ತೀವ್ರ ಕುತೂಹಲ ಮೂಡಿಸಿರುವ ಬಿಬಿಎಂಪಿ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ

ಬೆಂಗಳೂರು,ಜ.1-ಬಿಬಿಎಂಪಿ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ ತೀವ್ರ ಕುತೂಲಹ ಮೂಡಿಸಿದ್ದು, ಇಬ್ಬರು ಅಧ್ಯಕ್ಷ ಆಕಾಂಕ್ಷಿಗಳಿಗೆ ಸ್ಥಾನ ಕೈತಪ್ಪುವ ಸಾಧ್ಯತೆ ದಟ್ಟವಾಗಿದೆ.

ಜೆಡಿಎಸ್‍ನ ಇಬ್ಬರು ಪಾಲಿಕೆ ಸದಸ್ಯರು ಪಕ್ಷದ ವಿರುದ್ಧವೇ ತಿರುಗಿ ಬಿದ್ದಿದ್ದು, ಬಿಜೆಪಿ ಕಮಲ ಮುಡಿಯಲು ಹಾತೊರೆಯುತ್ತಿದ್ದಾರೆ.
ತಾವು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಸ್ಥಾಯಿ ಸಮಿತಿ ಅಧ್ಯಕ್ಷ ಗದ್ದುಗೆ ಗಿಟ್ಟಿಸಲು ಇನ್ನಿಲ್ಲದ ತಂತ್ರ ರೂಪಿಸಿದ್ದಾರೆ.

ಪ್ರಸ್ತುತ ವಾರ್ಡ್ ಮಟ್ಟದ ಕಾಮಗಾರಿ ಸ್ಥಾಯಿಸಮಿತಿಯಲ್ಲಿ ಒಟ್ಟು 11 ಸದಸ್ಯರ ಪೈಕಿ ಐವರು ಬಿಜೆಪಿ ಹಾಗೂ 6 ಮಂದಿ ಕಾಂಗ್ರೆಸ್, ಜೆಡಿಎಸ್ ಸದಸ್ಯರಿದ್ದಾರೆ. ಈಗಾಗಲೇ ಉಮೇ ಸಲ್ಮಾ ಹೆಸರನ್ನು ವಾರ್ಡ್ ಮಟ್ಟದ ಕಾಮಗಾರಿ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಸೂಚಿಸಲಾಗಿದೆ.

ಆದರೆ ಜೆಡಿಎಸ್‍ನ ದೇವದಾಸ್ ಪಕ್ಷದ ವಿರುದ್ಧವೇ ಬಂಡಾಯವೆದ್ದು ಬಿಜೆಪಿ ಬೆಂಬಲದೊಂದಿಗೆ ತಾವು ಸದರಿ ಸಮಿತಿಯ ಅಧ್ಯಕ್ಷ ಸ್ಥಾನ ಗೆಲ್ಲಲು ಮುಂದಾಗಿದ್ದಾರೆ. ಹಾಗೇನಾದರೂ ಆಗಿದ್ದೇ ಆದಲ್ಲಿ ಉಮೇ ಸಲ್ಮಾ ಅವರಿಗೆ ಅಧ್ಯಕ್ಷ ಸ್ಥಾನ ಕೈ ತಪ್ಪಲಿದೆ.

ಇನ್ನು ಸಾಮಾಜಿಕ ನ್ಯಾಯ ಸಮಿತಿಯಲ್ಲೂ ಇದೇ ಸ್ಥಿತಿ. ಇಲ್ಲಿ ಶಾಂತಿನಗರ ವಾರ್ಡ್‍ನ ಸೌಮ್ಯಾ ಶಿವಕುಮಾರ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಸೂಚಿಸಲಾಗಿದೆ. ಆದರೆ ಇಲ್ಲಿ ಜೆಡಿಎಸ್‍ನ ಮಂಜುಳಾ ನಾರಾಯಣಸ್ವಾಮಿ ಬಂಡೆದಿರುವುದು ಸೌಮ್ಯಾ ಅವರ ಅಧ್ಯಕ್ಷ ಸ್ಥಾನದ ಆಸೆಗೆ ಕುತ್ತು ತರುವ ಸಾಧ್ಯತೆ ಹೆಚ್ಚಾಗಿದೆ.

ಒಟ್ಟಾರೆ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಈ ನಡುವೆ ಇಬ್ಬರು ಅತೃಪ್ತ ಮನವೊಲಿಕೆಗೆ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಮಾತುಕತೆ ಯಶಸ್ವಿಯಾದರೆ ಎಲ್ಲವೂ ಸಲೀಸು.. ಇಲ್ಲವಾದರೆ ಮತ್ತದೇ ಸರ್ಕಸ್ಸು..

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ