ಡಾ.ರಾಜ್ ಕುಮಾರ್ ಅವರ ವ್ಯಕ್ತಿತ್ವ ಮಾತಿನ ರೂಪಕವನ್ನು ಮೀರಿದ್ದು, ಸಾಹಿತಿ ಬರಗೂರು ಚಂದ್ರಪ್ಪ

ಬೆಂಗಳೂರು,ಡಿ.30- ಡಾ.ರಾಜ್‍ಕುಮಾರ್ ಅವರ ವ್ಯಕ್ತಿತ್ವ ಮಾತಿನ ರೂಪಕವನ್ನು ಮೀರಿದ್ದಾಗಿದೆ. ಅವರು ನಟಿಸಿರುವ ಚಲನಚಿತ್ರಗಳ ಕುರಿತು ಸಮಗ್ರ ವಿಮರ್ಶೆಯಾಗಬೇಕಿದೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಕಸಾಪದ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಧನಪ್ರಕಾಶನದ ವತಿಯಿಂದ ನಡೆದ ನಾಡೋಜ ಬರಗೂರು ರಾಮಚಂದ್ರಪ್ಪ ವಿರಚಿತ ಜನಪದ ಗಾಯಕ ಡಾ.ರಾಜ್‍ಕುಮಾರ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ಚಿತ್ರರಂಗದ ನಿಜವಾದ ಕುಲಪತಿ ಡಾ.ರಾಜ್‍ಕುಮಾರ್ ಎಂದು ಬಣ್ಣಿಸಿದರು.

ಡಾ.ರಾಜ್‍ಕುಮಾರ್ ಅವರ ಬಗ್ಗೆ ಕೃತಿಗಳು ಹೊರಬಂದಿರುವಷ್ಟು ಬೇರೆ ಯಾರ ಬಗ್ಗೆಯೂ ಬಂದಿಲ್ಲ. ಇವರು ಕನ್ನಡಪರ ಹೋರಾಟಗಾರರಾಗಿ, ನಟರಾಗಿ ಸಾಮಾಜಿಕ ಕಳಕಳಿಯ ವ್ಯಕ್ತಿತ್ವವುಳ್ಳವರಾಗಿ ಎತ್ತರಕ್ಕೆ ಬೆಳೆದವರು. ಆದರೂ ತಾನು ಅದೇನೂ ಅಲ್ಲವೇ ಅಲ್ಲ ಎಂಬಂತೆ ಸರಳಸಜ್ಜನಿಕೆಯಿಂದ ಬದುಕಿದರು ಎಂದು ಸ್ಮರಿಸಿದರು.

ಇವರು ವಿದ್ಯಾಂತರಾಗದಿದ್ದರೂ ಅಸಮಾನ್ಯವಾದ ಸಾಧನೆಯನ್ನು ಮಾಡುವ ಮೂಲಕ ಎಲ್ಲರ ಮನದಲ್ಲಿ ನೆಲೆಯೂರಿದ್ದಾರೆ.ಇವರೊಬ್ಬ ಬೆವರಿನ ಮನುಷ್ಯ ಎಂದು ಕರೆಯಬಹುದಾಗಿದೆ.ಬೆವರಿಗೆ ಬಂಗಾರದ ಬೆಲೆ ತಂದುಕೊಟ್ಟವರು ಎಂದು ಹೊಗಳಿದರು.
ಇಂತಹ ಮಹಾನ್ ವ್ಯಕ್ತಿಯ ಬಗ್ಗೆ ಬರೆಯುವುದು ಹಾಗೂ ಮಾತನಾಡುವುದು ನಮ್ಮ ಕರ್ತವ್ಯ ಎಂದೇ ಭಾವಿಸಿದ್ದೇನೆ.ಹಾಗಾಗಿ ಪುಸ್ತಕ ರೂಪದಲ್ಲಿ ಇವರಿಗೆ ನನ್ನ ಒಂದು ಚಿಕ್ಕ ಕೊಡುಗೆ ನೀಡಿರುವುದಾಗಿ ತಿಳಿಸಿದರು.

ವಿಮರ್ಶಕ ಡಾ.ರಾಘವೇಂದ್ರ ರಾವ್ ಮಾತನಾಡಿ, ಡಾ.ರಾಜ್‍ಕುಮಾರ್ ಅವರು ಎಲ್ಲರನ್ನೂ ಸಮಾನಭಾವದಿಂದ ನೋಡುತ್ತಿದ್ದರು.ಅತ್ಯಂತ ಚಿಕ್ಕವರನ್ನು ಕೂಡ ಪ್ರೀತಿ, ಗೌರವ ಆಧರಗಳಿಂದ ಕಾಣುತ್ತಿದ್ದರು.ಅವರ ನಟನೆ ಮತ್ತು ವ್ಯಕ್ತಿತ್ವ ಒಂದೇ ಆಗಿತ್ತು ಎಂದು ಹೇಳಿದರು.

ರಾಜ್‍ಕುಮಾರ್ ಅವರ ಬಗ್ಗೆ ಧೈರ್ಯದಲ್ಲಿ ಮಾತನಾಡುವಷ್ಟೇ ಮಟ್ಟದಲ್ಲಿ ಬರಗೂರು ಅವರ ಬಗ್ಗೆಯೂ ಮಾತನಾಡಬಹುದಾಗಿದೆ. ಇವರಿಬ್ಬರು ಜೀವನದಲ್ಲಿ ಕಪ್ಪುಚುಕ್ಕೆ ಬಾರದಂತೆ ನಡೆದುಕೊಂಡಿದ್ದಾರೆ. ಇವರು ಬರೆದಿರುವ ಈ ಪುಸ್ತಕ ವಿಮರ್ಶೆಯಲ್ಲ, ಜೀವನ ಚರಿತ್ರೆಯಲ್ಲ ಇದೊಂದು ಪ್ರೀತಿಯ ಕಥೆ ಎಂದು ಬಣ್ಣಿಸಿದರು.

ಡಾ.ರಾಜ್‍ಕುಮಾರ್ ಅವರು ಬದುಕಿದಷ್ಟು ಕಾಲ ಜೇಬಿನಲ್ಲಿ ಹಣವಿಟ್ಟುಕೊಂಡು ಓಡಾಡಿದವರೇ ಅಲ್ಲ. ಅಷ್ಟೊಂದು ಸರಳಸಜ್ಜನಿಕೆಯಿಂದ ಬದುಕಿದ ಇವರ ಜೀವನ ಮೌಲ್ಯಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚಿತ್ರನಟಿ ತಾರಾ ಅನುರಾಧ, ನಟ ರಾಘವೇಂದ್ರ ರಾಜ್‍ಕುಮಾರ್ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ