ಕುಖ್ಯಾತ ಶ್ರೀಗಂಧ ಕಳ್ಳರ ಬಂಧನ

ಬೆಂಗಳೂರು, ಡಿ.11- ಪೆÇಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಕುಖ್ಯಾತ ಶ್ರೀಗಂಧ ಚೋರ ಕಬ್ಬನ್‍ಪಾರ್ಕ್ ಪೊಲೀಸರು ಹಾರಿಸಿದ ಗುಂಡು ತಗುಲಿ ಗಾಯಗೊಂಡಿದ್ದು, ಜತೆಗೆ ಆತನ ನಾಲ್ಕು ಮಂದಿ ಸಹಚರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮುಜಾದ್ದಿನ್‍ವುಲ್ಲಾ ಗುಂಡೇಟಿನಿಂದ ಗಾಯಗೊಂಡಿರುವ ಕುಖ್ಯಾತ ಶ್ರೀಗಂಧಚೋರ.

ಮುಜಾದ್ದಿನ್‍ವುಲ್ಲಾ ಜತೆಗೆ ಇಮ್ಜಾದ್‍ವುಲ್ಲಾ, ತಮಿಳುನಾಡು ಮೂಲದ ಲಕ್ಷ್ಮಣ ಅಲಿಯಾಸ್ ಕುಳ್ಳಿಯಾ, ರಂಗನಾಥನ್ ಹಾಗೂ ರಾಮಸ್ವಾಮಿ ಬಂಧಿತ ನಾಲ್ಕು ಮಂದಿ ಆರೋಪಿಗಳು.

ಇತ್ತೀಚೆಗೆ ನಗರದಲ್ಲಿ ಬೆಳಗಿನ ಜಾವ ಶ್ರೀಗಂಧದ ಮರಗಳ ಕಳವು ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಕಬ್ಬನ್‍ಪಾರ್ಕ್ ಠಾಣೆ ಇನ್ಸ್‍ಪೆಕ್ಟರ್ ಐಯ್ಯಣ್ಣರೆಡ್ಡಿ ನೇತೃತ್ವದಲ್ಲಿ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದ್ದು, ಈ ತಂಡ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಕಾರ್ಯಾಚರಣೆಗಿಳಿದ ವಿಶೇಷ ತಂಡದ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಶ್ರೀಗಂಧ ಚೋರರಾದ ಲಕ್ಷ್ಮಣ, ರಂಗನಾಥನ್ ಹಾಗೂ ರಾಮಸ್ವಾಮಿ ಎಂಬುವವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದರು.

ಬಂಧಿತ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ನಿನ್ನೆ ರಾತ್ರಿ ಚಿಕ್ಕಬಳ್ಳಾಪುರದಲ್ಲಿ ತಲೆಮರೆಸಿಕೊಂಡಿದ್ದ ಮುಜಾದ್ದಿನ್‍ವುಲ್ಲಾ ಮತ್ತು ಇಮ್ಜಾದ್‍ವುಲ್ಲಾ ಅವರನ್ನು ಬಂಧಿಸಿ ನಗರಕ್ಕೆ ಕರೆತರಲಾಗುತ್ತಿತ್ತು.

ಇಂದು ಬೆಳಗಿನ ಜಾವ 1.30ರ ಸಂದರ್ಭದಲ್ಲಿ ಕಬ್ಬನ್‍ಪಾರ್ಕ್ ಒಳಭಾಗವಿರುವ ಕ್ವೀನ್ಸ್ ರಸ್ತೆಯ ಸಮಾನಾಂತರ ರಸ್ತೆಯಲ್ಲಿ ಹೋಗುತ್ತಿರಬೇಕಾದರೆ ಆರೋಪಿ ಮುಜಾದ್ದಿನ್‍ವುಲ್ಲಾ ಬೆಂಗಾವಲಿಗಿದ್ದ ಪೊಲೀಸ್ ಕೃಷ್ಣಮೂರ್ತಿ ಎಂಬುವವರನ್ನು ವಾಹನದಿಂದ ಕೆಳಕ್ಕೆ ತಳ್ಳಿ ಪರಾರಿಯಾಗಲು ಯತ್ನಿಸಿದ.
ಈ ಸಂದರ್ಭದಲ್ಲಿ ಇನ್ಸ್‍ಪೆಕ್ಟರ್ ಐಯ್ಯಣ್ಣರೆಡ್ಡಿ ಆರೋಪಿಗೆ ತಪ್ಪಿಸಿಕೊಳ್ಳಬೇಡ ಎಂದು ಎಚ್ಚರಿಕೆ ನೀಡಿದರೂ ಮುಜಾದ್ದಿನ್‍ವುಲ್ಲಾ ಕಬ್ಬನ್‍ಪಾರ್ಕ್‍ನಲ್ಲಿ ತಪ್ಪಿಸಿಕೊಂಡು ಓಡತೊಡಗಿದ.

ತಕ್ಷಣ ಐಯ್ಯಣ್ಣರೆಡ್ಡಿ ಅವರು ರಾತ್ರಿ ಗಸ್ತಿನಲ್ಲಿದ್ದ ಪಿಎಸ್‍ಐ ರಹೀಮ್ ಮತ್ತು ಸಿಬ್ಬಂದಿಗಳನ್ನು ಸಹಾಯಕ್ಕೆ ಬರಮಾಡಿಕೊಂಡು ಅವರ ಜತೆ ಕಬ್ಬನ್‍ಪಾರ್ಕ್‍ನಲ್ಲಿ ಆರೋಪಿಗಾಗಿ ಹುಡುಕಾಡುತ್ತಿದ್ದಾಗ ಪಾರ್ಕ್‍ನಲ್ಲಿರುವ ಬಿದಿರುಮೆಳೆ ಸಮೀಪ ಪಿಎಸ್‍ಐ ರಹೀಮ್ ಅವರನ್ನು ಕೆಳಗೆ ಬೀಳಿಸಿ ಎರಡೂ ಕೈಗಳಿಂದ ಅವರ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದು ಕೊಲೆ ಮಾಡಲು ಯತ್ನಿಸಿದ.

ಪೊಲೀಸರ ಮೇಲೆ ಹಲ್ಲೆ ಮಾಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಗಂಭೀರ ಎಚ್ಚರಿಕೆ ನೀಡಿದರೂ ಆತ ರಹೀಮ್ ಅವರ ಕುತ್ತಿಗೆ ಹಿಸುಕುವುದನ್ನು ನಿಲ್ಲಿಸದಿದ್ದಾಗ ಇನ್ಸ್‍ಪೆಕ್ಟರ್ ಐಯ್ಯಣ್ಣರೆಡ್ಡಿ ತಮ್ಮ ಬಳಿ ಇದ್ದ ಸರ್ವೀಸ್ ಪಿಸ್ತೂಲ್‍ನಿಂದ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಎಚ್ಚರಿಕೆ ನೀಡಿದರು.

ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಂತೆ ರಹೀಮ್ ಅವರನ್ನು ಬಿಟ್ಟ ಮುಜಾದ್ದಿನ್‍ವುಲ್ಲಾ ಸಮೀಪದಲ್ಲೇ ಬಿದ್ದಿದ್ದ ಬಿದಿರು ದೊಣ್ಣೆಯನ್ನು ಕೈಯಲ್ಲಿಡಿದು ತನ್ನ ಬಳಿಗೆ ಬರುತ್ತಿದ್ದ ಪಿಎಸ್‍ಐ ಸುರೇಶ್ ಅವರ ಮೇಲೆ ಹಲ್ಲೆ ಮಾಡಲು ಮುಂದಾದ.

ಆಗಲೂ ಐಯ್ಯಣ್ಣರೆಡ್ಡಿ ಶರಣಾಗುವಂತೆ ಆರೋಪಿಗೆ ಸೂಚಿಸಿದರೂ ಅದನ್ನು ಲೆಕ್ಕಿಸದೆ ನನ್ನ ಹತ್ತಿರ ಯಾರಾದರೂ ಬಂದರೆ ಅವರನ್ನು ಕೊಲೆ ಮಾಡುವುದಾಗಿ ಅಬ್ಬರಿಸುತ್ತ ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾದಾಗ ಐಯ್ಯಣ್ಣರೆಡ್ಡಿ ಅವರು ಪೊಲೀಸರ ರಕ್ಷಣೆಗಾಗಿ ಹಾರಿಸಿದ ಗುಂಡು ಆರೋಪಿ ಕಾಲಿಗೆ ತಗುಲಿ ಕುಸಿದು ಬಿದ್ದ.

ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ಆರೋಪಿಯನ್ನು ಕೂಡಲೇ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ ಪರಿಣಾಮ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಕೇಂದ್ರ ವಿಭಾಗದ ಡಿಸಿಪಿ ದೇವರಾಜ್ ಸುದ್ದಿಗೋಷ್ಠಿಯಲ್ಲಿಂದು ವಿವರ ನೀಡಿದರು.

ಮುಜಾದ್ದಿನ್ ಹಲ್ಲೆಯಿಂದ ಗಾಯಗೊಂಡಿದ್ದ ಪಿಎಸ್‍ಐ ರಹೀಮ್ ಹಾಗೂ ಹೆಡ್‍ಕಾನ್ಸ್‍ಟೆಬಲ್ ಕೃಷ್ಣಮೂರ್ತಿ ಅವರನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದರು.

60ಕ್ಕೂ ಹೆಚ್ಚು ಶ್ರೀಗಂಧ ಮರಗಳ ಕಳವು: ಪ್ರಮುಖ ಆರೋಪಿ ಮುಜಾದ್ದಿನ್‍ವುಲ್ಲಾ ತನ್ನ ಸಹಚರರಾದ ಅಮ್ಜದ್‍ವುಲ್ಲಾ, ಇಮ್ಜಾದ್‍ವುಲ್ಲಾ, ಲಕ್ಷ್ಮಣ, ರಂಗನಾಥ, ರಾಮಸ್ವಾಮಿ, ಇಳಯರಾಜ, ಸತ್ಯರಾಜ, ಗೋವಿಂದಸ್ವಾಮಿ ಹಾಗೂ ಶಿವಲಿಂಗ ಎಂಬುವವರೊಂದಿಗೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 60ಕ್ಕೂ ಹೆಚ್ಚು ಶ್ರೀಗಂಧದ ಮರಗಳನ್ನು ಕಳವು ಮಾಡಿದ್ದರು.

ಹಗಲು ವೇಳೆ ಶ್ರೀಗಂಧದ ಮರಗಳನ್ನು ಗುರುತಿಸಿ ಬೆಳಗಿನ ಜಾವ 4 ರಿಂದ 5ರ ಸಮಯದಲ್ಲಿ ಬ್ಯಾಟರಿ ಆಪರೇಟೆಡ್ ಕಟಿಂಗ್ ಮಿಷನ್‍ನಿಂದ ಶಬ್ದ ಬರದಂತೆ ಕ್ಷಣಮಾತ್ರದಲ್ಲಿ ಶ್ರೀಗಂಧದ ಮರಗಳನ್ನು ಕಳವು ಮಾಡಿ ಪರಾರಿಯಾಗುತ್ತಿದ್ದರು.

ಆರೋಪಿಗಳು ಕಬ್ಬನ್‍ಪಾರ್ಕ್, ಹೈಗ್ರೌಂಡ್ಸ್, ಕೋರಮಂಗಲ, ಮಹದೇವಪುರ, ವಿಧಾನಸೌಧ, ಸದಾಶಿವನಗರ, ಮಲ್ಲೇಶ್ವರಂ, ಕೊಡಿಗೇಹಳ್ಳಿ, ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 60ಕ್ಕೂ ಹೆಚ್ಚು ಶ್ರೀಗಂಧ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ಡಿಸಿಪಿ ದೇವರಾಜ್ ವಿವರಣೆ ನೀಡಿದರು.
ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳಿಗಾಗಿ ಜಾಲ ಬೀಸಲಾಗಿದ್ದು, ಆದಷ್ಟು ಶೀಘ್ರ ಅವರನ್ನು ಬಂಧಿಸಲಾಗುವುದು ಎಂದು ಅವರು ತಿಳಿಸಿದರು.

ಶ್ಲಾಘನೆ: ಕುಖ್ಯಾತ ಶ್ರೀಗಂಧ ಚೋರರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿರುವ ಕಬ್ಬನ್‍ಪಾರ್ಕ್ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಐಯ್ಯಣ್ಣರೆಡ್ಡಿ ನೇತೃತ್ವದ ವಿಶೇಷ ಪೊಲೀಸ್ ತಂಡದ ಕಾರ್ಯಾಚರಣೆಯನ್ನು ನಗರ ಪೊಲೀಸ್ ಆಯುಕ್ತ ಸುನಿಲ್‍ಕುಮಾರ್ ಅವರು ಮುಕ್ತಕಂಠದಿಂದ ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ