ಸಮ್ಮಿಶ್ರ ಸರ್ಕಾರಕ್ಕೆ ಭರ್ಜರಿ ಏಟು ಕೊಡಲು ಸಜ್ಜಾದ ಬಿಜೆಪಿ

ಬೆಂಗಳೂರು,ಡಿ.31- ಹೊಸ ವರ್ಷಾಚರಣೆ ಸಂಭ್ರಮದ ಹೊಸ್ತಿಲಲ್ಲಿರುವ ಸಂದರ್ಭದಲ್ಲೇ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಭರ್ಜರಿ ಏಟು ಕೊಡಲು ಬಿಜೆಪಿ ಸಜ್ಜಾಗಿದೆ.

ಸಚಿವ ಸಂಪುಟ ವಿಸ್ತರಣೆಯ ನಂತರ ಕಾಂಗ್ರೆಸ್ ವಿರುದ್ಧ ತೊಡೆ ತಟ್ಟಿರುವ ಶಾಸಕ ರಮೇಶ್ ಜಾರಕಿಹೊಳಿ ಸರ್ಕಾರವನ್ನು ಅಸ್ಥಿರಗೊಳಿಸುವ ಪಯತ್ನಕ್ಕೆ ಕೈ ಹಾಕಿದ್ದಾರೆ. ಅವರ ಜೊತೆ ಸಂಪುಟದಿಂದ ಕೋಕ್ ಪಡೆದಿರುವ ಮಾಜಿ ಸಚಿವ ಆರ್.ಶಂಕರ್, ಶಾಸಕ ಬಿ.ನಾಗೇಂದ್ರ ಕೈ ಜೋಡಿಸಿದ್ದಾರೆ.

ಕೇಂದ್ರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನು ಭೇಟಿ ಮಾಡಲು ರಹಸ್ಯ ಸ್ಥಳದಲ್ಲಿರುವ ಈ ಮೂವರು, ಕಾಂಗ್ರೆಸ್‍ನಲ್ಲಿ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಅತೃಪ್ತ ಶಾಸಕರನ್ನು ಒಗ್ಗೂಡಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ.
ಕಾಂಗ್ರೆಸ್ ನಾಯಕರಿಂದ ಬಹುದೂರ ಸರಿದಿರುವ ಇವರು, ಈ ಬಾರಿ ತಕ್ಕ ಪಾಠ ಕಲಿಸಲೇಬೇಕೆಂಬ ಹಠಕ್ಕೆ ಬಿದ್ದಿದ್ದಾರೆ. ಇದಕ್ಕೆ ಕೆಲವು ಪ್ರಭಾವಿಗಳು ಕೂಡ ಕೈ ಜೋಡಿಸಿದ್ದಾರೆ ಎಂಬ ಮಾತು ಕೇಳಿಬಂದಿದೆ.

ಇನ್ನು ಮಾಜಿ ಸಿಎಂ ಯಡಿಯೂರಪ್ಪ ಮತ್ತು ರಮೇಶ್ ಜಾರಕಿಹೊಳಿ ಅವರೊಂದಿಗೆ ಕೆಲ ಶಾಸಕರು ಕೂಡ ದೆಹಲಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ. ಲೋಕಸಭಾ ಚುನಾವಣೆಗೆ ಮುನ್ನ ರಾಜ್ಯದಲ್ಲಿ ಮತ್ತೆ ಅಧಿಕಾರದ ಗದ್ದುಗೆ ಹಿಡಿಯಲು ತೆರೆ ಮರೆ ಪಯತ್ನದಲ್ಲಿರುವ ಬಿಜೆಪಿಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದರೆ ಆಪರೇಷನ್ ಕಮಲ ನಡೆಯಲಿದೆ ಎನ್ನಲಾಗುತ್ತಿದೆ.

ಬಿಜೆಪಿ ರಾಷ್ಟ್ರಾಧ್ಯಕ್ಷರೊಂದಿಗಿನ ಚರ್ಚೆಯ ಬಳಿಕ ಕಾಂಗ್ರೆಸ್ ನಾಯಕ ರಮೇಶ್ ಜಾರಕಿಹೊಳಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ.
ರಮೇಶ್ ನಡವಳಿಕೆಗಳನ್ನು ಗಮನಿಸಿದರೆ ಪಕ್ಷಕ್ಕೆ ಭಾರೀ ಶಾಕ್ ನೀಡಲು ರಮೇಶ್ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕರಲ್ಲೇ ಅನುಮಾನ ಮೂಡಿದೆ.

15 ಶಾಸಕರು ಸಹಿ:
ರಮೇಶ್ ಜಾರಕಿಹೊಳಿ ಅವರು ಅತೃಪ್ತ 15 ಶಾಸಕರಿಂದ ಸಹಿ ಹಾಕಿಸಿಕೊಂಡು ದೆಹಲಿ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದೆ. ನಾಲ್ಕು ದಿನ ಕಾದು ನೋಡಿ ಎಂದಿದ್ದ ರಮೇಶ್ ಜಾರಕಿಹೊಳಿ ಅವರ ನಡೆ ಈಗ ತೀವ್ರ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ. ಈ ಹಿಂದೆ ಆಪರೇಷನ್‍ನ ಎಲ್ಲ ಮಾಹಿತಿಗಳನ್ನ ಮಾಧ್ಯಮಗಳಿಗೆ ಬಿಚ್ಚಿಟ್ಟು ಅತೃಪ್ತ ಶಾಸಕರ ಕಾರ್ಯತಂತ್ರ ಕೈಕೊಟ್ಟಿತು.

ಹೀಗಾಗಿಯೇ ಈ ಬಾರಿ ನಿಗೂಢ ನಡೆಯ ಮೂಲಕ ಕಾರ್ಯಾಚರಣೆಗೆ ಇಳಿದಿದೆ ಎನ್ನಲಾಗಿದೆ.ಮಾಜಿ ಸಿಎಂ ಸಿದ್ದರಾಮಯ್ಯ ರಮೇಶ್ ಜಾರಕಿಹೊಳಿ ಅವರನ್ನು ಮಾತುಕತೆಗೆ ಆಹ್ವಾನಿಸಿದ್ದರು.ಆದರೆ ಅದನ್ನು ಧಿಕ್ಕರಿಸಿ ಬೆಳಗಾವಿಗೆ ಪ್ರಯಾಣಿಸಿದ್ದರು.

ಕಾಂಗ್ರೆಸ್‍ನಲ್ಲಿ ಹೆಚ್ಚಿದ ಆತಂಕ:
ಸಂಪುಟದಿಂದ ಕೈಬಿಟ್ಟ ಬಳಿಕ ನಿಗೂಢ ನಡೆ ಅನುಸರಿಸುತ್ತಿರುವ ಶಾಸಕ ರಮೇಶ್ ಜಾರಕಿಹೊಳಿ ಅವರು 9 ದಿನ ಕಳೆದರೂ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ರಮೇಶ್ ಅವರ ಈ ನಿಗೂಢ ನಡೆ ಮೈತ್ರಿ ಸರ್ಕಾರದ ನಿದ್ದೆಗೆಡಿಸುತ್ತಿದೆ ಎನ್ನಲಾಗುತ್ತಿದೆ.

ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಸತೀಶ್‍ಜಾರಕಿಹೊಳಿ ಸೇರಿದಂತೆ ಹಿರಿಯ ಮುಖಂಡರೆಲ್ಲರೂ ಎಷ್ಟೇ ಪ್ರಯತ್ನಿಸಿದರೂ ರಮೇಶ್ ಸಂಪರ್ಕ ಮಾತ್ರ ಸಾಧ್ಯವಾಗುತ್ತಿಲ್ಲ. ಅಲ್ಲದೆ ರಾಜಧಾನಿ ದೆಹಲಿಯಲ್ಲಿ ರಮೇಶ್ ಜಾರಕಿಹೊಳಿ ಬೀಡು ಬಿಟ್ಟಿದ್ದಾರೆ.ಅತೃಪ್ತ ಕಾಂಗ್ರೆಸ್ ಶಾಸಕರಿಗೆ ಗಾಳ ಹಾಕುತ್ತಿದ್ದಾರೆ.ಕೇಂದ್ರದಲ್ಲಿರುವ ಬಿಜೆಪಿಯ ಹಿರಿಯ ನಾಯಕರು ಕೂಡ ರಮೇಶ್ ಜಾರಕಿಹೊಳಿ ಅವರಿಗೆ ಸಾಥ್ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು ಈ ಸಂಬಂಧ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಕೇಳಿದ್ರೆ, ಯಾರೂ ಪಕ್ಷ ಬಿಡಲ್ಲ. ರಮೇಶ್ ಜಾರಕಿಹೊಳಿ ಅವರು ವೈಯಕ್ತಿಕ ಕೆಲಸಕ್ಕೆ ತೆರಳಿದ್ದಾರೆ ಎನ್ನುತ್ತಾರೆ.

ರಮೇಶ್ ಜಾರಕಿಹೊಳಿ ಅವರ ಸಂಪರ್ಕಕ್ಕಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಉದ್ಯಮಿ ಲಖನ್ ಜಾರಕಿಹೊಳಿ ಮೊರೆ ಹೋದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಸಚಿವ ಸತೀಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಹಾಗೂ ಲಖನ್ ಜಾರಕಿಹೊಳಿ ಅವರಿಗೆ ರಮೇಶ್ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ ಎನ್ನಲಾಗಿದೆ.

ರಮೇಶ್ ಜಾರಕಿಹೊಳಿ ತಂತ್ರವನ್ನು ವಿಫಲಗೊಳಿಸಲು ಮುಂದಾಗಿರುವ ಸಚಿವ ಸತೀಶ್ ಜಾರಕಿಹೊಳಿ ಅವರು ರಮೇಶ್ ಅವರ ಜತೆಗಿದ್ದ ಆಪ್ತ ಶಾಸಕರನ್ನು ಖುದ್ದು ಭೇಟಿ ಮಾಡುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಜತೆಗೆ ಸೇರಿ ಪಕ್ಷ ಬಿಡದಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಸಹೋದರರು ರೂಪಿಸುತ್ತಿರುವ ತಂತ್ರ-ಪ್ರತಿತಂತ್ರದಲ್ಲಿ ಯಶಸ್ಸು ಯಾರಿಗೆ ದೊರೆಯಲಿದೆ ಎಂಬುವುದು ಸದ್ಯದ ಕುತೂಹಲವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ