ಸರಬ್​ಜಿತ್ ಸಿಂಗ್ ಹತ್ಯೆಯ ಶಂಕಿತ ಆರೋಪಿಗಳ ಖುಲಾಸೆಗೊಳಿಸಿದ ಪಾಕಿಸ್ತಾನ ಕೋರ್ಟ್

ಲಾಹೋರ್: ಪಾಕಿಸ್ತಾನ ಜೈಲಿನಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದ ಭಾರತೀಯ ಮೂಲದ ಖೈದಿ ಸರಬ್​ಜಿತ್ ಸಿಂಗ್ ಶಂಕಿತ ಕೊಲೆ ಆರೋಪಿಗಳನ್ನು ಪಾಕ್ ನ್ಯಾಯಾಲಯ ಖುಲಾಸೆಗೊಳಿಸಿದೆ.

ಮರಣ ದಂಡನೆ ಗುರಿಯಾಗಿರುವ ಅಮಿರ್ ಮತ್ತು ಮುದಾಸರ್ ಎಂಬ ಖೈದಿಗಳನ್ನು ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ಕೋರ್ಟ್​ ಖುಲಾಸೆಗೊಳಿಸಿ ಆದೇಶಿ ಹೊರಡಿಸಿದೆ. ಶಂಕಿತ ಆರೋಪಿಗಳ ವಿರುದ್ಧ ಒಂದು ಚಿಕ್ಕ ಸಾಕ್ಷಿಗಳು ದೊರೆತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಪ್ರಕರಣ?

1990ರ ಲಾಹೋರ್ ಹಾಗೂ ಮುಲ್ತಾನ್​ನಲ್ಲಿ ನಡೆದ ಬಾಂಬ್ ಸ್ಫೋಟಗಳಲ್ಲಿ 14 ಮಂದಿ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಸರಬ್​ಜಿತ್ ಸಿಂಗ್ ಭಾಗಿಯಾಗಿದ್ದ ಎಂದು ಪಾಕಿಸ್ತಾನ ಆರೋಪಿಸಿತ್ತು.  ಅಲ್ಲದೇ ಗೂಢಚರ್ಯೆ ಆರೋಪವು ಸರಬ್‌ಜಿತ್‌ ವಿರುದ್ಧ ಕೇಳಿ ಬಂದಿತ್ತು. ಬಳಿಕ ಸರಬ್​ಜಿತ್ ಸಿಂಗ್​ನನ್ನು  ಭಾರತ -ಪಾಕ್ ಗಡಿ ಭಾಗದಲ್ಲಿ ಬಂಧಿಸಲಾಗಿತ್ತು. ಈ ಪ್ರಕರಣದಿಂದ ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಬಂಧ ಮತ್ತಷ್ಟು ಬಿಗಡಾಯಿಸಿತ್ತು. ಸರಬ್​ಜಿತ್ ಬಿಡುಗಡೆಗೆ ಆಗ್ರಹಿಸಿ ಭಾರತದಲ್ಲಿ ವ್ಯಾಪಕ ಪ್ರತಿಭಟನೆ ನಡೆದಿತ್ತು.

ಅಂತಿಮವಾಗಿ 2013ರಲ್ಲಿ ಲಾಹೋರ್​ನ ಕೋಟ್ ಲಕ್​ಪತ್ ಜೈಲಿನಲ್ಲಿ ಸರಬ್​ಜಿತ್ ಸಿಂಗ್ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರು. ಸರಬ್​ಜಿತ್ ಕುಟುಂಬಸ್ಥರು ಇದೊಂದು ಕೊಲೆ ಎಂದು ಆರೋಪಿಸಿದರೆ, ಪಾಕಿಸ್ತಾನ ಹೃದಯಾಘಾತದಿಂದ ಸರಬ್​ಜಿತ್ ಮೃತಪಟ್ಟಿದ್ದಾರೆ ಎಂದು ವಾದಿಸಿತ್ತು. ಪ್ರಕರಣ ಸಂಬಂಧ ಅಮಿರ್ ಮತ್ತು ಮುದಾಸರ್ ಎಂಬ ಖೈದಿಗಳನ್ನು ಬಂಧಿಸಲಾಗಿತ್ತು. ಆದರೀಗ ಸಾಕ್ಷ್ಯಾಧಾರಗಳ ಕೊರತೆಯಿಂದ ಇವರಿಬ್ಬರನ್ನು ಖುಲಾಸೆಗೊಳಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ