ಆರ್ ಬಿಐ ಮೀಸಲು ನಿಗದಿ ವಿಚಾರ: ಬಿಮಲ್ ಜಲಾನ್ ಅಧ್ಯಕ್ಷತೆಯ ಪರಿಣಿತರ ಸಮಿತಿ ರಚನೆ

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ತನ್ನಲ್ಲಿನ ಮೀಸಲು ನಿಗದಿ ಪ್ರಮಾಣವನ್ನು ಅಂತಿಮಗೊಳಿಸುವುದಕ್ಕಾಗಿ ಮಾಜಿ ಗವರ್ನರ್ ಬಿಮಲ್ ಜಲಾನ್ ನೇತೃತ್ವದ ಆರು ಸದಸ್ಯರ ಸಮಿತಿಯನ್ನು ಬುಧವಾರ ರಿಸರ್ವ್ ಬ್ಯಾಂಕ್ ರಚಿಸಿದೆ. ಮಾಜಿ ಕಾರ್ಯದರ್ಶಿ ರಾಕೇಶ್ ಮೋಹನ್ ಸಮಿತಿಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಮೀಸಲು ಪ್ರಮಾಣ ನಿಗದಿ ಹಾಗೂ ಬ್ಯಾಂಕ್ ವಹಿವಾಟನ್ನು ನಿರ್ಧರಿಸಲು . ಪರಿಣಿತ ಸಮಿತಿಯನ್ನು ರೂಪಿಸುವ ಯೋಜನೆ ರೂಪುಗೊಂಡ ತಿಂಗಳ ತರುವಾಯ ಸಮಿತಿ ರಚಿಸಲ್ಪಟ್ಟಿದೆ.
ಹಣಕಾಸು ವ್ಯವಹಾರಗಳ ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್, ಮತ್ತು ಆರ್ ಬಿಐ ಉಪ ಗವರ್ನರ್ ಎನ್.ಎಸ್. ವಿಶ್ವನಾಥನ್ ಅವರು ಸಮಿತಿಯಲ್ಲಿ ಸೇರಿದ್ದಾರೆ ಎಂದು ಆರ್ ಬಿಐಹೇಳಿಕೆಯಲ್ಲಿ ತಿಳಿಸಿದೆ. ಆರ್ ಬಿಐ ಕೇಂದ್ರ ಮಂಡಳಿಯ ಸದಸ್ಯರಾದ  ಭರತ್ ಜೋಷಿ ಮತ್ತು ಸುಧೀರ್ ಮಂಕಡ್ ಅವರು ಸಮಿತಿಯ ಇನ್ನಿಬ್ಬರು ಸದಸ್ಯರಾಗಿದ್ದಾರೆ.
ಕಳೆದ ನವೆಂಬರ್ 19 ರಂದು ನಡೆದ ಆರ್ ಬಿಐ ಸಭೆಯಲ್ಲಿ ಸಮಿತಿ ರಚನೆ ಕುರಿತು ತೀರ್ಮಾನಿಸಲಾಗಿತ್ತು ಆದರೆ  ರಾಕೇಶ್ ಮೋಹನ್ ಅವರ ಸೇರ್ಪಡೆ ಕುರಿತಂತೆ ಒಮ್ಮತಕ್ಕೆ ಬರುವಲ್ಲಿ ವಿಫಲವಾಗಿದ್ದ ಕಾರಣ ಸಮಿತಿ ರೂಪುಗೊಳ್ಳುವುದು ವಿಳಂಬವಾಗಿದೆ. ಇತ್ತೀಚೆಗೆ ಆರ್ ಬಿಐ ಗವರ್ನರ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ಊರ್ಜಿತ್ ಪಟೇಲ್ . ಮೋಹನ್ ಅವರನ್ನು ಸಮಿತಿಗೆ ಸೇರ್ಪಡಿಸಿಕೊಳ್ಳುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ