ಕೇಂದ್ರ ಸರ್ಕಾರದ ಮುಂದೆ ಬಾಕಿಯಿರುವ ಪ್ರಸ್ತಾವನೆಗಳ ಅನುಮೋದನೆಗೆ ಸಂಸದರು ಒತ್ತಡ ತರಬೇಕು ಎಂದು ಸಿ.ಎಂ. ಮನವಿ

ಬೆಂಗಳೂರು, ಡಿ.4- ಕೇಂದ್ರ ಸರ್ಕಾರದ ಮುಂದಿರುವ ರಾಜ್ಯದ ನೆಲ, ಜಲ, ಕೈಗಾರಿಕೆ, ಕೃಷಿ, ವೈಮಾನಿಕ, ರಕ್ಷಣಾ ಇಲಾಖೆ ಸೇರಿದಂತೆ 15 ಇಲಾಖೆಗಳ ವಿವಿಧ ಪ್ರಸ್ತಾವನೆಗಳು ಬಾಕಿ ಇದ್ದು, ಅವುಗಳ ಅನುಮೋದನೆಗಾಗಿ ಸಂಸದರು ಒತ್ತಡ ತರಬೇಕೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು.

ಇಂದು ನಡೆದ ರಾಜ್ಯ ಸಂಸದರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಎಂ, ಕಳೆದ ಆರು ತಿಂಗಳಿನಿಂದ ತಾವೂ ಸೇರಿದಂತೆ ಸಂಬಂಧಪಟ್ಟ ಸಚಿವರು ಹಲವು ಸಭೆಗಳನ್ನು ನಡೆಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಸೇರಿದಂತೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ರಾಜ್ಯ ಸರ್ಕಾರದ ಪ್ರಸ್ತಾವನೆಗಳ ಬಗ್ಗೆ ಮನವಿ ಮಾಡಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.ರಾಜ್ಯ ಪ್ರತಿನಿಧಿಸುವ ಸಂಸದರು ಕೇಂದ್ರ ಸರ್ಕಾರದಲ್ಲಿ ಬಾಕಿ ಇರುವ ವಿವಿಧ ಯೋಜನೆಗಳ ಪ್ರಸ್ತಾವನೆಗಳ ಅನುಮೋದನೆಗೆ ವಿಳಂಬವಾಗದಂತೆ ಗಮನ ಹರಿಸಬೇಕು. ಬಾಕಿ ಇರುವ ಪ್ರಸ್ತಾವನೆಗಳ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆದು ತ್ವರಿತ ಅನುಷ್ಠಾನವಾಗುವಂತೆ ಕ್ರಮ ವಹಿಸಬೇಕೆಂದು ಸಂಸದರಲ್ಲಿ ಮುಖ್ಯಮಂತ್ರಿ ಮನವಿ ಮಾಡಿದರು.

ಕೇಂದ್ರ ನೈಸರ್ಗಿಕ ವಿಕೋಪ ಪರಿಹಾರ ನಿಯಮಾವಳಿಗಳು ಪ್ರಸ್ತುತ ಸನ್ನಿವೇಶಕ್ಕೆ ಪೂರಕವಾಗಿಲ್ಲ. ನಿಯಮಾವಳಿಗಳನ್ನು ಬದಲಿಸಿ ಹೆಚ್ಚು ಪರಿಹಾರ ಕಲ್ಪಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಡ ತರಬೇಕು.ನರೇಗ ಯೋಜನೆಯಡಿ ರಾಜ್ಯ ಸರ್ಕಾರ ವೆಚ್ಚ ಮಾಡಿರುವ 964 ಕೋಟಿ ರೂ.ಗಳನ್ನು ಮರುಪಾವತಿಸಲು ಕೇಂದ್ರದ ಮೇಲೆ ಒತ್ತಡ ತರುವಂತೆ ಹೇಳಿದರು.

ಸಂಬಂಧಪಟ್ಟ ಸಚಿವರು ಅಗತ್ಯ ಮಾಹಿತಿಯೊಂದಿಗೆ ಸಂಸದರ ನಿಯೋಗದಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿದರೆ ಪ್ರಸ್ತಾವನೆಗಳಿಗೆ ಶೀಘ್ರ ಪರಿಹಾರ ಪಡೆಯಬಹುದೆಂಬ ಅಭಿಪ್ರಾಯವನ್ನು ಸಂಸದರು ವ್ಯಕ್ತಪಡಿಸಿದರು.

ಸಂಸತ್ ಅಧಿವೇಶನದಲ್ಲಿ ಪ್ರಸ್ತಾಪಿಸಲು ಸೂಕ್ತ ಮಾಹಿತಿ ಒದಗಿಸುವಂತೆ ಸಭೆಯಲ್ಲಿ ಸಂಸದರು ಮನವಿ ಮಾಡಿದರು.ಇದಕ್ಕೆ ಮುಖ್ಯಮಂತ್ರಿ ಸಂಬಂಧಪಟ್ಟ ಮಾಹಿತಿಯನ್ನು ಎಲ್ಲಾ ಸಂಸದರಿಗೆ ಒದಗಿಸಲು ದೆಹಲಿಯ ಸ್ಥಾಯಿಕ ಆಯುಕ್ತರಿಗೆ ಸೂಚನೆ ನೀಡಿದರು.

ತೊಗರಿ, ಹೆಸರುಕಾಳು, ಕಬ್ಬು, ಭತ್ತ, ಈರುಳ್ಳಿ, ಟೊಮ್ಯಾಟೋ, ತೆಂಗು ಸೇರಿದಂತೆ ವಿವಿಧ ಬೆಳೆಗಳಿಗೆ ಬೆಂಬಲ ಬೆಲೆ ಇಲ್ಲದೆ ರೈತರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಸಕಾಲದಲ್ಲಿ ಬೆಂಬಲ ಬೆಲೆ ಪ್ರಕಟಿಸುವಂತೆ ಕೇಂದ್ರ ಸರ್ಕಾರದ ಗಮನ ಸೆಳೆಯಲು ಮುಖ್ಯಮಂತ್ರಿ ಸಂಸದರಲ್ಲಿ ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ