ ಬರುತ್ತದೆ ಎಂದು ಶಾಪ ಹಾಕಿದ್ದಾರೆ.ಈ ಹಿಂದೆ ಚುನಾವಣೆಗಳಲ್ಲಿ ಮೇಘಾಲಯ, ಗೋವಾ, ಅರುಣಾಚಲ ಪ್ರದೇಶಗಳಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗಳಿಸಿತ್ತು.ಆದರೆ, ಬಿಜೆಪಿ ತನ್ನ ಕುತಂತ್ರದಿಂದ ಅಲ್ಲಿ ಸರ್ಕಾರ ನಡೆಸಲು ಬಿಡಲಿಲ್ಲ. ಅವರಲ್ಲಿ ರೈತಪರ ಕಾರ್ಯಕ್ರಮಗಳಿಲ್ಲ. ಹಾಗಾಗಿ ಈ ರೀತಿ ಅಪಪ್ರಚಾರ, ಬೇರೆ ಬೇರೆ ತಂತ್ರಗಾರಿಕೆ ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ನಕಲಿ ಎನ್‍ಕೌಂಟರ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್‍ನಿಂದ ಎರಡು ವರ್ಷ ಗುಜರಾತ್‍ನಿಂದ ಗಡಿಪಾರು ಶಿಕ್ಷೆಗೆ ಗುರಿಯಾಗಿದ್ದರು.ಈ ಹಿಂದೆ ಯಾವ ರಾಷ್ಟ್ರೀಯ ಪಕ್ಷದ ಅಧ್ಯಕ್ಷರೂ ಕೂಡ ಇಂತಹ ಕಳಂಕ ಹೊತ್ತುಕೊಂಡಿರಲಿಲ್ಲ. ಆದರೆ, ಅಮಿತ್ ಷಾ ಕಳಂಕಿತರಾಗಿದ್ದರೂ ಸಹ ಮೋದಿಯವರು ಷಾ ಅವರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಮೋದಿ ಅವರು ಸಹ ಕೊಟ್ಟ ಭರವಸೆ ಈಡೇರಿಸದೆ ಜನರ ಗಮನ ಮಾತ್ರ ಸೆಳೆಯುತ್ತಿದ್ದಾರೆ ಎಂದು ದೂರಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ