ಜ.11 ಮತ್ತು 12 ರಂದು ದೆಹಲಿಯಲ್ಲಿ ಬಿಜೆಪಿ ಪರಿಷತ್ ಸಭೆ ಮತ್ತು 13 ಮತ್ತು 14ರಂದು ರಾಜ್ಯದ ಪ್ರಮುಖರೊಂದಿಗೆ ಸಭೆ ನಡೆಸಲಿರುವ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ

ಬೆಂಗಳೂರು,ಜ.9- ಇದೇ 11 ಮತ್ತು 12ರಂದು ದೆಹಲಿಯಲ್ಲಿ ಬಿಜೆಪಿ ಪರಿಷಪ್ ಸಭೆ ನಡೆಯಲಿದೆ. ನಂತರ ಲೋಕಸಭೆ ಚುನಾವಣೆ ಹಿನ್ನಲೆ ಅಭ್ಯರ್ಥಿಗಳ ಆಯ್ಕೆ, ಕೈಗೊಳ್ಳಬೇಕಾದ ಕಾರ್ಯತಂತ್ರಗಳು ಸೇರಿದಂತೆ ಇತರ ವಿಷಯಗಳ ಬಗ್ಗೆ ಚರ್ಚಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಇದೇ   13 ಮತ್ತು 14ರಂದು ಅಮಿತ್ ಷಾ ರಾಜ್ಯದ ಕೇಂದ್ರ ಸಚಿವರು, ಸಂಸದರು, ರಾಜ್ಯಸಭಾ ಸದಸ್ಯರು, ರಾಜ್ಯ ಉಸ್ತುವಾರಿ, ರಾಜ್ಯ ಘಟಕದ ಅಧ್ಯಕ್ಷರು, ಶಾಸಕರು, ವಿಧಾನಪರಿಷತ್ ಸದಸ್ಯರು, ಸಾಮಾಜಿಕ ಜಾಲತಾಣ ಮುಖ್ಯಸ್ಥರು, ಜಿಲ್ಲಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಪದಾಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.

ಶಿವಮೊಗ್ಗದಲ್ಲಿ ಇಂದು ಈ ಬಗ್ಗೆ ಮಾಹಿತಿ ನೀಡಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಎರಡು ದಿನಗಳ ಕಾಲ ನಡೆಯಲಿರುವ ಈ ಸಭೆಯಲ್ಲಿ ಅಮಿತ್ ಷಾ ಅವರು ಲೋಕಸಭೆ ಚುನಾವಣೆಗೆ ಪಕ್ಷವನ್ನು ಬೇರುಮಟ್ಟದಿಂದ ಸಂಘಟಿಸುವುದು, ಕಾರ್ಯಕರ್ತರನ್ನು ಹುರಿದುಂಬಿಸುವುದು, ಕೇಂದ್ರ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವುದು, ಪ್ರಧಾನಿ ನರೇಂದ್ರ ಮೋದಿಯನ್ನು ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ತರಲು ಕೈಗೊಳ್ಳಬೇಕಾದ ಸಿದ್ದತೆಗಳು, ಅಭ್ಯರ್ಥಿಗಳ ಆಯ್ಕೆ ಮತ್ತಿತರ ವಿಷಯಗಳ ಬಗ್ಗೆ ಸಲಹೆ ನೀಡಲಿದ್ದಾರೆ ಎಂದು ತಿಳಿಸಿದರು.

ಸಮ್ಮಿಶ್ರ ಸರ್ಕಾರದ ಯಾವುದೇ ಅತೃಪ್ತ ಶಾಸಕರು ನಮ್ಮ ಪಕ್ಷದ ಮುಖಂಡರ ಜೊತೆ ಸಂಪರ್ಕದಲ್ಲಿ ಇಲ್ಲ. ತಮ್ಮಲ್ಲಿರುವ ತಪ್ಪುಗಳನ್ನು ಮರೆ ಮಾಚಲು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಇದಕ್ಕೆ ಜನತೆ ಸೊಪ್ಪು ಹಾಕುವುದಿಲ್ಲ ಎಂದು ಹೇಳಿದರು.

ಅನೇಕರು ಇವರ ನಡವಳಿಕೆಗೆ ಬೇಸತ್ತು ಪಕ್ಷ ಬಿಡುವ ತೀರ್ಮಾನಕ್ಕೆ ಬಂದಿದ್ದಾರೆ. ಆದರೆ ಅದನ್ನು ಮರೆಮಾಚಲು ಆಪರೇಷನ್ ಕಮಲ ಎಂಬ ಆರೋಪ ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಸಂಪುಟದಿಂದ ಕೈಬಿಡಿ :
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗ ಶೆಟ್ಟಿ ಅವರ ಆಪ್ತ ಸಹಾಯಕ ಮೋಹನ್‍ಕುಮಾರ್, ಗುತ್ತಿಗೆದಾರರಿಂದ ಸಚಿವರಿಗೆ ಹಣ ಸಂಗ್ರಹಣೆ ಮಾಡಿದ್ದೆ ಎಂದು ಒಪ್ಪಿಕೊಂಡಿದ್ದಾನೆ. ಆತನನ್ನು ಯಾವ ಕಾರಣಕ್ಕಾಗಿ ಸಂಪುಟದಲ್ಲಿ ಮುಂದುವರೆಸಿದ್ದಾರೆ ಎಂಬುದು ಗೊತ್ತಿಲ್ಲ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೂಡಲೇ ಅವರನ್ನು ಸಂಪುಟದಿಂದ ಕೈಬಿಡಬೇಕು. ಒಂದು ವೇಳೆ ಅವರಿಗೆ ಯಾವುದಾದರೂ ಒತ್ತಡವಿದ್ದರೂ ಅದಕ್ಕೆ ಸೊಪ್ಪು ಹಾಕದೆ ಗಟ್ಟಿತನ ತೋರಿಸಲಿ ಎಂದು ಯಡಿಯೂರಪ್ಪ ಆಗ್ರಹಿಸಿದರು.

ಪ್ರಧಾನಿ ನರೇಂದ್ರ ಮೋದಿ ಮೇಲ್ವರ್ಗದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10ರಷ್ಟು ಮೀಸಲಾತಿ ನೀಡಲು ಮುಂದಾಗಿರುವುದು ಅತ್ಯಂತ ಸ್ವಾಗತಾರ್ಹ. ಇದರಿಂದ ಸುಮಾರು 20 ಕೋಟಿ ಜನತೆಗೆ ಲಾಭ ಸಿಗಲಿದೆ. ಎಲ್ಲ ಪಕ್ಷಗಳು  ಈ ಮಸೂದೆಯನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ