ಪಿ.ಟಿ.ಪರಮೇಶ್ವರ್ ನಾಯಕ್ ಅವರಿಗೆ ಬಳ್ಳಾರಿ ಜಿಲ್ಲೆಯ ಉಸ್ತುವಾರಿಯನ್ನು ವಹಿಸಿದರೆ ಪಕ್ಷದಲ್ಲಿ ಮುಂದುವರೆಯುವ ಬಗ್ಗೆ ಪರಿಶೀಲನೆ ಮಾಡಬೇಕಾಗುತ್ತದೆ ಎಂದು ಜೆಲ್ಲೆಯ ಕೆಲ ಶಾಸಕರ ಎಚ್ಚರಿಕೆ

ಬೆಂಗಳೂರು, ಡಿ.26- ಬಳ್ಳಾರಿ ಜಿಲ್ಲೆಯ ಉಸ್ತುವಾರಿಯನ್ನು ಪಿ.ಟಿ.ಪರಮೇಶ್ವರ್ ನಾಯಕ್ ಅವರಿಗೆ ವಹಿಸಿದರೆ ನಾವು ಪಕ್ಷದಲ್ಲಿ ಮುಂದುವರೆಯುವ ಬಗ್ಗೆ ಮರು ಪರಿಶೀಲನೆ ಮಾಡಬೇಕಾಗುತ್ತದೆ ಎಂದು ಬಳ್ಳಾರಿ ಜಿಲ್ಲೆಯ ಕೆಲ ಶಾಸಕರು ಎಚ್ಚರಿಕೆ ನೀಡಿದ್ದಾರೆ.

ಪಿ.ಟಿ.ಪರಮೇಶ್ವರ್ ನಾಯಕರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿರುವ ಬಗ್ಗೆ ಬಹಳಷ್ಟು ಮಂದಿ ಅತೃಪ್ತಿ ವ್ಯಕ್ತಪಡಿಸಿದ್ದು, ಈ ಮೊದಲು ಅವರು ಬಳ್ಳಾರಿ ಜಿಲ್ಲೆ ಉಸ್ತುವಾರಿ ಸಚಿವರಾಗಿದ್ದರು. ಅವರು ಪಕ್ಷ ಸಂಘಟನೆಗೆ ಸರಿಯಾಗಿ ಸ್ಪಂದಿಸಲಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಮತ್ತು ಅಧಿಕಾರಿಗಳ ಜತೆ ಸಂಘರ್ಷ ಮಾಡಿಕೊಂಡರು ಎಂಬ ಕಾರಣಕ್ಕಾಗಿಯೇ ಅವರನ್ನು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಿಂದ ಕೈ ಬಿಟ್ಟಿದ್ದರು.

ಈಗ ಮತ್ತೆ ಸಂಪುಟಕ್ಕೆ ಅವರನ್ನು ತೆಗೆದುಕೊಂಡಿದ್ದಾರು ಏಕೆ ಎಂಬ ಪ್ರಶ್ನೆಗಳು ಎದುರಾಗಿವೆ. ಸಂಪುಟ ವಿಸ್ತರಣೆಯಾಗಿದೆ. ಪರಮೇಶ್ವರ್‍ನಾಯಕ್ ಅವರಿಗೂ ಸಚಿವ ಸ್ಥಾನ ಸಿಕ್ಕಿದೆ. ಕಾಲ ಮಿಂಚಿ ಹೋಗಿರುವುದರಿಂದ ನಾವು ಅ ಬಗ್ಗೆ ಮಾತನಾಡುವುದಿಲ್ಲ. ಆದರೆ, ಅವರನ್ನು ಯಾವುದೇ ಕಾರಣಕ್ಕೂ ಬಳ್ಳಾರಿಗೆ ಉಸ್ತುವಾರಿ ಸಚಿವರನ್ನಾಗಿ ಮಾಡಬಾರದು ಎಂಬ ಬೇಡಿಕೆ ಮುಂದಿಟ್ಟಿದ್ದಾರೆ.

ಡಿ.ಕೆ.ಶಿವಕುಮಾರ್ ಅವರು ಈ ಬಳ್ಳಾರಿಯ ಉಸ್ತುವಾರಿ ಸಚಿವರಾಗಿದ್ದಾರೆ. ಇತ್ತೀಚೆಗೆ ನಡೆದ ಸಚಿವ ಸಂಪುಟ ವಿಸ್ತರಣೆಯಲ್ಲಿ ಇ.ತುಕಾರಾಂ ಮತ್ತು ಪರಮೇಶ್ವರ್ ನಾಯಕ್ ಇಬ್ಬರಿಗೆ ಬಳ್ಳಾರಿಯಿಂದ ಸಂಪುಟದಲ್ಲಿ ಅವಕಾಶ ನೀಡಲಾಗಿದೆ. ಒಂದು ವೇಳೆ ಇ. ತುಕಾರಾಂ ಅವರನ್ನು ಉಸ್ತುವಾರಿ ಸಚಿವರನ್ನಾಗಿ ಮಾಡಿದರೂ ಸಹಿಸಿಕೊಳ್ಳುತ್ತೇವೆ. ಅದನ್ನು ಬಿಟ್ಟು ಪರಮೇಶ್ವರ್ ನಾಯಕ್ ಅವರಿಗೆ ಮಣೆ ಹಾಕಿದರೆ ಸುಮ್ಮನಿರುವುದಿಲ್ಲ ಎಂಬ ಎಚ್ಚರಿಕೆಯನ್ನು ಕೆಲ ಶಾಸಕರು ನೀಡಿದ್ದಾರೆ ಎನ್ನಲಾಗಿದೆ.

ಜ.26ರ ಗಣರಾಜ್ಯೋತ್ಸವ ವೇಳೆಗೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಅಂತಿಮಗೊಳ್ಳಬೇಕು. ಈಗಾಗಲೇ ಉಸ್ತುವಾರಿ ಇರುವವರ ಬದಲಾವಣೆ ಆಗಬೇಕು. ಸಂಪುಟಕ್ಕೆ ಹೊಸದಾಗಿ 8 ಮಂದಿ ಸೇರ್ಪಡೆಯಾಗಿದ್ದು, ಅವರಿಗೆ ಜವಾಬ್ದಾರಿಗಳನ್ನು ನೀಡಬೇಕಿದೆ. ಕೆಲವು ಸಚಿವರಿಗೆ ಎರಡೆರಡು ಜಿಲ್ಲೆಗಳ ಉಸ್ತುವಾರಿ ವಹಿಸಲಾಗಿದ್ದು, ಅದು ಬದಲಾವಣೆಯಾಗಬೇಕಿದ್ದು, ಈ ಹಂತದಲ್ಲೇ ಉಸ್ತುವಾರಿ ಬಗ್ಗೆ ಕೇಳಿ ಬರುತ್ತಿರುವ ಅಸಮಾಧಾನಗಳು ಕಾಂಗ್ರೆಸನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ