ಋಣಮುಕ್ತ ಪ್ರಮಾಣ ಪತ್ರ ವಿತರಣೆ ಸರಕಾರದ ಮೇಲೆ ವಿಶ್ವಾಸವಿಡಿ : ಎಚ್.ಡಿ.ಕುಮಾರಸ್ವಾಮಿ

ಬಾಗಲಕೋಟೆ: ಡಿಸೆಂಬರ 28 ,ಸಾಲಮನ್ನಾ ಹೆಸರಿನಲ್ಲಿ ಸ್ನೇಹಿತರಾದ ವಿರೋಧ ಪಕ್ಷದವರು ರೈತರಲ್ಲಿ ತಪ್ಪು ತಿಳುವಳಿಕೆ ಮೂಡಿಸುತ್ತಿದ್ದು ನಾನು ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಘೋಷಿಸಿದಂತೆ ಸಾಲ ಮನ್ನಾದ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ನನ್ನ ಅಧಿಕಾರಾವಧಿಯಲ್ಲಿ ಕೆಲ ಇತಿಮಿತಿಗಳ ಮಧ್ಯ ಹಾಗೂ ಮೈತ್ರಿ ಸರಕಾರದ ಬೆಂಬಲದೊಂದಿಗೆ ಸಾಲಮನ್ನಾ ಕೊಂಚ ವಿಳಂಬವಾಗಿರಬಹುದು ತಾವೆಲ್ಲ ಸರಕಾರದ ಮೇಲೆ ವಿಶ್ವಾಸವಿಡಬೇಕು ಯಾವುದೇ ಅಪನಂಬಿಕೆಗಳಿಗೆ ಒಳಗಾಗಬಾರದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಅವರು ಇಂದು ನವನಗರದ ಕಲಾಭವನದಲ್ಲಿ ಸಾಲಮನ್ನಾ ಯೋಜನೆಯಡಿಯ ಫಲಾನುಭವಿ ರೈತರಿಗೆ ಋಣಮುಕ್ತ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ಹಿಂದೆ ಕೇಂದ್ರ ಸರಕಾರದ ದಿ.ದೇವಿಲಾಲ ಹಾಗೂ ದಿ.ವಿ.ಪಿ.ಸಿಂಗ್ ಬಡ್ಡಿ ಮನ್ನಾ ಮಾಡುವ ಯೋಜನೆ ರೂಪಿಸಿದ ನಂತರ ತದನಂತರ ರಾಜ್ಯದಲ್ಲಿ ದಿ.ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಮುಖ್ಯಮಂತ್ರಿಗಳಾಗಿದ್ದ ಕಾಲಾವಧಿಯಲ್ಲಿ ಒಂದು ಬಾರಿ 10 ಸಾವಿರ ರೂ.ಗಳವರೆಗಿನ ಸಾಲ ಮನ್ನಾ ಮಾಡಲಾಗಿದ್ದನ್ನು ಸ್ಮರಿಸಿದರು. ಅಂದು ಕೂಡ ಕೇಂದ್ರದಿಂದ ವಿರೋಧ ವ್ಯಕ್ತವಾಗಿತ್ತು ಎಂದ ಅವರು ತದನಂತರ 2006ರಲ್ಲಿ ನನ್ನ ಅಧಿಕಾರಾವಧಿಯಲ್ಲಿ ಸಾಲಮನ್ನಾ ಮಾಡಲಾಯಿತು. ಅಂದಿನ ಲೆಕ್ಕಾಚಾರದ ಪ್ರಕಾರ ರಾಜ್ಯ ಬಜೆಟ್ 40 ಸಾವಿರ ಕೋಟಿ ರೂ.ಗಳಾಗುತ್ತಿತ್ತು ಅದರಲ್ಲಿ 25 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿ ದಿಟ್ಟ ನಿರ್ಧಾರ ಕೈಗೊಂಡು ರೈತರ ಪರವಾಗಿ ನಿಂತಿದ್ದೇನೆ ಎಂದರು.

ರಾಜ್ಯದ ಮಹತ್ವಾಕಾಂಕ್ಷಿ ರೈತರ ಸಾಲಮನ್ನಾ ಯೋಜನೆಯಡಿ ಈವರೆಗೆ 9500 ಕೋಟಿ ರೂ. ಬೇಕಾಗಿದ್ದು ಇದಕ್ಕಾಗಿ ಯಾವುದೇ ಅಭಿವೃದ್ಧಿ ಕಾರ್ಯಗಳಾದ ರಸ್ತೆ, ಕುಡಿಯುವ ನೀರು ಮುಂತಾದ ಅಭಿವೃದ್ಧಿ ಕಾರ್ಯಗಳಿಂದ ಒಂದು ನಯಾಪೈಸೆಯನ್ನು ಬಳಸಿಕೊಂಡಿಲ್ಲ ಈಗಾಗಲೇ 7000 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದ್ದು ಬರುವ ಫೆಬ್ರುವರಿಯ ಬಜೆಟ್‍ನಲ್ಲಿ 20 ಸಾವಿರ ಕೋಟಿ ರೂ.ಗಳನ್ನು ಮೀಸಲಿರಿಸಲಾಗುವದು ಎಂದರು.

ಉತ್ತರ ಕರ್ನಾಟಕಕ್ಕೆ ಯಾವುದೇ ರೀತಿಯ ತಾರತಮ್ಯ ಮಾಡಿಲ್ಲ ರಾಜ್ಯದ ಸರಾಸರಿ ವಿಚಾರಿಸಿದಾಗ ಶೇ.62ರಷ್ಟು ಸಾಲ ಮನ್ನಾ ಪ್ರಯೋಜನವನ್ನು ಉತ್ತರ ಕರ್ನಾಟಕದ 12ಕ್ಕೂ ಅಧಿಕ ಜಿಲ್ಲೆಗಳು ಪಡೆದುಕೊಂಡಿವೆ. ಮಧ್ಯ ಕರ್ನಾಟಕದ ಡಾವಣಗೆರೆ, ಚಿತ್ರದುರ್ಗ ಹಾಗೂ ಶಿವಮೊಗ್ಗ ಜಿಲ್ಲೆಗಳಿಗೆ 3500 ಕೋಟಿ ರೂ. ಪಡೆದುಕೊಂಡಿದ್ದರೆ. ಹಳೇಮೈಸೂರು ಭಾಗದ ಜಿಲ್ಲೆಗಳಿಗೆ 12 ಸಾವಿರ ಕೋಟಿ ರೂ.ಗಳ ಸಾಲ ಮನ್ನಾ ಮಾಡಲಾಗಿದ್ದು ಈ ಅಂಕಿ ಅಂಶವನ್ನು ಗಮನಿಸಿದಾಗ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿಲ್ಲ ಎಂದರಲ್ಲದೇ ಸಾಲಮನ್ನಾದ ಋಣಮುಕ್ತ ಪ್ರಮಾಣ ಪತ್ರ ವಿತರಣೆಯನ್ನು ಬಾಗಲಕೋಟ ಜಿಲ್ಲೆಯಿಂದ ಆರಂಭಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಸಾಲಮನ್ನಾ ಯೋಜನೆಯಡಿಯಲ್ಲಿ ಸಹಕಾರಿ ಸಂಘಗಳ ಸಾಲವಲ್ಲದೇ ರಾಷ್ಟ್ರೀಕೃತ ಬ್ಯಾಂಕ್‍ಗಳು ನಮಗೆ ಮಾಹಿತಿ ನೀಡಿದ ಪ್ರಕಾರ ರಾಜ್ಯದ ಸುಮಾರು 2169645 ರೈತರು ಈ ಬ್ಯಾಂಕ್‍ಗಳಲ್ಲಿ ಸಾಲ ಪಡೆದಿದ್ದು ಅದರಲ್ಲಿ 36641 ಕೋಟಿ ರೂ.ಗಳ ಬೆಳೆಸಾಲ ಪಡೆದಿದ್ದಾರೆ ಎಂದು ಬ್ಯಾಂಕ್‍ಗಳು ಮಾಹಿತಿ ನೀಡಿದ್ದು ರೈತರು ಇದರಲ್ಲಿ ಒಂದಂಶ ಗಮನಿಸಬೇಕಾಗಿದ್ದು ಸಾಲಮನ್ನಾ ಯೋಜನೆ ಪ್ರತಿಯೊಬ್ಬ ರೈತನ ಕುಟುಂಬಕ್ಕೆ ನೇರವಾಗಿ ತಲುಪಲಿ ಎಂಬ ಉದ್ದೇಶದಿಂದ ಆಧಾರ ಕಾರ್ಡ, ಬ್ಯಾಂಕ್ ಪಾಸ್‍ಬುಕ್, ಕೃಷಿ ಕಾರ್ಡ ಈ ಮೂರನ್ನು ತೆಗೆದುಕೊಂಡು ಬರಲು ಹೇಳಿದ್ದು ಇದರಲ್ಲಿ ಯಾವುದೇ ರೀತಿಯ ಗೊಂದಲ ಬೇಡ ಇದರಿಂದ ಮಧ್ಯವರ್ತಿಗಳ ಹಾವಳಿ ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

ರಾಷ್ಟ್ರಿಕೃತ ಬ್ಯಾಂಕ್ ಗಳಲ್ಲಿನ 21 ಲಕ್ಷ ರೈತರ ಸಾಲದ ಪೈಕಿ 2.80 ಲಕ್ಷ ರೈತರು ಸಾಲ ಕಟ್ಟಲಾಗದೆ ಎನ್‍ಪಿಎ ಮಾಡಿದ್ದಾರೆ 17 ಲಕ್ಷ ಕುಟುಂಬಗಳು ಸಾಲ ಕಟ್ಟಬೇಕಾಗಿದೆ 1.70 ಲಕ್ಷ ರೈತರ ಸಾಲವನ್ನು ಕಟ್ಟಿ ಹೊಸ ಸಾಲವನ್ನು ಪಡೆದಿದ್ದಾರೆ ಅಂತಹ ಸಾಲವನ್ನು ಪಡೆದ ರೈತರಿಗೆ 25 ಸಾವಿರ ರೂ.ಗಳ ಪ್ರೋತ್ಸಾಹಧನವನ್ನು ನೀಡಲಾಗುತ್ತಿದೆ ಒಂದು ಮಾರ್ಚ 31 ರವರೆಗೆ 2ಲಕ್ಷ ಪಡೆದ ಸಾಲದಲ್ಲಿ ಬಡ್ಡಿ ಸಮೇತ 50 ಸಾವಿರ ರೂ.ಗಳನ್ನು ನೇರವಾಗಿ ಖಾತೆಗೆ ಜಮಾ ಮಾಡಲಾಗುವುದು. ಎಂದರು.

ಕೃಷ್ಣಾ ಮೇಲ್ದಂಡೆ ಯೋಜನೆಯಡಿಯ ಹಿನ್ನೀರಿನ ಬಳಕೆಯಲ್ಲಿ ಆಗಿರುವ ಲೋಪದೋಷಗಳನ್ನು ಪ್ರಧಾನಿಯವರ ಗಮನಕ್ಕೆ ತಂದು ಅದರ ಬಗ್ಗೆ ವಿವರಣೆ ನೀಡಿ ಸದ್ಯದ ಪರಿಸ್ಥಿತಿಯನ್ನು ಮುಂದುವರೆಸಿದಲ್ಲಿ ಮುಂದಿನ 50 ವರ್ಷಗಳಾದರೂ ಆಲಮಟ್ಟಿ ಜಲಾಶಯದ ನೀರನ್ನು ಬಳಕೆ ಮಾಡಿಕೊಳ್ಳಲು ಸಾಧ್ಯವಾಗುವದಿಲ್ಲ ಅದಕ್ಕಾಗಿ ರಾಷ್ಟ್ರೀಯ ಯೋಜನೆಯನ್ನಾಗಿ ಪರಿವರ್ತನೆ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದೇನೆ ಇದರಿಂದ ಬಹುತೇಕ ಸಮಸ್ಯಗಳಿಗೆ ಪರಿಹಾರ ದೊರೆಯುತ್ತದೆ ಎಂದರು.

ನೀರಾವರಿಗಾಗಿ ಬಾಗಲಕೋಟ ಜಿಲ್ಲೆಗೆ ಯೋಜನೆಗಳನ್ನು ಹಾಕಿಕೊಳ್ಳಲಾಗಿದ್ದು ಕಳೆದ ವಿಧಾನಸಭೆಯ ಚುನಾವಣೆ ಸಮಯದಲ್ಲಿ ಈ ಭಾಗದಲ್ಲಿ ತಿರುಗಾಡಿ ಕೆರೂರ ಪಟ್ಟಣ ಸೇರಿದಂತೆ 16-18 ಗ್ರಾಮಗಳಿಗೆ 284 ಕೋಟಿ ರೂ.ಗಳಲ್ಲಿ ಕೆರೆ ತುಂಬಿಸುವ ಯೋಜನೆಗೆ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಈ ಹಿಂದೆ ದಿ.ಸಿದ್ದು ನ್ಯಾಮಗೌಡರು ದೇವೇಗೌಡರು ನೀರಾವರಿ ಸಚಿವರಾಗಿದ್ದ ಸಂದರ್ಭದಲ್ಲಿ ಈ ಭಾಗದ ನೀರಾವರಿ ಪ್ರದೇಶಗಳನ್ನು ಅಭಿವೃದ್ಧಿ ಪಡಿಸಲು ಕೆರೆ ತುಂಬಿಸುವ ಕಾರ್ಯಕೈಗೊಳ್ಳಬೇಕೆಂದು ಮನವಿ ಮಾಡಿದ್ದರು. ಆ ಪ್ರಕಾರ ನಾನೂ ಕೂಡ ಸಾಲಮನ್ನಾ ರೈತರ ಪರ ಯೋಜನೆಯಂತಹ ಯೋಜನೆಗಳನ್ನು ಜಾರಿಗೊಳಿಸಲು ದೃಢ ನಿರ್ಧಾರವನ್ನು ಮಾಡಿದ್ದೇನೆ ಎಂದ ಅವರು ಕೇವಲ ಸಾಲಮನ್ನಾದಿಂದ ರೈತರ ಸಮಸ್ಯೆ ಬಗೆಹರಿಯುವದಿಲ್ಲ ರೈತರ ಬೆಳೆದು ಬೆಳೆಗೆ ನಿಖರ ಬೆಲೆ ನಿಗದಿ ಪಡಿಸುವ ಬಗ್ಗೆ ಕ್ರಮ ಕೈಗೊಳ್ಳುವ ಚಿಂತನೆಯಿಂದ ರೈತರನ್ನು ಸಾಲದಿಂದ ಮುಕ್ತಗೊಳಿಸುವದರ ಜೊತೆಗೆ ರೈತರೆ ಸರ್ಕಾರಕ್ಕೆ ಸಾಲ ನೀಡುವಂತಾಗಬೇಕೆಂಬ ಮನದಾಸೆಯನ್ನು ಹೊಂದಿದ್ದೇನೆ ಎಂದರು.

ರೈತರು ಕೂಡ ಕೃಷಿಯನ್ನು ಆಸಕ್ತಿ ಹೊಂದುವ ಮೂಲಕ ಈ ಭಾಗದಲ್ಲಿ ಬೆಳೆಗೆ ಹೆಚ್ಚಿನ ನೀರು ಬಿಟ್ಟು ಭೂಮಿ ಸವಳು-ಜವಳು ಮಾಡಿಕೊಂಡು ಮತ್ತೆ ಅದಕ್ಕೆ ಪರಿಹಾರಕ್ಕೆ ಮೊರೆ ಹೋಗದಂತೆ ಈಗಲೇ ಜಾಗೃತರಾಗಿ ಹನಿ ನೀರಾವರಿ, ತುಂತುರು ನೀರಾವರಿ ಆಧುನಿಕ ಬೇಸಾಯ ಕ್ರಮಗಳನ್ನು ಬಳಸಿಕೊಂಡು ಆರ್ಥಿಕ ಅಭಿವೃದ್ಧಿ ಹೊಂದಬೇಕೆಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಮಾತನಾಡಿ ಸಾಲ ಮನ್ನಾ ಯೋಜನೆ ಇಡೀ ದೇಶದ ಗಮನವನ್ನು ಸೆಳೆದಿದೆ ನಮ್ಮ ಅಡಳಿತವಿರುವ ರಾಜ್ಯಗಳಲ್ಲಿ ರೈತರ ಸಾಲಮನ್ನಾ ಯೋಜನೆಯನ್ನು ಜಾರಿಗೆ ತಂದಿದ್ದು ಕೇಂದ್ರ ಸರಕಾರದಿಂದ ರೈತರಿಗಾಗಿ ಯಾವುದೇ ರೀತಿಯ ಸಾಲಮನ್ನಾ ಘೋಷಣೆಯಾಗಿಲ್ಲ ಎಂದರು.

ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ ಮಾತನಾಡಿ ಸಾಲಮನ್ನಾ ಯೋಜನೆಯನ್ನು ರೈತರಿಗೆ ತಿಳಿಸುವಲ್ಲಿ ಮಾಧ್ಯಮಗಳ ಹಾಗೂ ವಾರ್ತಾ ಇಲಾಖೆಯ ಕಾರ್ಯ ಶ್ಲಾಘಿಸಿದ ಅವರು ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸಾಲಮನ್ನಾ ಋಣಮುಕ್ತ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮಕ್ಕೆ ಆಹ್ವಾನಿಸಿದಾಗ ತಮ್ಮ ಕಾರ್ಯಬಾಹುಲ್ಯದ ಮಧ್ಯ ಬಿಡುವು ಮಾಡಿಕೊಂಡು ಜಿಲ್ಲೆಗೆ ಆಗಮಿಸಿ ಜಿಲ್ಲೆಯ ರೈತರ ಬಗ್ಗೆ ಅಪಾರ ಕಾಳಜಿ ವಹಿಸಿ ರೈತರಿಗೆ ಋಣಮುಕ್ತ ಪ್ರಮಾಣ ಪತ್ರ ವಿತರಿಸಿದಕ್ಕೆ ಜಿಲ್ಲಾಡಳಿತ ವತಿಯಿಂದ ಧನ್ಯವಾದ ಅರ್ಪಿಸಿ .

ಕಾರ್ಯಕ್ರಮದಲ್ಲಿ ಸಚಿವರಾದ ಸಾ.ರಾ.ಮಹೇಶ, ಆರ್.ಬಿ.ತಿಮ್ಮಾಪೂರ, ಮಾಜಿ ಸಚಿವ ಬಸವರಾಜ ಹೊರಟ್ಟಿ ಜಿ.ಪಂ.ಅಧ್ಯಕ್ಷೆ ಶ್ರೀಮತಿ ವೀಣಾ ಕಾಶಪ್ಪನವರ, ಜಮಖಂಡಿ ಶಾಸಕÀ ಆನಂದ ನ್ಯಾಮಗೌಡ ಮಾಜಿ ಶಾಸಕರಾದ ಎನ್.ಎಚ್.ಕೋನರಡ್ಡಿ, ಎಚ್.ವೈ.ಮೇಟಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಸಹಕಾರ ಸಂಘಗಳ ನಿಬಂಧಕ ಎಂ.ಕೆ.ಅಯ್ಯಪ್ಪ ಪ್ರಾದೇಶಿಕ ಆಯುಕ್ತ ಪಿ.ಎ.ಮೇಘಣ್ಣವರ ಇತರರು ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ