ಇಂದು ನಡೆದ ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಿದ ಜೆಡಿಎಸ್ ಪ್ರಮುಕರು

ಬೆಂಗಳೂರು, ಜ.8- ಲೋಕಸಭೆ ಚುನಾವಣೆಗೆ ಪಕ್ಷ ಸಂಘಟನೆ, ಸ್ಥಾನ ಹಂಚಿಕೆ, ಖಾಲಿ ಉಳಿದಿರುವ ಜೆಡಿಎಸ್ ಪಾಲಿನ ಸಚಿವರ ನೇಮಕ, ನಿಗಮ-ಮಂಡಳಿಗಳಿಗೆ ಶಾಸಕರು, ಮಾಜಿ ಶಾಸಕರ ನೇಮಕ, ಪಕ್ಷದ ಪದಾಧಿಕಾರಿಗಳಿಗೆ ಅಧಿಕಾರ ಸೇರಿದಂತೆ ಹಲವು ಮಹತ್ವದ ವಿಷಯಗಳ ಬಗ್ಗೆ ಇಂದು ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಖಾಸಗಿ ಹೊಟೇಲ್‍ನಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸೀಟು ಹಂಚಿಕೆ ಸಂಬಂಧ ಚರ್ಚೆ ನಡೆಸಲಾಯಿತು.

ಲೋಕಸಭೆ ಚುನಾವಣೆ ಜೆಡಿಎಸ್ ಪಾಲಿಗೆ ಅತ್ಯಂತ ಮಹತ್ವದ್ದಾಗಿದ್ದು, ಅತಿ ಹೆಚ್ಚು ಸ್ಥಾನಗಳನ್ನು ಪಕ್ಷ ಗೆಲ್ಲುವ ಅಗತ್ಯವಿದೆ.ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಿ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು.ಈ ನಿಟ್ಟಿನಲ್ಲಿ ಅಗತ್ಯ ರಣತಂತ್ರ ರೂಪಿಸಬೇಕು.ಮೈತ್ರಿಯಲ್ಲಿ ಹೆಚ್ಚು ಸ್ಥಾನಗಳನ್ನು ಪಡೆಯಬೇಕು ಎಂಬ ಬಗ್ಗೆಯೂ ಕೂಡ ಚರ್ಚೆ ನಡೆಸಲಾಗಿದೆ.

ಸಂಪುಟದಲ್ಲಿ ಖಾಲಿ ಇರುವ ಜೆಡಿಎಸ್ ಪಾಲಿನ ಎರಡು ಸ್ಥಾನಗಳಿಗೆ ಯಾರನ್ನು ನೇಮಕ ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆದಿದೆ.

ಸಂಕ್ರಾಂತಿ ನಂತರ ಜೆಡಿಎಸ್ ವತಿಯಿಂದ ನಿಗಮ-ಮಂಡಳಿಗಳಿಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಲಿದ್ದು, ಹಾಲಿ ಶಾಸಕರ ಜತೆ ಹಲವೆಡೆ ಅಲ್ಪ ಮತಗಳಿಂದ ಸೋತ ಶಾಸಕರಿಗೂ ಆದ್ಯತೆ ನೀಡುವ ಬಗ್ಗೆಯೂ ಕೂಡ ಚರ್ಚೆ ನಡೆಸಲಾಯಿತು ಎಂದು ತಿಳಿದುಬಂದಿದೆ.

ಈ ರೀತಿ ಅಧಿಕಾರ ಹಂಚಿಕೆ ಮಾಡುವ ಮೂಲಕ ಮುಂಬರುವ ಲೋಕಸಭೆ ಚುನಾವಣೆಗೆ ಪಕ್ಷವನ್ನು ಪ್ರಬಲವಾಗಿ ಸಂಘಟಿಸುವ ಬಗ್ಗೆ ಮಾತುಕತೆ ಮಾಡಲಾಗಿದೆ ಎನ್ನಲಾಗಿದೆ.

10 ರಿಂದ 12 ಶಾಸಕರಿಗೆ ನಿಗಮ-ಮಂಡಳಿಯಲ್ಲಿ ಅವಕಾಶ ಕಲ್ಪಿಸುವುದರ ಜತೆಗೆ ಇನ್ನುಳಿದ 40 ರಿಂದ 50 ನಿಗಮ-ಮಂಡಳಿಗಳಿಗೆ ಮಾಜಿ ಶಾಸಕರು, ಪರಾಜಿತ ಶಾಸಕರು, ಪಕ್ಷದ ಪದಾಧಿಕಾರಿಗಳಿಗೂ ಏಕಕಾಲದಲ್ಲಿ ಅವಕಾಶ ಕಲ್ಪಿಸುವ ಬಗ್ಗೆಯೂ ಕೂಡ ಚರ್ಚೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಪ್ರಸ್ತುತ ಕಾಂಗ್ರೆಸ್ ಪಕ್ಷದಲ್ಲಿ ಉಂಟಾಗಿರುವ ಭಿನ್ನಮತಕ್ಕೆ ಜೆಡಿಎಸ್ ಹೊಣೆಯಾಗಬಾರದು.ಲೋಕಸಭೆಯಲ್ಲಿ ಹೆಚ್ಚು ಸ್ಥಾನಗಳಲ್ಲಿ ಜಯ ಗಳಿಸುವತ್ತ ಸಿದ್ಧತೆ ಮಾಡಿಕೊಳ್ಳಬೇಕು.ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯ ಎಂಬ ಸೂಚನೆಯನ್ನು ನಾಯಕರು ನೀಡಿದ್ದಾರೆ ಎಂದು ತಿಳಿದುಬಂದಿದೆ.

ಸಚಿವರಾದ ಡಿ.ಸಿ.ತಮ್ಮಣ್ಣ, ಸಾ.ರಾ.ಮಹೇಶ್, ಮುಖಂಡರಾದ ಬಿ.ಬಿ.ನಿಂಗಯ್ಯ, ಟಿ.ಎ.ಶರವಣ, ವೈ.ಎಸ್.ವಿ.ದತ್ತ, ನಾರಾಯಣಸ್ವಾಮಿ, ಜಫ್ರುಲ್ಲಾಖಾನ್, ಶಾಸಕರು, ಸಂಸದರು, ರಾಜ್ಯಸಭಾ ಸದಸ್ಯರು ಪಾಲ್ಗೊಂಡಿದ್ದರು.

ಸಚಿವರ ಆಪ್ತ ಸಹಾಯಕ ತನಿಖಾಧಿಕಾರಿಗಳ ಮುಂದೆ ತಪ್ಪು ಒಪ್ಪಿಕೊಂಡ ಹಿನ್ನಲೆ, ಸಚಿವರನ್ನು ಸಂಪುಟದಿಂದ ಕೈಬಿಡುವಂತೆ ಒತ್ತಾಯಿಸಿದ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ:

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ