ಕಿರು ಅದಿರುಗಳ ಗಣಿಗಾರಿಕೆಗೆ ನಿಯಮಗಳ ಸರಳೀಕರಣಕ್ಕೆ ಹೊಸ ಮಾರ್ಗಸೂಚಿ ರಚನೆ, ಸಚಿವ ರಾಜಶೇಖರ್ ಪಾಟೀಲ್

ಬೆಂಗಳೂರು, ಜ.8- ಕಿರು ಅದಿರುಗಳ ಗಣಿಗಾರಿಕೆಗೆ ನಿಯಮಗಳ ಸರಳೀಕರಣಕ್ಕೆ ಹೊಸ ಮಾರ್ಗಸೂಚಿ ರಚಿಸಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ್ ಪಾಟೀಲ್ ತಿಳಿಸಿದ್ದಾರೆ.

ನಗರದ ಖಾಸಗಿ ಹೊಟೇಲ್‍ನಲ್ಲಿ ಹಮ್ಮಿಕೊಳ್ಳಲಾಗಿದ್ದ ಗ್ರಾನೈಟ್ ಇಂಡಿಯಾ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಿಯಮಗಳ ಸರಳೀಕರಣಕ್ಕೆ ಹೊಸ ಮಾರ್ಗಸೂಚಿ ರಚಿಸುವ ಸಂಬಂಧ ಈಗಾಗಲೇ ನಮ್ಮ ಅಧಿಕಾರಿಗಳ ತಂಡ ತಮಿಳುನಾಡು, ಆಂಧ್ರಪ್ರದೇಶಕ್ಕೆ ತೆರಳಿ ಅಲ್ಲಿಯ ನಿಯಮಾವಳಿಗಳ ಕುರಿತು ಪರಿಶೀಲನೆ ನಡೆಸಿದೆ. ರಾಜಸ್ಥಾನಕ್ಕೂ ಕೂಡಾ ತಂಡ ತೆರಳಲಿದ್ದು, ಅಲ್ಲಿಯ ನಿಯಮಗಳ ಬಗ್ಗೆ ಅಧ್ಯಯನ ನಡೆಸಲಿದ್ದು, ಇವರ ವರದಿ ಆಧರಿಸಿ, ನಿಯಮಗಳನ್ನು ತುಲನೆ ಮಾಡಿ ಸರಳೀಕೃತ ಮಾರ್ಗಸೂಚಿ ರಚಿಸಲಾಗುವುದು ಎಂದರು.

ಚಾಮರಾಜನಗರ, ಶಿರಾ, ದೊಡ್ಡಬಳ್ಳಾಪುರ ಸೇರಿದಂತೆ ಹಲವೆಡೆ ಕಪ್ಪು ಶಿಲೆ, ಪಿಂಕ್ ಮತ್ತು ಗ್ರೇ ಗ್ರಾನೈಟ್‍ಗಳು 1990ರಿಂದಲೂ ಪ್ರಖ್ಯಾತಿಯನ್ನು ಹೊಂದಿದೆ. ಅಲಂಕಾರಿಕ ಶಿಲಾ ದಿಮ್ಮಿಗಳು ವಿದೇಶಕ್ಕೆ ರವಾನೆಯಾಗುತ್ತಿವೆ.

ಗ್ರಾನೈಟ್ ಉದ್ಯಮದಲ್ಲೂ ಕೆಲವು ನಿಯಮಗಳ ಸರಳೀಕರಣಕ್ಕೆ ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಿದರು.

ಅಂದಾಜಿನ ಪ್ರಕಾರ ರಾಜ್ಯದಲ್ಲಿ 798 ಮೀ. ಕ್ಯುಬಿಕ್ ಮೀಟರ್‍ನಷ್ಟು ಅಲಂಕಾರಿಕ ಶಿಲೆಗಳ ನಿಕ್ಷೇಪವಿದೆ.ಗ್ರಾನೈಟ್ ಉದ್ದಿಮೆದಾರರಿಗೆ ಅನುಕೂಲವಾಗುವಂತೆ ಪರಿಸರ ಸ್ನೇಹಿ ಹಾಗೂ ರಾಜ್ಯದ ಬೊಕ್ಕಸಕ್ಕೂ ಆದಾಯ ತರುವ ನಿಟ್ಟಿನಲ್ಲಿ ನಿಯಮಗಳನ್ನು ಸರಳೀಕರಣಗೊಳಿಸುವುದಾಗಿ ತಿಳಿಸಿದರು.

ರಾಜ್ಯದಲ್ಲಿ 450 ಅಲಂಕಾರಿಕ ಶಿಲೆಗಳ ಗಣಿಗಾರಿಕೆಯಿದ್ದು, ಇವುಗಳಲ್ಲಿ 242 ಚಾಲ್ತಿಯಲ್ಲಿವೆ. ಕೆಎಂಎಂಸಿಆರ್ ನಿಯಮದ ಪ್ರಕಾರ ಪಟ್ಟಾ ಜಮೀನಿನಲ್ಲೂ ಗಣಿಗಾರಿಕೆ ನಡೆಯತ್ತಿದೆ.

ಸರ್ಕಾರಿ ಜಮೀನಿನಲ್ಲಿ ಗ್ರಾನೈಟ್ ಗಣಿಗಾರಿಕೆಗೆ ಹರಾಜು ಮೂಲಕ ಅವಕಾಶ ಕಲ್ಪಿಸುವ 2016ಕ್ಕಿಂತಲೂ ಮುಂಚಿನ ನಿಯಮವನ್ನು ಜಾರಿಗೆ ತರುವಂತೆ ಒತ್ತಾಯಗಳು ಕೇಳಿಬಂದಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.

ಅರಣ್ಯ ಇಲಾಖೆಯಿಂದಲೂ ಎನ್‍ಓಸಿ ನೀಡಲು ತೊಂದರೆಯಾಗ್ಠುತ್ತಿದೆ ಎಂಬುದು ಗಮನಕ್ಕೆ ಬಂದಿದೆ.ಈ ಎಲ್ಲದರ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳಲಾಗುವುದಾಗಿ ತಿಳಿಸಿದರು.

ಜ.11ರಂದು ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರ ನೇತೃತ್ವದಲ್ಲಿ ಸಚಿವ ಸಂಪುಟ ಉಪ ಸಮಿತಿ ಸಭೆ ನಡೆಯಲಿದ್ದು, ಇವುಗಳ ಬಗ್ಗೆ ಚರ್ಚಿಸುವುದಾಗಿ ಹೇಳಿದರು.

ಬಳ್ಳಾರಿ ಗಣಿಗಾರಿಕೆಯ ನಂತರ ಸರ್ಕಾರ ನೇರವಾಗಿ ಯಾವುದೇ ಗಣಿಗಾರಿಕೆಗೆ ಅವಕಾಶ ನೀಡಿಲ್ಲ. 12 ಜಿ ಕೆಟಗರಿ ಗಣಿಗಾರಿಕೆಗೆ ಮಾತ್ರ ಹರಾಜು ನಡೆಸಿ ವಿಲೇವಾರಿ ಮಾಡಲಾಗಿದೆ.ರಾಜ್ಯ ಸರ್ಕಾರ ಯಾವುದೇ ಅಕ್ರಮ ಗಣಿಗಾರಿಕೆಗೆ ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ಮರಳು ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಿಲ್ಲ. ಬಿಜೆಪಿ ಶಾಸಕರು ಯಾವ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿದರು ಗೊತ್ತಿಲ್ಲ. ನಿಜಕ್ಕೂ ಸಮಸ್ಯೆ ಇದ್ದರೆ ಪರಿಶೀಲಿಸಿ ಬಗೆಹರಿಸುವುದಾಗಿ ಇದೇ ಸಂದರ್ಭದಲ್ಲಿ ಸಚಿವ ರಾಜಶೇಖರ ಪಾಟೀಲ್ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ