ಹಿರಿಯ ನಟ ಖಾದರ್ ಖಾನ್ ಇನ್ನಿಲ್ಲ

ಮುಂಬೈ: ಬಾಲಿವುಡ್ ನ ಹಿರಿಯ ನಟ ಖಾದರ್ ಖಾನ್ ಡಿಸೆಂಬರ್ 31ರ ಸಂಜೆ 6 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ. ಇವರು ವಯೋಸಹಜ ಮತ್ತು ಉಸಿರಾಟದ ತೊಂದರೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.

ನಮ್ಮ ತಂದೆ ನಮ್ಮನ್ನು ಅಗಲಿ ಬಾರದ ಲೋಕಕ್ಕೆ ತೆರಳಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಕೆನಾಡದ ಆಸ್ಪತ್ರೆಯಲ್ಲಿ ಕಳೆದ ಕೆಲ ದಿನಗಳಿಂದ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರು. ತಂದೆಯವರ ಅಂತ್ಯಕ್ರಿಯೆಯನ್ನು ಕೆನಾಡದಲ್ಲಿ ನಡೆಸಲು ಕುಟುಂಬಸ್ಥರೆಲ್ಲರು ತೀರ್ಮಾನಿಸಿದ್ದೇವೆ. ನಮ್ಮ ತಂದೆ ಆರೋಗ್ಯ ವೃದ್ಧಿಯಾಗಲೆಂದು ದೇಶಾದ್ಯಂತ ಅಭಿಮಾನಿಗಳು ಪ್ರಾರ್ಥನೆಯಲ್ಲಿ ತೊಡಗಿಕೊಂಡಿದ್ದರು. ತಂದೆಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದು ಖಾದರ್ ಖಾನ್ ಪುತ್ರ ಸರ್ಫರಾಜ್ ತಿಳಿಸಿದ್ದಾರೆ.

ಖಾದರ್ ಖಾನ್ ಕಾಬೂಲ್ ನಲ್ಲಿ ಜನಿಸಿದ್ದು, 1973ರಲ್ಲಿ ತೆರೆಕಂಡ ರಾಜೇಶ್ ಖನ್ನಾ ನಟನೆಯ ದಾಗ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಇದೂವರೆಗೂ 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಖಾದರ್ ಖಾನ್ ಕೆಲವು ಚಿತ್ರಗಳಿಗೆ ಸಂಭಾಷಣೆಯನ್ನು ಬರೆದಿದ್ದಾರೆ.

ಧರಮ್ ವೀರ್, ಗಂಗಾ ಜಮುನಾ ಸರಸ್ವತಿ, ಕೂಲಿ, ದೇಶ್ ಪ್ರೇಮಿ, ಸುಹಾಗ್, ಪರವರೀಶ್, ಶರಾಬಿ, ಜ್ವಾಲಾಮುಖಿ, ಅಮರ್ ಅಕ್ಬರ್ ಆಂಥೋಣಿ, ಲಾವಾರಿಶ್, ಮುಖಾದರ್ ಕಿ ಸಿಕಂದರ್ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ