26 ಲಕ್ಷರೂ.ಗಳೊಂದಿಗೆ ಪರಾರಿಯಾದ ಇಬ್ಬರು ಸಿಬ್ಬಂಧಿಗಳು

ಬೆಂಗಳೂರು, ಡಿ.19- ಎಟಿಎಂಗೆ ಹಣ ತುಂಬಲು ಹೋದ ಇಬ್ಬರು ಸಿಬ್ಬಂದಿಗಳು 26 ಲಕ್ಷ ರೂ.ಗಳೊಂದಿಗೆ ನಾಪತ್ತೆಯಾಗಿದ್ದಾರೆ.

ಹಣದೊಂದಿಗೆ ನಾಪತ್ತೆಯಾಗಿರುವವರನ್ನು ರೇಡಿಯಂಟ್‍ ಕ್ಯಾಷ್ ಮ್ಯಾನೇಜ್‍ಮೆಂಟ್ ಸಿಬ್ಬಂದಿಗಳಾದ ತುಮಕೂರುಜಿಲ್ಲೆ ಮಧುಗಿರಿ ತಾಲೂಕಿನ ತಿಂಗಳೂರು ನಿವಾಸಿ ಅಮರನಾಥ್ ಮತ್ತು ಮಡಿಕೇರಿಯ ಬೆಳಿಗೇರಿ ಗ್ರಾಮದ ಗೌರೀಶ್‍ಎಂದು ಗುರುತಿಸಲಾಗಿದೆ.

ಡಿ.6ರಂದೇ ಇಬ್ಬರು ಸಿಬ್ಬಂದಿಗಳು 26 ಲಕ್ಷ ಹಣದೊಂದಿಗೆ ಪರಾರಿಯಾಗಿದ್ದರೂ ರೇಡಿಯಂಟ್‍ ಕಂಪೆನಿಯವರು ತಡವಾಗಿ ದೂರು ನೀಡಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಡಿ.6ರಂದು ಈಜಿಪುರದ ಗುಂಡಪ್ಪಗೌಡ ರಸ್ತೆಯ 10ನೆ ಕ್ರಾಸ್‍ನಿಂದ ಎಟಿಎಂಗಳಿಗೆ ಹಣ ತುಂಬಲು ಹೋಗುವುದಾಗಿ ಹೇಳಿದ ಅಮರನಾಥ್ ಮತ್ತು ಗೌರೀಶ್‍ ಕ್ಯಾಷ್‍ಬ್ಯಾಗ್‍ನಲ್ಲಿದ್ದ 26 ಲಕ್ಷ ರೂ.ಗಳೊಂದಿಗೆ ಪರಾರಿಯಾಗಿದ್ದಾರೆ ಎಂದು ಮ್ಯಾನೇಜ್‍ಮೆಂಟ್ ಸರ್ವೀಸ್‍ನ ಮ್ಯಾನೇಜರ್ ಪಾರ್ಥಿಬನ್ ವಿವೇಕನಗರ ಪೊಲೀಸ್‍ ಠಾಣೆಗೆ ದೂರು ನೀಡಿದ್ದಾರೆ.

ಭಾರೀ ಹಣದೊಂದಿಗೆ ಪರಾರಿಯಾಗಿರುವ ಆರೋಪಿಗಳಿಬ್ಬರು ಪೊಲೀಸರಿಗೆ ಇದುವರೆಗೂ ಸಿಕ್ಕಿಬಿದ್ದಿಲ್ಲ.

ವಿವಿಧ ಬ್ಯಾಂಕ್‍ಗಳ ಎಟಿಎಂಗಳಿಗೆ ಹಣ ತುಂಬುವ ಕಸ್ಟೋಡಿಯನ್‍ಗಳಾಗಿದ್ದ ಅಮರನಾಥ್ ಮತ್ತುಗೌರೀಶ್ ಡಿ.6ರಿಂದ 10ರ ವರೆಗೆ ಎಟಿಎಂಗಳಿಗೆ ಹಣತುಂಬಲು ಹೋದವರು ಇದುವರೆಗೂ ವಾಪಸ್ ಬರದೆ ಸಂಸ್ಥೆಗೆ ಮೋಸ ಮಾಡಿದ್ದಾರೆ ಎಂದು ಪಾರ್ಥಿಬನ್ ದೂರಿದ್ದಾರೆ.

10ನೆ ತಾರೀಖು ವಾಪಸ್ ಬರಬೇಕಾದವರು ಒಂದೆರಡು ದಿನ ತಡವಾಗಿ ಬರಬಹುದು ಎಂದು ಇದುವರೆಗೂ ಕಾದು ನೋಡಿದೆವು.ಆದರೆ, ಅವರು ವಾಪಸಾಗದಿದ್ದಾಗ ಅವರ ಮೊಬೈಲ್ ಸಂಪರ್ಕಿಸಲು ಯತ್ನಿಸಿದಾಗ ಮೊಬೈಲ್‍ಗಳು ಸ್ವಿಚ್ಡ್ ಆಫ್‍ ಆಗಿದ್ದವು. ಹೀಗಾಗಿ ಅನುಮಾನಗೊಂಡು ದೂರು ನೀಡಲಾಗಿದೆ ಎಂದು ಪಾರ್ಥಿಬನ್ ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ವಿವೇಕನಗರ ಪೊಲೀಸರು ಭಾರೀ ಹಣದೊಂದಿಗೆ ಪರಾರಿಯಾಗಿರುವ ಆರೋಪಿಗಳಿಬ್ಬರ ಬಂಧನಕ್ಕೆಜಾಲ ಬೀಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ