ಕಾಂಗ್ರೇಸ್ಸಿಗೆ ಬಿಗಿಯಾದ ಅತೃಪ್ತರ ಕುಣಿಕೆ

ಬೆಂಗಳೂರು, ಡಿ.25-ಕಾಂಗ್ರೆಸ್‍ಗೆ ಅತೃಪ್ತರ ಕುಣಿಕೆ ಬಿಗಿಯಾಗತೊಡಗಿದೆ. ಒಂದೆರಡು ದಿನಗಳಲ್ಲಿ ಭಿನ್ನಮತ ಸಹಜವಾಗಿಯೇ ಬಗೆಹರಿಯುತ್ತದೆ ಎಂಬ ಕಾಂಗ್ರೆಸ್ ನಿಲುವು ಕೈಕೊಟ್ಟಂತಿದೆ.

ದಿನೇ ದಿನೇ ಅತೃಪ್ತರ ಪಟ್ಟು ಬಿಗಿಯಾಗುತ್ತಿರುವುದು ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಸಂಪುಟಕ್ಕೆ ಸೇರಿಸಿಕೊಳ್ಳದಿರುವ ಬಗ್ಗೆ ಅಸಮಾಧಾನಗೊಂಡಿರುವ ರಾಮಲಿಂಗಾರೆಡ್ಡಿ ಅವರೊಂದಿಗೆ ಬಿಜೆಪಿಯವರು ಮಾತುಕತೆ ನಡೆಸಿರುವುದು ಕಾಂಗ್ರೆಸ್ ವಲಯದಲ್ಲಿ ತಳಮಳ ಸೃಷ್ಟಿಸಿದೆ.

ಹೈಕಮಾಂಡ್ ನಾಯಕರು ಮಾತುಕತೆ ನಡೆಸಲು ಆಗಮಿಸುವ ಮುನ್ನವೇ ಭಿನ್ನಮತ ಸರಿಪಡಿಸುವ ಯತ್ನವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ.

ರಾಮಲಿಂಗಾರೆಡ್ಡಿ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳದಿದ್ದರೆ ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಹಲವು ಬಿಬಿಎಂಪಿ ಸದಸ್ಯರು ತೀರ್ಮಾನಿಸಿ, ಈ ಸಂಬಂಧ ನಾಳೆ ಸಭೆ ನಡೆಸಲು ಮುಂದಾಗಿದ್ದಾರೆ.

ಸಚಿವ ಸ್ಥಾನದಿಂದ ಕೈಬಿಟ್ಟಿರುವ ರಮೇಶ್ ಜಾರಕಿ ಹೊಳಿ ಎಐಸಿಸಿ ಪ್ರಧಾನಕಾರ್ಯದರ್ಶಿ, ಪಕ್ಷದ ಉಸ್ತುವಾರಿ ವೇಣುಗೋಪಾಲ್ ಅವರೊಂದಿಗೆ ಭೇಟಿ ಮಾಡಿ ಮಾತುಕತೆ ನಡೆಸಲು ನಿರಾಕರಿಸಿದ್ದಾರೆ.

ಇಂದು ಸಂಜೆ ವೇಣುಗೋಪಾಲ್ ಅವರು ನಗರಕ್ಕೆ ಆಗಮಿಸಲಿದ್ದು, ಅವರ ಆಗಮನಕ್ಕೂ ಮುನ್ನವೇ ಮಾಜಿ ಸಚಿವ ರಮೇಶ್ ಜಾರಕಿ ಹೊಳಿ ಅವರು ಬೆಳಗಾವಿಗೆ ತೆರಳಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಇಂದು ಅತೃಪ್ತರ ಮನವೊಲಿಕೆ ಯತ್ನಗಳು ನಡೆದವು.

ಹಿರಿಯ ಶಾಸಕರಾದ ರಾಮಲಿಂಗಾರೆಡ್ಡಿ,ಭೀಮಾನಾಯಕ್, ಸುಧಾಕರ್ ಮುಂತಾದವರೊಂದಿಗೆ ಮಾತುಕತೆ ನಡೆಸಿ ಮನವೊಲಿಸುವ ಪ್ರಯತ್ನ ನಡೆಸಿದರು.
ಸಂಪುಟ ವಂಚಿತರ ಭಿನ್ನಮತ ಶಮನಗೊಂಡಿಲ್ಲ. ಹಲವರು ಸಂಪರ್ಕಕ್ಕೆ ಸಿಕ್ಕಿಲ್ಲ. ಈ ನಡುವೆ ಪಕ್ಷ ವಿರೋಧಿ ಚಟುವಟಿಕೆ ನಡೆಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ಎಚ್ಚರಿಕೆಗೆ ಕೇರ್ ಮಾಡದ ಹಲವರು ತಮ್ಮ ಭಿನ್ನಮತ ಮುಂದುವರೆಸಿರುವ ಘಟನೆಗಳು ನಡೆದಿವೆ.

ನಿಗಮ ಮಂಡಳಿ ಅಧ್ಯಕ್ಷ ಸ್ಥಾನಗಳು ಬೇಡ ಎಂದು ಹಲವು ಶಾಸಕರು ಹೇಳಿದ್ದು, ಬಿ.ಕೆ. ಸಂಗಮೇಶ್, ನಾಗೇಶ್,ಅಬ್ಬಯ್ಯ ಪ್ರಸಾದ್ ಮುಂತಾದವರು ಅಸಮಾಧಾನಗೊಂಡಿದ್ದು, ಸಂಗಮೇಶ್ ಅವರು ಸಚಿವ ಸ್ಥಾನಕ್ಕೆ ಬಿಗಿಪಟ್ಟು ಹಿಡಿದಿದ್ದಾರೆ.

ಈ ನಡುವೆ ಆನಂದ್‍ಸಿಂಗ್ ಬಿಜೆಪಿಯ ಹಿರಿಯ ಮುಖಂಡ, ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಅತೃಪ್ತರ ಅಸಮಾಧಾನವನ್ನು ಬಗೆಹರಿಸುವ ಯತ್ನವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದ ಎರಡು ದಿನಗಳಿಂದ ನಡೆಸುತ್ತಿದ್ದರೂ ಬಗೆಹರಿದಂತೆ ಕಂಡು ಬಂದಿಲ್ಲ.

ಇಂದು ಕೂಡ ತಮ್ಮ ನಿವಾಸದಲ್ಲಿ ಮುಖಂಡರೊಂದಿಗೆ ಮಾತುಕತೆ ನಡೆಸಿದರು. ಹಲವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿ ಮನವೊಲಿಸುವ ಯತ್ನ ಮಾಡಿದರು.

ಈ ನಡುವೆ ಭಿನ್ನಮತದ ಲಾಭ ಪಡೆಯಲು ಬಿಜೆಪಿಯವರು ತಮ್ಮ ಪ್ರಯತ್ನವನ್ನು ಮುಂದುವರೆಸಿದ್ದಾರೆ. ಬಿಜೆಪಿಯ ಹಲವು ಶಾಸಕರು ರಾಮಲಿಂಗಾರೆಡ್ಡಿ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿರುವುದು ಹಲವು ಕುತೂಹಲಗಳಿಗೆ ಕಾರಣವಾಗಿದೆ.

ಯಲಹಂಕ ಶಾಸಕ ವಿಶ್ವನಾಥ್ ಅವರು, ರಾಮಲಿಂಗಾರೆಡ್ಡಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಅಲ್ಲದೆ, ಯಡಿಯೂರಪ್ಪ ಹಮ್ಮಿಕೊಂಡಿರುವ ಉಪಹಾರ ಕೂಟದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದ್ದಾರೆ ಎಂದು ತಿಳಿದುಬಂದಿದೆ.

ರಾಮಲಿಂಗಾರೆಡ್ಡಿಯಂತಹ ಹಿರಿಯ ನಾಯಕರಿಗೆ ಕಾಂಗ್ರೆಸ್ ಪಕ್ಷದಲ್ಲಿ ತೀವ್ರ ಅನ್ಯಾಯವಾಗಿದೆ. ಮತ್ತು ಅವರನ್ನು ಕಡೆಗಣಿಸಲಾಗಿದೆ. ಅವರಂತಹ ನಾಯಕರು ನಮ್ಮ ಪಕ್ಷಕ್ಕೆ ಬಂದರೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡುವುದು ಹಾಗೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಅವರ ಪುತ್ರಿ ಸೌಮ್ಯರೆಡ್ಡಿ ಅವರನ್ನು ಸಚಿವರನ್ನಾಗಿ ಮಾಡಲಾಗುವುದು ಎಂಬ ಭರವಸೆಯನ್ನು ನೀಡಿದ್ದಾರೆ ಎನ್ನಲಾಗಿದೆ.

ಈ ಎಲ್ಲಾ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ಮುಖಂಡರು, ಅತೃಪ್ತರ ಮನವೊಲಿಸಲು ಮುಂದಾಗಿದ್ದಾರೆ.
ನಿನ್ನೆ ಸಿದ್ದರಾಮಯ್ಯನವರು ಖುದ್ದು ರಾಮಲಿಂಗಾರೆಡ್ಡಿ ಅವರಿಗೆ ದೂರವಾಣಿ ಮೂಲಕ ನಿಮ್ಮೊಂದಿಗೆ ಮಾತನಾಡಲು ನಿಮ್ಮ ಮನೆಗೆ ಬರುತ್ತೇನೆ ಎಂದು ಹೇಳಿದ್ದಾರೆ.

ನೀವು ಬರುವುದು ಬೇಡ, ನಾನೇ ಬರುತ್ತೇನೆ ಎಂದು ರಾಮಲಿಂಗಾರೆಡ್ಡಿ ಅವರು ತಿಳಿಸಿದ್ದು, ಇಂದು ಸಿದ್ದರಾಮಯ್ಯ-ರಾಮಲಿಂಗಾರೆಡ್ಡಿ ಮಾತುಕತೆ ನಡೆಸಲಿದ್ದಾರೆ.
ಕಳೆದ ಆರು ತಿಂಗಳಿನಿಂದಲೂ ಕಾಂಗ್ರೆಸ್‍ನಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಬಂಡಾಯ, ಭಿನ್ನಮತ ತಲೆದೋರುತ್ತಲೇ ಇದೆ. ಹಿರಿಯ ನಾಯಕರು ಅದನ್ನು ಶಮನಗೊಳಿಸುತ್ತಿದ್ದಾರೆ. ಸಚಿವ ಸಂಪುಟ ವಿಸ್ತರಣೆ, ಪುನಾರಚನೆ ಸಂದರ್ಭದಲ್ಲಿ ಉಂಟಾಗಿರುವ ಭಿನ್ನಮತ ತಾರಕಕ್ಕೇರಿದ್ದು, ಹೈಕಮಾಂಡ್ ನಾಯಕರು ಇದನ್ನು ಬಗೆಹರಿಸುವಲ್ಲಿ ಯಶಸ್ವಿಯಾಗಲಿದ್ದಾರೆಯೇ ಎಂಬುದನ್ನು ಕಾದುನೋಡಬೇಕು.

ಕಾಂಗ್ರೆಸ್ -ಜೆಡಿಎಸ್ ಪಕ್ಷಗಳ ನಡುವೆ ಸಮನ್ವಯತೆ ಸಾಧಿಸಿ ಸುಸೂತ್ರವಾಗಿ ಸರ್ಕಾರ ನಡೆಯಬೇಕೆಂಬ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರನ್ನು ಸಮನ್ವಯ ಸಮಿತಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಆದರೆ ಈ ಎರಡೂ ಪಕ್ಷಗಳ ನಡುವೆ ಯಾವುದೇ ಹೊಂದಾಣಿಕೆ ಕೊರತೆಯಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ನಿರಂತರ ಭಿನ್ನಮತ, ಬಂಡಾಯದ ಚಟುವಟಿಕೆಗಳು ನಡೆಯುತ್ತಲೇ ಬಂದಿದೆ. ಇವುಗಳನ್ನು ಬಗೆಹರಿಸುವಲ್ಲಿ ನಾಯಕರು ಹೈರಾಣಾಗಿದ್ದಾರೆ.

ಈಗ ಹೈಕಮಾಂಡ್ ರಂಗಪ್ರವೇಶ ಮಾಡಿದೆ. ಸಂಜೆ ಅಥವಾ ನಾಳೆಯೊಳಗೆ ಭಿನ್ನಮತೀಯರನ್ನು ಸಮಾಧಾನ ಪಡಿಸುತ್ತಾರೋ ಅಥವಾ ಅತೃಪ್ತರ ಕೈ ಮೇಲಾಗಲಿದೆಯೋ… ಪರಿಸ್ಥಿತಿ ಲಾಭ ಪಡೆಯಲು ಚಾತಕಪಕ್ಷಿಯಂತೆ ಕಾಯುತ್ತಿರುವ ಬಿಜೆಪಿಗೆ ಪರಿಸ್ಥಿತಿ ವರದಾನವಾಗಲಿದೆಯೋ ಕಾದುನೋಡಬೇಕು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ