ಸೊಹ್ರಾಬುದ್ದೀನ್ ಶೇಕ್ ಮತ್ತು ತುಳಸಿರಾಮ್ ಪ್ರಜಾಪತಿ ಎನ್’ಕೌಂಟರ್ ಪ್ರಕರಣ: ಎಲ್ಲಾ 22 ಆರೋಪಿಗಳ ಖುಲಾಸೆ

ಮುಂಬೈ: ಸೊಹ್ರಾಬುದ್ದೀನ್ ಶೇಕ್ ಮತ್ತು ತುಳಸಿರಾಮ್ ಪ್ರಜಾಪತಿ ಎನ್’ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿರುವ ಸಿಬಿಐ ವಿಶೇಷ ನ್ಯಾಯಾಲಯ, ಸಾಕ್ಷಾಧಾರಗಳ ಕೊರತೆ ಹಿನ್ನಲೆಯಲ್ಲಿ ಎಲ್ಲಾ 22 ಆರೋಪಿಗಳನ್ನು ಖುಲಾಸೆಗೊಳಿಸಿದೆ.

ಸೊಹ್ರಾಬುದ್ದೀನ್ ಮತ್ತು ತುಳಸಿ ರಾಮ್ ಪ್ರಜಾಪತಿ ಅವರನ್ನು ಪಿತೂರಿ ನಡೆಸಿ ಹತ್ಯೆ ಮಾಡಲಾಗಿದೆ ಎಂಬ ಆರೋಪಕ್ಕೆ ಸರಿಯಾಗಿ ಪ್ರಬಲ ಸಾಕ್ಷ್ಯಾಧಾರಗಳಿಲ್ಲ ಎಂದಿರುವ ನ್ಯಾಯಾಲಯ ಆರೋಪಿಗಳನ್ನು ಖುಲಾಸೆ ಮಾಡುತ್ತಿರುವುದಾಗಿ ತಿಳಿಸಿದೆ.

ಸೊಹ್ರಾಬುದ್ದಿನ್ ಅವರನ್ನು 2005ರಲ್ಲಿ ಮತ್ತು ಆತನ ಸಹಚರ ತುಳಸಿರಾಮ್ ಪ್ರಜಾಪತಿಯವರನ್ನು 2006ರಲ್ಲಿ ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳ ಜಂಟಿ ಪೊಲೀಸ್ ತಂಡ ಎನ್ ಕೌಂಟರ್ ನಡೆಸಿ ಹತ್ಯೆ ಮಾಡಿತ್ತು. ಈ ಎರಡೂ ಎನ್ ಕೌಂಟರ್ ಗಳೂ ನಕಲಿ ಎಂದು ಆರೋಪ ಮಾಡಲಾಗಿತ್ತು.

ಸೊಹ್ರಾಬುದ್ದೀನ್ ಗೆ ಎಲ್ಇಟಿ ಮತ್ತು ಪಾಕಿಸ್ತಾನದ ಐಎಸ್ಐ ಜೊತೆ ಸಂಪರ್ಕವಿತ್ತು ಎಂಬ ಕಾರಣ ನೀಡಿದ್ದ ಅಧಿಕಾರಿಗಳು ಎನ್ ಕೌಂಟರ್ ನಡೆಸಿ ಹತ್ಯೆ ಮಾಡಿದ್ದರು. ಈ ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಕೈವಾಡವಿದೆ ಎಂದೂ ಕೂಡ ಆರೋಪ ಮಾಡಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರೆಗೂ ಒಟ್ಟು 210 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿದ್ದು, ಅಂತಿಮವಾಗಿ ಇಂದು ತೀರ್ಪು ಹೊರಬಿದ್ದಿದ್ದು, 22 ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ.

2014 ಡಿಸೆಂಬರ್ ರಂದು ಪ್ರಕರಣ ಸಂಬಂಧ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಸಿಬಿಐ ನ್ಯಾಯಾಲಯ ಕ್ಲೀನ್ ಚಿಟ್ ನೀಡಿತ್ತು. 2016 ಆಗಸ್ಟ್ ನಲ್ಲಿ ಅಮಿತ್ ಶಾ ಅವರಿಗೆ ಕ್ಲೀನ್ ಚಿಟ್ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು.

Sohrabuddin encounter case: All 22 accused acquitted

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ