ಇಂದಿನಿಂದ ಯಡಿಯೂರು ಕೆರೆಯಲ್ಲಿ ದೋಣಿ ವಿಹಾರ ಕೇಂದ್ರ ಆರಂಭ

ಬೆಂಗಳೂರು, ಡಿ.8- ಇತಿಹಾಸ ಪ್ರಸಿದ್ಧ ಯಡಿಯೂರು ಕೆರೆಯಲ್ಲಿ ಇಂದಿನಿಂದ ದೋಣಿ ವಿಹಾರ ಕೇಂದ್ರ ಆರಂಭವಾಗಿದೆ.

ಶಾಂತಲಾ ದೋಣಿ ವಿಹಾರ ಕೇಂದ್ರವನ್ನು ಮೇಯರ್ ಗಂಗಾಂಬಿಕೆ ಇಂದು ಲೋಕಾರ್ಪಣೆ ಮಾಡಿದರು.

ನಗರದ ಅತ್ಯುತ್ತಮ ಪಕ್ಷಿಧಾಮ ಎಂಬ ಖ್ಯಾತಿಗೆ ಒಳಗಾಗಿರುವ ಯಡಿಯೂರು ಕೆರೆಯಲ್ಲಿ 59 ದೇಶ-ವಿದೇಶಗಳ 141ಕ್ಕೂ ಹೆಚ್ಚು ವಿವಿಧ ಪ್ರಾಣಿ ಸಂಕುಲಗಳು ಸಂತಾನಾಭಿವೃದ್ಧಿ ಮಾಡುತ್ತಿದ್ದು, ಪ್ರಮುಖ ಯಾತ್ರಾ ಸ್ಥಳವಾಗಿರುವ ಯಡಿಯೂರು ಕೆರೆಯಲ್ಲಿ ದೋಣಿ ವಿಹಾರ ಕೇಂದ್ರ ಆರಂಭವಾಗಿರುವುದು ಮತ್ತೊಂದು ಹೆಮ್ಮೆಯ ಗರಿಯಾಗಿದೆ.

ಕೆರೆ ಆವರಣದಲ್ಲಿ ಬೀಡುಬಿಟ್ಟಿರುವ ಪಕ್ಷಿಗಳ ಸ್ವೇಚ್ಛತೆಗೆ ಧಕ್ಕೆಯಾಗಬಾರದು ಎಂಬ ಉದ್ದೇಶದಿಂದ ದೋಣಿ ವಿಹಾರ ಕೇಂದ್ರದಲ್ಲಿ ಮೋಟಾರು ಬೋಟ್ ಬಳಸದೆ ಕೇವಲ ಪೆಡಲ್ ಬೋಟ್‍ಗಳನ್ನು ಮಾತ್ರ ಉಪಯೋಗಿಸಲಾಗುತ್ತಿದೆ.

ಹೊಯ್ಸಳರ ಆಳ್ವಿಕೆಗೆ ಒಳಪಟ್ಟಿದ್ದ ಯಡಿಯೂರು ಗ್ರಾಮದೇವತೆ ಗಾಂಧಾಳಮ್ಮ ಪಾದುಕೆಗಳಿಗೆ ಪೂಜೆ ಸಲ್ಲಿಸಲು ಕ್ರಿ.ಶ.1107ರಲ್ಲಿ ಹೊಯ್ಸಳ ಚಕ್ರವರ್ತಿ ವಿಷ್ಣುವರ್ಧನ ಪಟ್ಟದ ರಾಣಿ ಶಾಂತಲಾ ಅವರು ಇಲ್ಲಿಗೆ ಬಂದು ಪೂಜೆ ಸಲ್ಲಿಸಿ ಅನ್ನಸಂತರ್ಪಣೆ ಮಾಡಿದ್ದರು. ಹೀಗಾಗಿ ದೋಣಿ ವಿಹಾರ ಕೇಂದ್ರಕ್ಕೆ ಶಾಂತಲಾ ದೋಣಿ ವಿಹಾರ ಕೇಂದ್ರ ಎಂದು ಹೆಸರಿಡಲಾಗಿದೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ತಿಳಿಸಿದರು.

ಕೆರೆಯಲ್ಲಿ ಬಳಕೆ ಮಾಡುತ್ತಿರುವ ದೋಣಿಗಳಿಗೆ ಹೊಯ್ಸಳ ರಾಜವಂಶದ ಪ್ರಮುಖರಾದ ಬಿಟ್ಟಿದೇವ, ಶಾಂತಲಾ, ಒಂದನೆ ಬಲ್ಲಾಳ, ಎರಡನೆ ನರಸಿಂಹ, ಸೋಮೇಶ್ವರ, ಎರಡನೆ ಬಲ್ಲಾಳ ಮೊದಲಾದವರ ಹೆಸರುಗಳನ್ನಿಡಲಾಗಿದೆ.

ದೋಣಿ ವಿಹಾರ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಉಪಮೇಯರ್ ಭದ್ರೇಗೌಡ, ಬಿಬಿಎಂಪಿ ಸದಸ್ಯೆ ಪೂರ್ಣಿಮಾ ರಮೇಶ್ ಮತ್ತಿತರರು ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ