ಬಿಜೆಪಿ ಆದಾಯದಲ್ಲಿ ಇಳಿಕೆ!; 2017-18ನೇ ಸಾಲಿನಲ್ಲಿ 1,027 ಕೋಟಿ ರೂ. ಸಂಗ್ರಹಿಸಿದ ಕಮಲ ಪಕ್ಷ

ನವದೆಹಲಿ: 2017-18ನೇ ಸಾಲಿನಲ್ಲಿ  ಬಿಜೆಪಿ ಒಟ್ಟು 1,027 ಕೋಟಿ ರೂ. ಆದಾಯ ಗಳಿಕೆ ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬಿಜೆಪಿಯ ಒಟ್ಟು ಆದಾಯದಲ್ಲಿ ಕೊಂಚ ಇಳಿಕೆ ಆಗಿದೆ.

ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಈ ಬಗ್ಗೆ ವರದಿ ಬಿಡುಗಡೆ ಮಾಡಿದೆ. 2017-18ನೇ ಸಾಲಿನಲ್ಲಿ ಬಿಜೆಪಿ 1,027 ಕೋಟಿ ರೂ. ಗಳಿಕೆ ಮಾಡಿದ್ದು, ಅದರಲ್ಲಿ ಶೇ. 74 ಅಂದರೆ, 758 ಕೋಟಿ ರೂ. ಹಣವನ್ನು ವ್ಯಯಿಸಿದೆ. 2016-17ನೇ ಸಾಲಿನಲ್ಲಿ ಬಿಜೆಪಿ ಆದಾಯ 1,034 ಕೋಟಿ ರೂ. ಆಗಿತ್ತು. ಹಾಗಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಆದಾಯದಲ್ಲಿ 7 ಕೋಟಿ ರೂ. ಇಳಿಕೆ ಆಗಿದೆ.

ಪ್ರಮುಖ ರಾಷ್ಟ್ರೀಯ ಪಕ್ಷಗಳಲ್ಲೊಂದಾಗಿರುವ ಕಾಂಗ್ರೆಸ್​​ ಇನ್ನಷ್ಟೇ ಆದಾಯ ವರದಿಯನ್ನು ಸಲ್ಲಿಕೆ ಮಾಡಬೇಕಿದೆ. ಇನ್ನು, ಬಿಎಸ್​ಪಿ 51.7 ಕೋಟಿ ರೂ. ಗಳಿಕೆ ಮಾಡಿದ್ದು, ಅದರಲ್ಲಿ 14.78 ಕೋಟಿ ರೂ. ಮಾತ್ರ ಬಳಕೆ ಆಗಿದೆ. ಎನ್​ಸಿಪಿ ಪಕ್ಷ ಮಾತ್ರ ಗಳಿಕೆಗಿಂತ ಹೆಚ್ಚಿನ ಹಣವನ್ನು ವ್ಯಯಿಸಿದೆ. 8.15 ಕೋಟಿ ರೂ. ಆದಾಯ ಬಂದರೆ, ಅದರಲ್ಲಿ 8.84 ಕೋಟಿ ರೂ. ಖರ್ಚುಮಾಡಿದೆ. 6 ರಾಷ್ಟ್ರೀಯ ಪಕ್ಷಗಳು ಶೇ. 86.91 ಹಣವನ್ನು ದೇಣಿಗೆ ರೂಪದಲ್ಲಿ ಸಂಗ್ರಹವಾಗಿದೆ.

2017-18 ಅವಧಿಯಲ್ಲಿ 210 ಕೋಟಿ ರೂ. ಹಣವನ್ನು ಚುನಾವಣಾ ಬಾಂಡ್​ಗಳ ಮೂಲಕವೇ ಸಂಗ್ರಹ ಮಾಡಿರುವುದಾಗಿ ಬಿಜೆಪಿ ಹೇಳಿದೆ. ಕೆಲ ಸಂಸ್ಥೆಗಳು ಬಿಜೆಪಿಗೆ ಕಮಿಷನ್​ಗಳನ್ನು ಚುನಾವಣಾ ಬಾಂಡ್​ಗಳ ಮೂಲಕ ನೀಡಿವೆ ಎಂದು ವಿಪಕ್ಷಗಳು ಆರೋಪಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ