
ಕೊಚ್ಚಿ: ಕೇರಳ ಲವ್ ಜಿಹಾದ್ ಪ್ರಕರಣದ ಯುವತಿ ಹಾದಿಯಾ ತಂದೆ ಅಶೋಕನ್ ಅವರು ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಇಂದು ತಿರುವನಂತಪುರದಲ್ಲಿ ಕೆಎಂ ಅಶೋಕನ್ ಅವರು ಬಿಜೆಪಿ ಪಕ್ಷದ ಸದಸ್ಯತ್ವ ಪಡೆದಿದ್ದಾರೆ. ಬಿಜೆಪಿ ಸೇರ್ಪಡೆ ಬಳಿಕ ಮಾತನಾಡಿದ ಅಶೋಕನ್ ಅವರು ನಾನು ಕಳೆದ ಮೂರು ವರ್ಷಗಳ ಹಿಂದೆಯೇ ಬಿಜೆಪಿ ಸೇರ್ಪಡೆಯಾಗಿದ್ದೆ. ಆದರೆ ಈಗ ನನಗೆ ಅಧಿಕೃತವಾಗಿ ಬಿಜೆಪಿ ಸದಸ್ಯತ್ವ ಸಿಕ್ಕಿದೆ ಎಂದು ಹೇಳಿದರು.
ಅಂತೆಯೇ ಇದಕ್ಕೂ ಮೊದಲು ನಾನು ಕಮ್ಯುನಿಸ್ಟ್ ಪಕ್ಷದಲ್ಲಿದ್ದೆ. ಆದರೆ ಪಕ್ಷದ ಸಿದ್ಧಾಂತಗಳು ಮತ್ತು ಅಜೆಂಡಾಗಳು ಇಷ್ಟವಾಗದೇ ಅಲ್ಲಿಂದ ಹೊರನಡೆದೆ ಎಂದು ಹೇಳಿದರು. ಅಂತೆಯೇ ಶಬರಿಮಲೆ ವಿವಾದದ ಕುರಿತು ಬಿಜೆಪಿ ನಡೆಸುತ್ತಿರುವ ಹೋರಾಟದಲ್ಲೂ ಪಾಲ್ಗೊಳ್ಳುತ್ತೇನೆ ಎಂದು ಘೋಷಣೆ ಮಾಡಿರುವ ಅಶೋಕನ್ ಅವರು, ಶಬರಿಮಲೆ ವಿವಾದ ಸಂಬಂಧ ಸುಪ್ರೀಂ ಕೋರ್ಚ್ ನೀಡಿರುವ ತೀರ್ಪು ಮರು ಪರಿಶೀಲನೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಈ ಹಿಂದೆ ತಮ್ಮ ಪುತ್ರಿ ಲವ್ ಜಿಹಾದ್ ಗೆ ಬಲಿಯಾಗಿದ್ದಾಳೆ ಎಂದು ಆರೋಪಿಸಿ ಅಶೋಕನ್ ಅವರು ಕೇರಳ ಹೈಕೋರ್ಟ್ ಮೊರೆ ಹೋಗಿದ್ದರು. ಇದೇ ದೇಶಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಹಾದಿಯಾ ಶಫೀನ್ ಜಹಾನ್ ಎಂಬ ವ್ಯಕ್ತಿಯನ್ನು ಪ್ರೀತಿಸಿ ವಿವಾಹವಾಗಿದ್ದರು. ಇದನ್ನು ವಿರೋಧಿಸಿದ್ದ ಅಶೋಕನ್ ಇದು ಲವ್ ಜಿಹಾದ್. ಹೀಗಾಗಿ ತಮ್ಮ ಪುತ್ರಿಯ ವಿವಾಹವನ್ನು ಮಾನ್ಯ ಮಾಡಬಾರದು ಎಂದು ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು.
ಅಶೋಕನ್ ಅವರಿಗೆ ಹಲವು ಹಿಂದೂಪರ ಸಂಘಟನೆಗಳು ಸಾಥ್ ನೀಡಿದ್ದವು. ಆದರೆ ಹಾದಿಯಾ ಪರ ಮತ್ತು ವಿರೋಧ ವ್ಯಾಪಕ ಪ್ರತಿಭಟನೆಗಳು ಕೂಡ ನಡೆದಿದ್ದವು. ಆದರೆ ಈ ಸಂಪಂಧ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ಹಾದಿಯಾಗೆ ತನ್ನ ಗಂಡನನ್ನು ಆಯ್ಕೆ ಮಾಡುವ ಮತ್ತು ಆತನೊಂದಿಗೆ ಬಾಳುವ ಎಲ್ಲಾ ರೀತಿಯ ಹಕ್ಕಿದೆ ಎಂದು ಮಹತ್ವದ ತೀರ್ಪು ನೀಡಿತ್ತು.
Hadiya’s father, K M Ashokan joins, BJP