ಹೊಸ ವರ್ಷದ ಆರಂಭದಲ್ಲಿ ಹೆಚ್ಚಾದ ಚಳಿಯ ಪ್ರಮಾಣ

ಬೆಂಗಳೂರು, ಜ.1- ನೂತನ ವರ್ಷ ಆರಂಭದಲ್ಲಿ ಚಳಿಯ ಪ್ರಮಾಣ ಹೆಚ್ಚಾಗತೊಡಗಿದೆ. ಕಳೆದೆರಡು ದಿನಗಳಿಂದಲೂ ರಾಜ್ಯದ ಕನಿಷ್ಠ ತಾಪಮಾನದಲ್ಲಿ ಗಣನೀಯವಾಗಿ ಇಳಿಕೆಯಾಗಿದ್ದು, ಕೆಲವು ಕಡೆಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದ ಚಳಿ ಕಂಡುಬಂದಿದೆ.

ಮೋಡ ಕವಿದ ವಾತಾವರಣ ಇಲ್ಲದಿರುವುದರಿಂದ ಚಳಿಯ ಪ್ರಮಾಣ ಹೆಚ್ಚಾಗಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ ರೆಡ್ಡಿ ತಿಳಿಸಿದರು.

ಸಂಕ್ರಾಂತಿಯವರೆಗೂ ಎರಡು ವಾರಗಳ ಕಾಲ ಇದೇ ರೀತಿಯ ಚಳಿ ಮುಂದುವರೆಯಲಿದೆ. ಕನಿಷ್ಠ ತಾಪಮಾನದಲ್ಲೂ ಒಂದೆರಡು ಡಿಗ್ರಿ ಸೆಲ್ಸಿಯಸ್‍ನಷ್ಟು ವ್ಯತ್ಯಾಸ ಕಂಡುಬರಲಿದೆ.

ಸದ್ಯಕ್ಕೆ ವಾತಾವರಣದಲ್ಲಿ ಮಳೆ ಅಥವಾ ಮೋಡ ಆವರಿಸುವಂತಹ ಪರಿಸ್ಥಿತಿ ಇಲ್ಲ.ಹೀಗಾಗಿ ಹಗಲು ವೇಳೆ ಬಿಸಿಲು ಹಾಗೂ ರಾತ್ರಿ ವೇಳೆ ಚಳಿಯ ಪ್ರಮಾಣ ಹೆಚ್ಚಾಗಿರಲಿದೆ.

ಮೋಡ ಕವಿದ ವಾತಾವರಣವಿದ್ದಾಗ ಉಷ್ಣಾಂಶವನ್ನು ಹಿಡಿದಿಡುತ್ತದೆ. ಆಗ ಕನಿಷ್ಠ ತಾಪಮಾನದಲ್ಲಿ ಏರಿಕೆ ಕಂಡುಬಂದು ಚಳಿಯ ಪ್ರಮಾಣ ಕಡಿಮೆ ಇರುತ್ತದೆ ಎಂದು ಹೇಳಿದರು.

ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ರಾಜ್ಯದಲ್ಲಿ ಕನಿಷ್ಠ ತಾಪಮಾನ ಸರಾಸರಿ 15 ಡಿಗ್ರಿ ಸೆಲ್ಸಿಯಸ್‍ಗಿಂತ ಕಡಿಮೆ ಇದೆ. ಅದರಲ್ಲೂ ಹೈದಾಬಾದ್ ಕರ್ನಾಟಕ ಭಾಗದಲ್ಲಿ ಕನಿಷ್ಠ 10 ಡಿಗ್ರಿ ಸೆಲ್ಸಿಯಸ್‍ಗಿಂತ ಕಡಿಮೆ ಕಂಡುಬಂದಿದೆ.

ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ 9ರಿಂದ 13 ಡಿಗ್ರಿ ಸೆಲ್ಸಿಯಸ್‍ವರೆಗೂ ಕನಿಷ್ಠ ತಾಪಮಾನ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ