ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ವಿವಿಧ ಮಠಾಧೀಶರಿಂದ ಅಹೋರಾತ್ರಿ ಧರಣಗೆ ಸಜ್ಜು

ಬೆಳಗಾವಿ – ಆಡಳಿತದ ಪ್ರಮುಖ ಇಲಾಖೆಗಳನ್ನು ಬೆಳಗಾವಿಯ ಸುವರ್ಣ ಸೌಧಕ್ಕೆ ಸ್ಥಳಾಂತರಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ವಿವಿಧ ಮಠಗಳ ಮಠಾಧೀಶರು ಅಹೋರಾತ್ರಿ ಧರಣಿ ನಡೆಸಲು ಮುಂದಾಗಿದ್ದಾರೆ.

ಬೆಳಗಾವಿಯ ಸುವರ್ಣಸೌಧದಲ್ಲಿ ನಾಳೆಯಿಂದ ಆರಂಭಗೊಳ್ಳುವ ವಿಧಾನಮಂಡಲ ಚಳಿಗಾಲದ ಅಧಿವೇಶನದ ವೇಳೆ ಪ್ರತಿಭಟನೆಗಳ ಕಾವುಜೋರಾಗಲಿದೆ.
ಉಕ್ಕೇರಿ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳು ಧರಣಿಗೆ ಮುಂದಾಗಿದ್ದು, ಅಧಿವೇಶನ ಮುಕ್ತಾಯಗೊಳ್ಳುವುದರ ಒಳಗಾಗಿ ಬೆಳಗಾವಿಗೆ ಸರ್ಕಾರದ ಪ್ರಮುಖ ಇಲಾಖೆಗಳನ್ನು ಸ್ಥಳಾಂತರಿಸಬೇಕು. ಇಲ್ಲವಾದರೆ ಪ್ರತ್ಯೇಕ ರಾಜ್ಯದ ಕೂಗು ಭುಗಿಲೇಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿಯಲ್ಲಿ ನಡೆಯಲಿರುವ ಪ್ರತಿ ಅಧಿವೇಶನವೂ ಕಾಟಾಚಾರದ ಪ್ರಕ್ರಿಯೆಯಾಗಿದೆ. ಇಲ್ಲಿ ಈ ಭಾಗಕ್ಕೆ ಸಂಬಂಧಪಟ್ಟ ಚರ್ಚೆಗಳು ನಡೆಯುವುದಿಲ್ಲ, ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ವಿಷಯಗಳೂ ಪ್ರಸ್ತಾಪವಾಗುವುದಿಲ್ಲ. ಸರ್ಕಾರ ಯಾವುದೇ ಹೊಸದಾಗಿ ಯೋಜನೆಗಳನ್ನೂ ಘೋಷಿಸುವುದಿಲ್ಲ. ಕೇವಲ ರಾಜಕೀಯ ಲಾಭಕ್ಕಾಗಿ ಅಧಿವೇಶನ ನಡೆಸಲಾಗುತ್ತಿದೆ. ಆದರೆ, ಈ ಬಾರಿ ಆ ರೀತಿ ಆಗಬಾರದು. ಸರ್ಕಾರದ ಪ್ರಮುಖ ಇಲಾಖೆಗಳು ಸುವರ್ಣಸೌಧಕ್ಕೆ ಸ್ಥಳಾಂತರಗೊಳ್ಳಲೇಬೇಕೆಂದು ಶ್ರೀಗಳು ಪಟ್ಟು ಹಿಡಿದಿದ್ದಾರೆ.
ಇದರ ಜತೆಗೆ ಕಬ್ಬಿಗೆ ಸೂಕ್ತ ಬೆಲೆ ನೀಡಬೇಕು ಎಂದು ಒತ್ತಾಯಿಸಿ ರೈತ ಸಂಘಟನೆಗಳು ಅಹೋರಾತ್ರಿ ಧರಣಿ ನಡೆಸಲು ಮುಂದಾಗಿವೆ. ಅಲರವಾಡ್ ಕ್ರಾಸ್, ಕೊಂಡಸ್ ಕೊಪ್ಪದಲ್ಲಿ ರೈತರ ಪ್ರತಿಭಟನೆಗೆ ಬಿಜೆಪಿ ವೇದಿಕೆ ಕಲ್ಪಿಸಿದೆ. ಶಿಕ್ಷಕರ ಎನ್‍ಪಿಎಸ್, ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿವೆ.

ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿದ್ದಗೌಡ ಮೊದಗಿ ಮಾತನಾಡಿ, ನಮಗೆ ಅನ್ಯಾಯವಾಗಿದೆ. ಕಬ್ಬಿಗೆ ಸೂಕ್ತ ಬೆಲೆ ನೀಡುವವರೆಗೂ ನಾವು ಇಲ್ಲಿಂದ ಕದಲುವ ಮಾತೇ ಇಲ್ಲ ಎಂದಿದ್ದಾರೆ.

ಜಿಲ್ಲಾಡಳಿತದ ಮಟ್ಟದಲ್ಲಿ ರೈತರ ಸಮಸ್ಯೆ ಪರಿಹಾರ ಸಾಧ್ಯವಿಲ್ಲ. ರಾಜ್ಯಮಟ್ಟದಲ್ಲಿ ಪರಿಹಾರ ಮಾಡಬೇಕಾದ ಸಮಸ್ಯೆಗಳ ಬಗ್ಗೆ ಸರ್ಕಾರ ಆಶ್ವಾಸನೆ ಕೊಟ್ಟು ಜಾರಿಕೊಳ್ಳುತ್ತಿದೆ ಎಂದು ಕಿಡಿಕಾರಿದರು.

ಹುಕ್ಕೇರಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹತ್ತು ದಿನಗಳ ಒಳಗೆ ಕನಿಷ್ಠ 10 ಇಲಾಖೆಗಳನ್ನು ಸುವರ್ಣ ಸೌಧಕ್ಕೆ ಸ್ಥಳಾಂತರ ಮಾಡಬೇಕು. ಇಲ್ಲವಾದರೆ ಪ್ರತ್ಯೇಕ ಉತ್ತರ ಕರ್ನಾಟಕದ ಕೂಗು ಏಳಲಿದೆ ಎಂದು ಎಚ್ಚರಿಸಿದರು.

ಉತ್ತರ ಕರ್ನಾಟಕದ ಯಾವ ಶಾಸಕರೂ ಅಧಿವೇಶನಕ್ಕೆ ಗೈರಾಗಬಾರದು. ಪಕ್ಷಭೇದ ಮರೆತು ಎಲ್ಲರೂ ಚರ್ಚೆಯಲ್ಲಿ ಭಾಗವಹಿಸಬೇಕು. ಉತ್ತರ ಕರ್ನಾಟಕ ಅಭಿವೃದ್ಧಿಗೆ ಧ್ವನಿಯಾಗಬೇಕು ಎಂದು ಎಲ್ಲಾ ಶಾಸಕರಿಗೂ ಪತ್ರ ಬರೆಯಲಾಗಿದೆ ಎಂದರು.

ವಿವಿಧ ಪ್ರತಿಭಟನೆಗಳ ಬೇಡಿಕೆಗಳು:
* ಬೆಳಗಾವಿಯನ್ನೂ 2ನೇ ರಾಜಧಾನಿಯಾಗಿ ಘೋಷಣೆ ಮಾಡಬೇಕು
* ಸುವರ್ಣಸೌಧಕ್ಕೆ ಸೌಧಕ್ಕೆ ಕೆಲವು ಕಚೇರಿಗಳ ಸ್ಥಳಾಂತರ ಮಾಡಬೇಕು
* 10 ದಿನ ಬದಲಿಗೆ 21 ದಿನ ಅಧಿವೇಶನ ನಡೆಸಬೇಕು
* ಅಭಿವೃದ್ಧಿ ಕುರಿತು ಸ್ವಾಮೀಜಿಗಳು, ಹೋರಾಟಗಾರರ ಜತೆ ಸಿಎಂ ಚರ್ಚೆ ಮಾಡಬೇಕು
* ಉತ್ತರ ಕರ್ನಾಟಕ ಭಾಗದ ಶಾಸಕರು, ಸಚಿವರು ಅಧಿವೇಶನದಲ್ಲಿ ಅಭಿವೃದ್ಧಿ ಕುರಿತು ಹೋರಾಟ ಮಾಡಬೇಕು.

ಪೆÇಲೀಸ್ ಬಂದೋಬಸ್ತ್:

ಇಂದಿನಿಂದ ಸುವರ್ಣಸೌಧದಲ್ಲಿ ನಡೆಯುವ ಅಧಿವೇಶನಕ್ಕೆ ಬಿಗಿ ಭದ್ರತೆ ನೀಡಲು ಪೆÇಲೀಸ್ ಇಲಾಖೆ ಸಜ್ಜುಗೊಂಡಿದೆ.
ಬೆಳಗಾವಿ ಪೆÇಲೀಸ್ ಆಯುಕ್ತರು, ಎಸ್‍ಪಿ- 7, ಅಡಿಷನಲ್ -ಎಸ್‍ಪಿ 11, ಎಸಿಪಿ, ಡಿಎಸ್ಪಿ-34, ಸಿಪಿಐ-81, ಪಿಎಸ್ ಐ-227, ಎಎಸ್ ಐ- 251, ಕಾನ್‍ಸ್ಟೇಬಲ್‍ಗಳು -4071, ಮಹಿಳಾ ಕಾನ್‍ಸ್ಟೇಬಲ್‍ಗಳು -168 ಸೇರಿ ಒಟ್ಟಾರೆ 4874 ಪೆÇಲೀಸ್ ಸಿಬ್ಬಂದಿ ಅಧಿವೇಶನ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ.’

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ