ಲೋಕಸಭಾ ಚುನಾವಣೆ ಹಿನ್ನಲೆ: ಎಸ್ ಪಿ-ಬಿಎಸ್ ಪಿ ಮೈತ್ರಿ; ಅಧಿಕೃತ ಘೋಷಣೆ

ಲಖನೌ: ಲೋಕಸಭಾ ಚುನಾವಣೆಯಲ್ಲಿ ಎಸ್ ಪಿ ಹಾಗೂ ಬಿಎಸ್ ಪಿ ಪಕ್ಷಗಳ ನಡುವೆ ಮೈತ್ರಿಮಾಡಿಕೊಂಡಿದ್ದು, ಈ ಕುರಿತು ಇಂದು ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಜಂಟಿ ಸುದ್ದಿಗೋಷ್ಠಿ ನಡೆಸಿದ ಎಸ್ ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಹಾಗೂ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ, 25 ವರ್ಷಗಳ ಬಳಿಕ ಮತ್ತೆ ಒಂದಾಗುತ್ತಿರುವುದಾಗಿ ತಿಳಿಸಿದ್ದಾರೆ. ಉತ್ತರ ಪ್ರದೇಶದ ಒಟ್ಟು 80 ಕ್ಷೇತ್ರಗಳಲ್ಲಿ ಎಸ್​ಪಿ ಹಾಗೂ ಬಿಎಸ್​ಪಿ ತಲಾ 38 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ. ಕಾಂಗ್ರೆಸ್​ ಬಲಿಷ್ಠವಾಗಿರುವ ರಾಹುಲ್​ ಗಾಂಧಿಯ ಕ್ಷೇತ್ರ ಅಮೇಠಿ ಮತ್ತು ಸೋನಿಯಾ ಗಾಂಧಿ ಕ್ಷೇತ್ರ ರಾಯ್​ಬರೇಲಿ ಸೇರಿ ಮತ್ತೆರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡದೆ ಇರಲು ನಿರ್ಧರಿಸಿದ್ದಾಗಿ ತಿಳಿಸಿದರು.

1993ರಲ್ಲಿ ಕಾನ್ಶಿರಾಮ್‌ ಹಾಗೂ ಮುಲಾಯಂ ಸಿಂಗ್ ಯಾದವ್ ಒಂದಾಗಿದ್ದರು. ಆದರೆ, ಹಲವು ಕಾರಣಗಳಿಂದಾಗಿ ಮೈತ್ರಿ ಹೆಚ್ಚು ಕಾಲ ಮುಂದುವರಿಯಲಿಲ್ಲ. ಆದರೆ, ಈಗ ಮತ್ತೆ ಒಂದಾಗುತ್ತಿರುವುದಾಗಿ ಮಾಯಾವತಿ ತಿಳಿಸಿದರು. ಅಲ್ಲದೆ, ಇದರಿಂದ ಪ್ರಧಾನಿ ಮೋದಿ ಹಾಗೂ ಅಮಿತ್‌ ಶಾ ಹಲವು ದಿನಗಳ ಕಾಲ ನಿದ್ದೆ ಕಳೆದುಕೊಳ್ಳಲಿದ್ದಾರೆ ಎಂದು ಮಾಯಾವತಿ ಬಿಜೆಪಿ ನಾಯಕರನ್ನು ಅಣಕಿಸಿದರು.

ಕಾಂಗ್ರೆಸ್​ನ ಕೆಲವು ನೀತಿಗಳಿಂದಾಗಿ ನಮ್ಮ ಪಕ್ಷಗಳು ಅಸ್ತಿತ್ವಕ್ಕೆ ಬಂದಿವೆ. ಬಿಜೆಪಿ ಅಥವಾ ಕಾಂಗ್ರೆಸ್​ ಎರಡರಲ್ಲಿ ಯಾವುದು ಅಧಿಕಾರಕ್ಕೆ ಬಂದರೂ ನಮಗೆ ಏನೂ ವ್ಯತ್ಯಾಸವಾಗುವುದಿಲ್ಲ. ಕಾಂಗ್ರೆಸ್​ ಜತೆಗೆ ಮೈತ್ರಿ ಮಾಡಿಕೊಂಡರೆ ನಮಗೆ ಯಾವುದೇ ಲಾಭ ಇಲ್ಲ. ಬಿಎಸ್​ಪಿ, ಎಸ್​ಪಿ ಒಗ್ಗಟ್ಟು ದೇಶದಲ್ಲಿ ಹೊಸ ರಾಜಕೀಯ ಕ್ರಾಂತಿಗೆ ಕಾರಣವಾಗಲಿದೆ ಎಂದು ಹೇಳಿದರು.

ದೇಶದ ಒಳಿತಿಗಾಗಿ ಲಖನೌ ಗೆಸ್ಟ್​ಹೌಸ್​ ಹಗರಣದ ಘಟನೆಯನ್ನು ಮೀರಿ ಮತ್ತೆ ಒಂದಾಗಲು ನಿರ್ಧರಿಸಿದ್ದೇವೆ ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಹೇಳಿಕೆಗೆ ತಿರುಗೇಟು ನೀಡಿದರು. ಎಸ್​ಪಿ, ಬಿಎಸ್​ಪಿ ಮೈತ್ರಿ ಕುರಿತಂತೆ ಪ್ರಧಾನಿ ಮೋದಿಯವರು 1995ರ ಲಖನೌ ಗೆಸ್ಟ್​ಹೌಸ್ ಪ್ರಕರಣ ​ಬಗ್ಗೆ ಮಾತನಾಡಿದ್ದರು. ಆಗ ಮುಲಾಯಂ ಮತ್ತು ಮಾಯಾವತಿ ಮೈತ್ರಿಯನ್ನು ಮುರಿದುಕೊಂಡ ಬಗ್ಗೆ ಹೇಳಿದ್ದರು.

ಕಳೆದ ವರ್ಷ ಉಪಚುನಾವಣೆಯನ್ನು ಬಿಎಸ್​ಪಿ, ಎಸ್​ಪಿ ಒಟ್ಟಾಗಿ ಎದುರಿಸಿ ಗೆದ್ದಿದ್ದೇವೆ. ಕಾಂಗ್ರೆಸ್​ ಕೂಡ ಅದರ ಠೇವಣಿಯನ್ನು ಕಳೆದುಕೊಂಡಿತ್ತು. ಆಗಲೇ ನಮಗೆ ಅರಿವಾಗಿತ್ತು ಬಿಎಸ್​ಪಿ, ಎಸ್​ಪಿ ಒಂದಾದರೆ ಬಿಜೆಪಿಯನ್ನೂ ಸೋಲಿಸಬಹುದು ಎಂಬುದು ಎಂದು ಮಾಯಾವತಿ ತಿಳಿಸಿದರು.

ಇದೇ ವೇಳೆ ಮಾತನಾಡಿದ ಅಖಿಲೇಶ್​ ಯಾದವ್, ಮಾಯಾವತಿ ಅವರಿಗೆ ಯಾವುದೇ ರೀತಿಯಲ್ಲಿ ಅವಮಾನ, ನೋವಾದರೆ ಅದು ನನಗೆ ಆದಂತೆ. ಇದನ್ನು ನನ್ನ ಪಕ್ಷದ ಕಾರ್ಯಕರ್ತರಿಗೂ ತಿಳಿಸಲು ಇಚ್ಛಿಸುತ್ತೇನೆ ಎಂದು ತಿಳಿಸಿದರು.

Lok Sabha Election,SP-BSP,Alliance

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ