ಡಿ.31ರಿಂದ ಜ.13ರವರೆಗೆ ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ಅತಿರುದ್ರ ಮಹಾಯಾಗ ಮತ್ತು ಶತಚಂಡಿಕಾ ಮಹಾಯಾಗ

ಬೆಂಗಳೂರು, ಡಿ.30-ನಗರದ ಮಹಾಲಕ್ಷ್ಮಿಪುರಂ ಎರಡನೇ ಹಂತ, ಐದನೇ ಮುಖ್ಯರಸ್ತೆ, 12ನೇ ಅಡ್ಡರಸ್ತೆಯಲ್ಲಿರುವ ಶ್ರೀ ಮಂಜುನಾಥೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ನಾಳೆ (ಡಿ.31)ಯಿಂದ ಜನವರಿ 13ರವರೆಗೆ ಅತಿರುದ್ರ ಮಹಾಯಾಗ ಹಾಗೂ ಶತಚಂಡಿಕಾ ಮಹಾಯಾಗ ಆಯೋಜಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಸಕಲ ಜೀವರಾಶಿಗಳ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮ, ತಾಪತ್ರಯ, ಯುದ್ಧ ಭೀತಿ, ಉದ್ಯಮ ಕ್ಷೇತ್ರದ ದೋಷಗಳು ಮತ್ತಿತರ ದೋಷಗಳ ನಿವಾರಣೆಗಾಗಿ ಅತಿರುದ್ರಮಹಾಯಾಗ ಮತ್ತು ಶತಚಂಡಿಕಾ ಮಹಾಯಾಗವನ್ನು ನೆರವೇರಿಸಲಾಗುತ್ತಿದೆ ಎಂದು ಶ್ರೀ ಮಂಜುನಾಥೇಶ್ವರ ಸ್ವಾಮಿ ದೇವಸ್ಥಾನದ ಛೇರ್ಮನ್ ಎಚ್.ಎಸ್.ಶಿವಲಿಂಗಯ್ಯ, ಪ್ರಧಾನ ಅರ್ಚಕ ಎಸ್.ರಾಮಚಂದ್ರ ಜೋಯಿಸ್ ಅವರು ತಿಳಿಸಿದ್ದಾರೆ.

ದೇಶದ ಮೂಲೆ ಮೂಲೆಗಳಿಂದ 250ಕ್ಕೂ ಹೆಚ್ಚು ವೇದ ವಿದ್ವಾಂಸರುಗಳು ಆಗಮಿಸುತ್ತಿದ್ದಾರೆ.ಶೃಂಗೇರಿ ಜಗದ್ಗುರುಗಳಾದ ಶ್ರೀ ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಸ್ವಾಮೀಜಿ ಮತ್ತು ಶ್ರೀಮದ್ ಜಗದ್ಗುರು ಶ್ರೀ ವಿದುಶೇಖರ ಭಾರತೀ ಸ್ವಾಮೀಜಿ ಅವರ ಅನುಗ್ರಹ ಹಾಗೂ ಭಕ್ತರ ಸೇವಾ ಸಹಕಾರದಿಂದ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ.

ನಾಳೆ ವಾಸ್ತುರಾಕ್ಷೋಘ್ನ ಹೋಮ ವೇದಪಾರಾಯಣ, ಜ.1 ರಂದು ಸಹಸ್ರಮೋದಕ ಗಣಪತಿ ಹೋಮ, ಜ.2 ರಂದು ಪವಮಾನ ಹೋಮ, ಜ.3 ರಂದು ಮೇಧಾದಕ್ಷಿಣಾಮೂರ್ತಿ(ವಿದ್ಯಾ ಅನುಗ್ರಹಕ್ಕಾಗಿ) ಹೋಮ, ಜ.4 ರಂದು ಲಕ್ಷ್ಮಿನಾರಾಯಣ ಹೃದಯ ಹೋಮ, ಜ.5 ರಂದು ನವಗ್ರಹ ಸಹಿತ ಮಹಾ ಮೃತ್ಯುಂಜಯ ಹೋಮ, ಜ.6 ರಂದು ಧನ್ವಂತರಿ (ಆರೋಗ್ಯಕ್ಕಾಗಿ) ಹೋಮ, ಜ.7 ರಂದು ಮಹಾ ಸುದರ್ಶನ ಹೋಮ, ಜ.8 ರಂದು ಸುಬ್ರಹ್ಮಣ್ಯ ಮತ್ತು ಸರ್ಪಶಾಂತಿ ಹೋಮ, ಜ.9 ರಂದು ಲಕ್ಷ್ಮೀನೃಸಿಂಹ ಹೋಮ, ಜ.10 ರಂದು ದತ್ತಮಾಲಾ (ದತ್ತಾತ್ರೇಯ) ಹೋಮ, ಜ.11 ರಂದು ಸ್ವಯಂವರ ಪಾರ್ವತಿ ಹೋಮ, ಜ.12 ರಂದು ಶ್ರೀರಾಮತಾರಕ ಹೋಮ, ಜ.13 ರಂದು ಶತಚಂಡಿಕಾ ಯಾಗ, ಅತಿರುದ್ರ ಮಹಾಯಾಗ ನಡೆಯಲಿದ್ದು, ಪ್ರತಿದಿನ ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗವಿರುತ್ತದೆ.

ಹೆಚ್ಚಿನ ವಿವರಗಳಿಗೆ ಆಧ್ಯಾತ್ಮಿಕ ಚಿಂತಕರು, ಜ್ಯೋತಿಷ್ಯರಾದ ಡಾ.ಎಸ್.ನಾಗೇಂದ್ರ ಜೋಯಿಸ್ ಅವರನ್ನು ಮೊ.9900001414 ಅಥವಾ 9880344850 ಗೆ ಸಂಪರ್ಕಿಸಬಹುದಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ