ಉಪಮುಖ್ಯಮಂತ್ರಿ ಅವರಿಂದ ರೌಡಿ ಶೀಟರ್ ಗಳಿಗೆ ಖಡಕ್ ಎಚ್ಚರಿಕೆ

ಬೆಂಗಳೂರು, ಡಿ.15-ರೌಡಿಸಂ ಮಾಡಿದರೆ ಹುಷಾರ್..! ಪೊಲೀಸರು ಗುಂಡು ಹಾರಿಸಿ ನಿಮ್ಮ ಕಾಲು ಮುರೀತಾರೆ… ಹೀಗಂತ ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದವರು ಗೃಹಖಾತೆ ಹೊಂದಿರುವ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು.

ಅಪರಾಧ ಚಟುವಟಿಕೆಗಳನ್ನು ಮಾಡುವವರಿಗೆ, ಕಾನೂನು ಬಾಹಿರ ಕೃತ್ಯಗಳನ್ನು ನಡೆಸುವವರ ಕಾಲಿಗೆ ಪೊಲೀಸರು ಗುಂಡು ಹೊಡೆದು ಎಡೆಮುರಿ ಕಟ್ಟಲಿದ್ದಾರೆ ಎಚ್ಚರವಾಗಿರಿ.ಸಮಾಜದಲ್ಲಿ ಶಾಂತಿ ನೆಲೆಸಬೇಕು, ಶಿಸ್ತು ಕಾಪಾಡಬೇಕು ಎಂದು ಹೇಳಿದರು.

ನೂತನವಾಗಿ ನಿರ್ಮಿಸಲಾಗಿರುವ ದೇವರಜೀವನಹಳ್ಳಿ ಪೊಲೀಸ್ ಠಾಣೆಯನ್ನು ಲೋಕಾರ್ಪಣೆಗೊಳಿಸಿದ ನಂತರ ಮಾತನಾಡಿದ ಅವರು, ಡಿಜೆ ಹಳ್ಳಿಯಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನರಿದ್ದಾರೆ.
ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಂಡರೆ ಜೈಲು-ಬೇಲು ಎಂದು ಓಡಾಡಿಕೊಂಡಿರಬೇಕಾಗುತ್ತದೆ.ಜೀವನ ಹಾಳುಮಾಡಿಕೊಳ್ಳಬೇಡಿ ಎಂದು ಸಲಹೆ ಮಾಡಿದರು.

ಯಾವುದೇ ಒಂದು ಪ್ರದೇಶದಲ್ಲಿ 300 ಅಪರಾಧ ಪ್ರಕರಣಗಳು ವರದಿಯಾದರೆ ಅಂತಹ ಸ್ಥಳದಲ್ಲಿ ಪೊಲೀಸ್ ಠಾಣೆ ನಿರ್ಮಿಸಲಾಗುತ್ತದೆ. ಆದರೆ, ಡಿಜೆ ಹಳ್ಳಿಯಲ್ಲಿ 300 ರಿಂದ 400 ಅಪರಾಧ ಪ್ರಕರಣಗಳು ಜರುಗುತ್ತಿವೆ. ಹೀಗಾಗಿ ಹೊಸ ಪೊಲೀಸ್ ಠಾಣೆಯನ್ನು ನಿರ್ಮಿಸಲಾಗಿದೆ ಎಂದರು.

ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಎಲ್ಲ ಕಡೆ ಸಿಸಿಟಿವಿಗಳನ್ನು ಅಳವಡಿಸಲಾಗಿದೆ.10 ಸಾವಿರ ಮೊಕದ್ದಮೆಗಳು ದಾಖಲಾಗಿವೆ. ನಾನು ಇತ್ತೀಚೆಗೆ ಫ್ರಾನ್ಸ್ ದೇಶಕ್ಕೆ ಭೇಟಿ ನೀಡಿದ್ದಾಗ ಅಲ್ಲೂ ಸಾಕಷ್ಟು ಸಮಸ್ಯೆಗಳಿವೆ. ಆದರೆ, ಸಮರ್ಪಕವಾಗಿ ನಿರ್ವಹಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ಪೊಲೀಸ್ ಇಲಾಖೆಯಲ್ಲಿ ಹೊಸ ಹೊಸ ಪ್ರಯೋಗ ನಡೆಯುತ್ತಿವೆ. 165 ಕೇಂದ್ರಗಳಲ್ಲಿ ಹೈ ರೆಸಲ್ಯೂಷನ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.ಬೆಂಗಳೂರಿನಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಾಗಿದೆ.ಇನ್ನೂ ಕಡಿಮೆಯಾಗಬೇಕಿದೆ ಎಂದರು.

ಪೊಲೀಸ್ ಇಲಾಖೆಯಲ್ಲಿ ಶಿಸ್ತು ಕಡಿಮೆಯಾಗುತ್ತಿದೆ.ಮೇಲಾಧಿಕಾರಿಯೊಬ್ಬರ ಶಿಸ್ತು ಕಡಿಮೆಯಾದರೆ ಅವರ ಕೈ ಕೆಳಗಿನ ಎಲ್ಲ ಸಿಬ್ಬಂದಿಯ ಮೇಲೂ ಪರಿಣಾಮ ಬೀರುತ್ತದೆ.ಶಿಸ್ತು ಉಲ್ಲಂಘಿಸಿದರೆ ಕಠಿಣ ಕ್ರಮ ಜರುಗಿಸಲಾಗುತ್ತದೆ.ಹಿರಿಯ ಅಧಿಕಾರಿಗಳು ಶಿಸ್ತು ಕಾಪಾಡಬೇಕು.ಪೊಲೀಸ್ ಇಲಾಖೆ, ಮಿಲಿಟರಿಯಲ್ಲಿ ಶಿಸ್ತು ಬಹಳ ಮುಖ್ಯವಾಗಿರುತ್ತದೆ ಎಂದರು.

ನಗರದಲ್ಲಿ ಭೂ ಕಬಳಿಕೆ ಜಾಸ್ತಿಯಾಗುತ್ತಿದೆ.ಪ್ರತಿದಿನ ಜನಸಾಮಾನ್ಯರು ದೂರು ನೀಡುತ್ತಿದ್ದಾರೆ.ಜಮೀನು ಒತ್ತುವರಿ ಮಾಡುವುದು, ಖಾಲಿ ಜಾಗಗಳಿಗೆ ಬೇಲಿ ಹಾಕುವುದು, ಕಟ್ಟಡಗಳನ್ನು ಅಕ್ರಮವಾಗಿ ಕಟ್ಟುವ ದೂರುಗಳು ಬರುತ್ತಿವೆ. ಇವುಗಳಿಗೆ ಕಡಿವಾಣ ಹಾಕಬೇಕಾಗಿದೆ ಎಂದು ಅವರು ಹೇಳಿದರು.

ಅದೇ ರೀತಿ ನಗರದಲ್ಲೂ ಸಮಸ್ಯೆಗಳ ನಿರ್ವಹಣೆಗೆ ಪ್ರಯತ್ನ ಮಾಡುತ್ತಿದ್ದೇವೆ. 167 ಕಡೆ ಜೀರೊ ಟಾಲರೆನ್ಸ್ ಜಂಕ್ಷನ್‍ಗಳನ್ನು ಮಾಡಲಾಗಿದೆ.ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಗೃಹ ಇಲಾಖೆಯಲ್ಲಿ ಯಾವುದೇ ನೇಮಕಾತಿ ಮಾಡಿರಲಿಲ್ಲ. ನಾನು ಗೃಹಸಚಿವನಾದಾಗಿನಿಂದ ಈವರೆಗೆ 35 ಸಾವಿರ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.2 ಸಾವಿರ ಪಿಎಸ್‍ಐಗಳನ್ನು ಭರ್ತಿ ಮಾಡಿದ್ದೇನೆ. ಇದರಿಂದ ಸಿಬ್ಬಂದಿ ಕೊರತೆ ನಿವಾರಣೆಯಾಗುವುದರ ಜತೆಗೆ ಟ್ರಾಫಿಕ್ ಸಮಸ್ಯೆ ಕೂಡ ಕಡಿಮೆಯಾಗುತ್ತದೆ ಎಂದು ಹೇಳಿದರು.

ಶಂಕುಸ್ಥಾಪನೆಯಾದ ಎಷ್ಟೋ ಕಟ್ಟಡಗಳು ಉದ್ಘಾಟನೆಯಾಗೋದೇ ಇಲ್ಲ. ಆದರೆ, ಒಂದು ವರ್ಷದ ಹಿಂದೆ ನಾನೇ ಡಿಜೆ ಹಳ್ಳಿ ಪೊಲೀಸ್ ಠಾಣೆಗೆ ಅಡಿಗಲ್ಲು ಹಾಕಿದ್ದೆ.ಈಗ ಆ ಕಟ್ಟಡವನ್ನು ನಾನೇ ಉದ್ಘಾಟನೆ ಮಾಡುತ್ತಿರುವುದು ಸಂತೋಷ ತಂದಿದೆ ಎಂದು ಹೇಳಿದರು.

ಹಿಂದಿನ ಪೊಲೀಸ್ ಆಯುಕ್ತ ಮೆಗರಿಕ್ ಅವರು ಪೊಲೀಸ್ ನಿಧಿಯಲ್ಲಿ 3 ಕೋಟಿ ಹಣವಿದೆ ಎಂದಿದ್ದರು.ಈಗ ನಿರ್ಮಿಸಿರುವ ಡಿಜೆ ಹಳ್ಳಿ ಪೊಲೀಸ್ ಠಾಣೆ ಸ್ಥಳ ಬಿಡಿಎಗೆ ಸೇರಿದ್ದು.9 ಕೋಟಿ ಬೆಲೆ ಬಾಳುವ ಪ್ರದೇಶವನ್ನು ಕಮ್ಯುನಿಟಿ ಸೈಟ್ ಅಡಿಯಲ್ಲಿ ಎರಡೂವರೆ ಕೋಟಿ ರೂ.ಗಳಿಗೆ ಪಡೆಯಲಾಯಿತು.
ಇದೀಗ ಅಂತಹ ನಿವೇಶನದಲ್ಲಿ ಅತ್ಯಾಧುನಿಕ ಪೊಲೀಸ್ ಠಾಣೆ ನಿರ್ಮಿಸಲಾಗಿದೆ ಎಂದು ಪರಮೇಶ್ವರ್ ಹೇಳಿದರು.

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಶಾಸಕರಾದ ಅಖಂಡ ಶ್ರೀನಿವಾಸಮೂರ್ತಿ, ರಮೇಶ್‍ಗೌಡ, ಮಾಜಿ ಮೇಯರ್ ಸಂಪತ್‍ರಾಜ್, ನಗರ ಪೊಲೀಸ್ ಆಯುಕ್ತ ಸುನಿಲ್‍ಕುಮಾರ್, ಹೆಚ್ಚುವರಿ ಪೊಲೀಸ್ ಆಯುಕ್ತರಾದ ಅಲೋಕ್‍ಕುಮಾರ್, ಸೀಮಂತ್‍ಕುಮಾರ್‍ಸಿಂಗ್, ಹರಿಶೇಖರನ್ ಮತ್ತಿತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ