ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ಎಲ್ಲಾ ಪುಡ್ ಬಿಸಿನೆಸ್ ಆಪರೇಟರ್ ಗಳು ಉತ್ತಮ ಗುಣಮಟ್ಟದ ಪದಾರ್ಥಗಳನ್ನು ಉಪಯೋಗಿಸಬೇಕು, ಡಾ.ಹರ್ಷವರ್ಧನ್

ಬೆಂಗಳೂರು, ಜ.7-ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ಫುಡ್ ಬಿಸಿನೆಸ್ ಆಪರೇಟರ್ (ಆಹಾರ ವ್ಯಾಪಾರಿಗಳು)ಅನುಸರಿಸಬೇಕಾದ ಕ್ರಮಗಳನ್ನು ಬಿಬಿಎಂಪಿ ಸಾರ್ವಜನಿಕ ಆರೋಗ್ಯ ಸಂಸ್ಥೆ ಆವರಣದಲ್ಲಿ ಜಾರಿ ಮಾಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಅಂಕಿತ ಅಧಿಕಾರಿ ಡಾ.ಹರ್ಷವರ್ಧನ್, ಉತ್ಪಾದಕರು ಹೊಟೇಲ್, ಬೇಕರಿ, ಕ್ಲಬ್, ಬಾರ್ ಅಂಡ್ ರೆಸ್ಟೋರೆಂಟ್, ಕ್ಯಾಂಟೀನ್, ನ್ಯಾಯಬೆಲೆ ಅಂಗಡಿ, ಸರ್ಕಾರಿ ಮತ್ತು ಸರ್ಕಾರೇತರ ವಸತಿನಿಲಯಗಳಲ್ಲಿ, ಧಾರ್ಮಿಕ ಸ್ಥಳಗಳಲ್ಲಿ ಹಾಗೂ ಆಹಾರ ಪದಾರ್ಥ ವಹಿವಾಟುದಾರರು ಕಡ್ಡಾಯವಾಗಿ ಜನವರಿ 31ರೊಳಗೆ ನೋಂದಣಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಒಂದು ವೇಳೆ ನೋಂದಣಿ ಪಡೆಯದಿದ್ದರೆ 6 ತಿಂಗಳವರೆಗೆ ಸೆರೆವಾಸ, 5 ಲಕ್ಷದವರೆಗೆ ದಂಡ ವಿಧಿಸಲಾಗುವುದು ಎಂದರು.
ಹೊಟೇಲ್ ಬೀದಿ ವ್ಯಾಪಾರಿಗಳು ಇಡ್ಲಿ ತಯಾರಿಸುವಾಗ ಪ್ಲಾಸ್ಟಿಕ್ ಕವರ್‍ಗಳನ್ನು ಬಳಸುವುದು ಹಾನಿಕಾರವಾಗಿರುವುದರಿಂದ ಇದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ತಿಂಡಿ-ತಿನಿಸುಗಳನ್ನು ದಿನಪತ್ರಿಕೆಗಳಿಂದ ಕಟ್ಟಿ ಕೊಡುವುದು ಹಾಗೂ ಮುದ್ರಿತ ಪೇಪರ್ ಬಳಕೆಯನ್ನು ನಿಷೇಧಿಸಲಾಗಿದೆ. ಎಲ್ಲಾ ಫುಡ್ ಬಿಸಿನೆಸ್ ಆಪರೇಟರ್‍ಗಳು ಉತ್ತಮ ಗುಣಮಟ್ಟದ (ಎಫ್‍ಎಸ್‍ಎಸ್‍ಎ/ ಐಎಸ್‍ಐ ಪರವಾನಿ ಹೊಂದಿರುವಂತಹ)ಪದಾರ್ಥಗಳನ್ನು ಉಪಯೋಗಿಸಬೇಕು.
ಆಹಾರ ತಯಾರಿಕೆಯಲ್ಲಿ ಕಾರ್ಯನಿರತ ಎಲ್ಲ ನೌಕರರು ಪ್ರತಿ ತಿಂಗಳಿಗೊಮ್ಮೆ ವೈದ್ಯಕೀಯ ತಪಾಸಣೆ ಮಾಡಿಸಿ ನಿರ್ದಿಷ್ಟ ಪ್ರಮಾಣಪತ್ರ ಪಡೆಯಬೇಕು.ಅದನ್ನು ಪರೀವೀಕ್ಷಣೆ ಪರೀಕ್ಷೆ ಸಮಯದಲ್ಲಿ ಹಾಜರುಪಡಿಸಬೇಕು ಎಂದು ತಿಳಿಸಿದರು.
ಈ ಎಲ್ಲವನ್ನು ಅನುಸರಿಸದಿದ್ದರೆ ಕಾನೂನು ಅಪರಾಧವಾಗುತ್ತದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಂಕಿತ ಅಧಿಕಾರಿಗಳಾದ ಡಾ.ಶ್ರೀನಿವಾಸ್, ಡಾ.ಎಂ.ಎಸ್.ಮಮತಾ, ಡಾ.ಮಹೇಶ್, ಡಾ.ನಂದಿ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ