ಕಡಲೇಕಾಯಿ ಪರಿಷೆಗೆ ದಿನಗಣನೆ ಪ್ರಾರಂಭ

ಬೆಂಗಳೂರು, ನ.29 -ಇತಿಹಾಸ ಪ್ರಸಿದ್ಧ ಕಡಲೇಕಾಯಿ ಪರಿಷೆಗೆ ದಿನಗಣನೆ ಪ್ರಾರಂಭವಾಗಿದ್ದು, ಈ ಬಾರಿಯ ಪರಿಷೆಯಲ್ಲಿ ಪ್ಲಾಸ್ಟಿಕ್ ಬಳಕೆ ಮಾಡದಿರಲು ತೀರ್ಮಾನಿಸಲಾಗಿದೆ.

ಬಸವನಗುಡಿಯಲ್ಲಿರುವ ಪುರಾಣ ಪ್ರಸಿದ್ಧ ದೊಡ್ಡ ಬಸವಣ್ಣನ ದೇಗುಲದಲ್ಲಿ ಐತಿಹಾಸಿಕ ಕಡಲೇಕಾಯಿ ಪರಿಷೆ ಪ್ರತಿವರ್ಷ ವಿಜೃಂಭಣೆಯಿಂದ ನಡೆಯುತ್ತಾ ಬಂದಿದೆ.
ಬೆಂಗಳೂರು ಸುತ್ತಮುತ್ತಲಿನ ಗ್ರಾಮಗಳ ರೈತರು ತಾವು ಬೆಳೆದ ಕಡಲೇಕಾಯಿಯನ್ನು ಇಲ್ಲಿಗೆ ತಂದು ದೊಡ್ಡ ಗಣಪತಿ ಹಾಗೂ ಬಸವಣ್ಣನಿಗೆ ಸಮರ್ಪಿಸಿ ನಂತರ ಕಡಲೇಕಾಯಿ ಪರಿಷೆ ನಡೆಸುತ್ತಾರೆ.

ದೊಡ್ಡ ಗಣೇಶ ದೇವಾಲಯ ಆವರಣದಲ್ಲಿ ನಡೆಯುವ ಕಡಲೇಕಾಯಿ ಪರಿಷೆಗೆ ಪುರಾಣ, ಐತಿಹಾಸಿಕ ಹಿನ್ನೆಲೆಯೂ ಇದೆ.
ಆ ಪ್ರಕಾರ ಈಗಿರುವ ಬಸವನಗುಡಿ ಹಿಂದೆ ಹಲವಾರು ಹಳ್ಳಿಗಳ ಸಮೂಹವಾಗಿತ್ತು.ದೊಡ್ಡಬಸವಣ್ಣನ ಗುಡಿ ಇರುವ ಹಿಂದಿನ ಸುಂಕೇನಹಳ್ಳಿ, ಗವಿಪುರ, ಹೊಸಕೆರೆಹಳ್ಳಿ, ಯಡಿಯೂರು, ನಾಗಸಂದ್ರ ಮುಂತಾದ ಹಳ್ಳಿಯ ಜನರು ಕಡಲೇಕಾಯಿ ಬೆಳೆಯುತ್ತಿದ್ದರು. ಈ ವೇಳೆ ಒಂದು ಎತ್ತು (ಬಸವ) ಯಾವುದೋ ಮಾಯದಲ್ಲಿ ಬಂದು ಕಡಲೇಕಾಯಿಯನ್ನು ತಿಂದು, ತುಳಿದು ಹೋಗಿ ಬಿಡುತ್ತಿತ್ತು ಎಂದು ಹಿರಿಯರು ಹೇಳುತ್ತಾರೆ.
ಪ್ರತಿವರ್ಷ ಹೀಗೆ ಕಡಲೇಕಾಯಿಯನ್ನು ಬಸವ ತಿಂದು ಹೋಗುವುದನ್ನು ಅರಿತ ರೈತರೆಲ್ಲರೂ ಒಟ್ಟಾಗಿ ಒಂದು ದಿನ ಕಾದಿದ್ದು, ಎತ್ತು ಕಡಲೇಕಾಯಿ ತಿನ್ನುತ್ತಿದ್ದುದನ್ನು ಕಂಡು ಅದನ್ನು ಓಡಿಸಲು ಹೋಗಿದ್ದಾರೆ.

ಆಗ ಎತ್ತು ವೇಗವಾಗಿ ಓಡಿ ಈಗಿರುವ ಬಸವಣ್ಣನ ದೇವಸ್ಥಾನದ ಜಾಗದಲ್ಲಿ ಕುಳಿತು ಕಲ್ಲಾಗಿ ಮಾರ್ಪಟ್ಟಿತ್ತಂತೆ. ಇದನ್ನು ಕಂಡ ರೈತರು ಆ ಮಹೇಶ್ವರನ ವಾಹನ ನಂದಿಯೇ ಈ ರೀತಿ ಬಂದು ಕಡಲೇಕಾಯಿ ತಿಂದು ಹೋಗುತ್ತಿದ್ದನೆಂದು ತಿಳಿದು ಸೋಜಿಗಪಟ್ಟರಂತೆ.
ನಂತರ ಕಲ್ಲಾಗಿ ಕುಳಿತಿದ್ದ ಬಸವಣ್ಣನಿಗೆ ಕಡಲೇಕಾಯಿ ಅರ್ಪಿಸಿ ಇನ್ನು ಮುಂದೆ ಪ್ರತಿವರ್ಷ ಬೆಳೆ ಬಂದಾಗ ಮೊದಲು ನಿನಗೇ ಸಮರ್ಪಿಸಿ ಆನಂತರ ನಾವು ಮಾರಾಟ ಮಾಡುತ್ತೇವೆ ಎಂದು ಹರಕೆ ಹೊತ್ತರು.
ಹೀಗೆ ಅಂದಿನಿಂದ ದೊಡ್ಡ ಬಸವನಿಗೆ ಕಡಲೇಕಾಯಿ ಅರ್ಪಿಸಿ ಮಾರಾಟ ಮಾಡುವ ಪದ್ಧತಿ ಬೆಳೆದು ಬಂದಿದೆ.
ಜಯನಾಮಸಂವತ್ಸರ ಕಾರ್ತಿಕ ಮಾಸದ ಕಡೆಯ ಸೋಮವಾರದಂದು ಪ್ರಾತಃಕಾಲ ಬಸವಣ್ಣನ ಉತ್ಸವ ಮೂರ್ತಿಗೆ ತುಲಾಭಾರ ಮಾಡುವ ಮೂಲಕ ಕಡಲೇಕಾಯಿ ಪರಿಷೆಗೆ ವಿಧ್ಯುಕ್ತವಾಗಿ ಚಾಲನೆ ನೀಡಲಾಗುತ್ತದೆ.

ಈ ವರ್ಷ ಡಿ.3 ರಂದು ಕಡೆಯ ಕಾರ್ತಿಕ ಸೋಮವಾರ ಇತಿಹಾಸ ಪ್ರಸಿದ್ಧ ಕಡಲೇಕಾಯಿ ಪರಿಷೆಗೆ ಚಾಲನೆ ದೊರೆಯಲಿದೆ.
ಪ್ಲಾಸ್ಟಿಕ್ ಕವರ್ ಕಡ್ಡಾಯ ನಿಷೇಧ:
ಕಡಲೇಕಾಯಿ ಪರಿಷೆಗೆ ಬಿಬಿಎಂಪಿ ಈಗಾಗಲೇ ಎಲ್ಲಾ ಸಿದ್ಧತೆಗಳನ್ನು ಕೈಗೊಂಡಿದೆ. ಬೆಂಗಳೂರನ್ನು ಸುಂದರ ನಗರವಾಗಿಸುವ ದೃಷ್ಟಿಯಿಂದ ಬಿಬಿಎಂಪಿ ಈ ಬಾರಿ ಕಡಲೇಕಾಯಿ ಪರಿಷೆಯಲ್ಲಿ ಪ್ಲಾಸ್ಟಿಕ್ ಕವರ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಿದೆ.
ಪ್ಲಾಸ್ಟಿಕ್ ಮುಕ್ತ ಬೆಂಗಳೂರನ್ನಾಗಿಸಲು ಪಣತೊಟ್ಟಿರುವ ಪಾಲಿಕೆ ಅಧಿಕಾರಿಗಳು ಈ ಬಾರಿ ಕಡಲೇಕಾಯಿ ಪರಿಷೆಯಲ್ಲಿ ಕೆಲವು ನಿಯಮಗಳನ್ನು ಜಾರಿ ಮಾಡಿದ್ದಾರೆ.

ಜಾತ್ರೆ ಸಮಯದಲ್ಲಿ ಪ್ಲಾಸ್ಟಿಕ್ ಕವರ್ ಬಳಕೆ ಕಂಡುಬಂದಲ್ಲಿ ದಂಡ ವಿಧಿಸಲಾಗುತ್ತದೆ.
ಬೈಲ್ಯಾಟ್ರಲ್ ಬ್ರೆಸ್ಟ್ ಕ್ಯಾನ್ಸರ್ನಿಂದ ಬಳಲುತ್ತಿದ ಮಹಿಳೆಯ ಗುಣಮಖ:
ಬೆಂಗಳೂರು, ನ.29 -ಬೈಲ್ಯಾಟ್ರಲ್ ಬ್ರೆಸ್ಟ್ ಕ್ಯಾನ್ಸರ್ (ಬಿಬಿಸಿ) ಅತಿ ಅಪರೂಪದ ರೋಗವಾಗಿದೆ.ಎರಡೂ ಸ್ತನಗಳಲ್ಲೂ ಒಂದೇ ಬಾರಿಗೆ ಕ್ಯಾನ್ಸರ್ ರೋಗ ಹರಡುತ್ತದೆ.ಈ ಕಾರಣದಿಂದ ಇದನ್ನು ಸಿಂಕ್ರೊನಸ್ ಬೈಲ್ಯಾಟ್ರಲ್ ಬ್ರೆಸ್ಟ್ ಕ್ಯಾನ್ಸರ್ ಎನ್ನಲಾಗುತ್ತದೆ.ಇಂತಹ ಸಮಸ್ಯೆಯಿಂದ ಬಳಲುತ್ತಿದ್ದ ಅವಿವಾಹಿತ ಮಹಿಳೆ ಚಿಕಿತ್ಸೆಯಿಂದ ಸಂಪೂರ್ಣ ಗುಣಮುಖರಾಗಿದ್ದಾರೆ.
ರಮ್ಯಾ (ಹೆಸರು ಬದಲಿಸಲಾಗಿದೆ) ಎಂಬ 43 ವರ್ಷ ವಯಸ್ಸಿನ ಈ ಮಹಿಳೆ ತಮ್ಮ ಎಡ ಸ್ತನದಲ್ಲಿ ನೋವು ರಹಿತವಾದ ಗಡ್ಡೆಯನ್ನು ಹೊಂದಿದ್ದರು.
ಈ ಹಿನ್ನೆಲೆಯಲ್ಲಿ ಅವರು ಈ ಬಗ್ಗೆ ಎರಡನೇ ಅಭಿಪ್ರಾಯ ಪಡೆಯಲು ಮುಂದಾಗಿ ನೇರವಾಗಿ ಬಿಜಿಎಸ್ ಗ್ಲೆನೀಗಲ್ಸ್ ಗ್ಲೋಬಲ್ ಹಾಸ್ಪಿಟಲ್ಸ್‍ಗೆ ಬಂದು ಸಂಪೂರ್ಣ ತಪಾಸಣೆಗೆ ಒಳಗಾದರು.

ವೈದ್ಯರು ಎರಡೂ ಸ್ತನಗಳ ಮ್ಯಾಮೋಗ್ರಫಿ ತಪಾಸಣೆ ಮಾಡಿದರು.ಆಗ, ರಮ್ಯಾ ಅವರ ಬಲ ಸ್ತನದಲ್ಲಿಯೂ ಸಣ್ಣ ಸಣ್ಣ ಗಡ್ಡೆಗಳು ಇರುವುದು ಪತ್ತೆಯಾಯಿತು.ನಂತರ ಅವರಿಗೆ ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡಿದಾಗ ಎರಡೂ ಸ್ತನಗಳು ಕ್ಯಾನ್ಸರ್‍ಗೆ ತುತ್ತಾಗಿವೆ ಎಂಬುದು ಖಾತರಿಯಾಯಿತು.
ನಂತರ ರೋಗಿಗೆ ಶಸ್ತ್ರಚಿಕಿತ್ಸೆ ನಡೆಸಿ ಎಡಸ್ತನದಲ್ಲಿರುವ ಗಡ್ಡೆಯನ್ನು ತೆಗೆಯುವ ನಿರ್ಧಾರಕ್ಕೆ ಬಂದರು.ಅದೇರೀತಿ ಬಲ ಸ್ತನವನ್ನು ಸಂಪೂರ್ಣವಾಗಿ ತೆಗೆದು ಪುನರ್ ನಿರ್ಮಾಣ ಮಾಡಿ ರೋಗಿಯ ದೈಹಿಕ ಆಕಾರವನ್ನು ಮೊದಲಿನಂತೆ ಮಾಡಲು ನಿರ್ಧರಿಸಿದರು.ನಂತರ ಚಿಕಿತ್ಸೆ ನೀಡಲಾಯಿತು.

ಸ್ತನ ಕ್ಯಾನ್ಸರ್‍ಗೆ ನೀಡುವ ಚಿಕಿತ್ಸೆಯಲ್ಲಿ ಕಳೆದ ಒಂದು ದಶಕದಲ್ಲಿ ಇಂತಹ ಅತ್ಯಾಧುನಿಕ ರೀತಿಯ ಚಿಕಿತ್ಸೆ ನೀಡಿರುವುದು ಇದೇ ಮೊದಲು. ಈ ಗಡ್ಡೆ ಮತ್ತೆ ಬೆಳೆಯುವುದನ್ನು ತಡೆಗಟ್ಟುವುದು, ಹೆಚ್ಚು ಸಂಕೀರ್ಣತೆಗಳಿಲ್ಲದೇ ಕ್ಷಿಪ್ರವಾಗಿ ವಾಸಿಯಾಗುವುದು ಮತ್ತು ದೀರ್ಘಾವಧಿವರೆಗೆ ಯಾವುದೇ ಸೈಡ್ ಇಫೆಕ್ಟ್‍ಗಳಿಲ್ಲದಂತೆ ಮಾಡುವ ವಿಧಾನಗಳನ್ನು ಅನುಸರಿಸಿದ ವೈದ್ಯರು ಶಸ್ತ್ರಚಿಕಿತ್ಸೆಯನ್ನು ಪರಿಣಾಮಕಾರಿಯಾಗಿ ಯಶಸ್ವಿಯಾಗಿ ಪೂರ್ಣಗೊಳಿಸಿದರು.
ಕಿಮೋಥೆರಪಿ ನಂತರ ರಮ್ಯಾ ಅವರು 4 ವಾರಗಳ ಕಾಲ ರೇಡಿಯೋಥೆರಪಿಯನ್ನು ಪಡೆದುಕೊಂಡರು.

ಡಿಪಾರ್ಟ್‍ಮೆಂಟ್ ಆಫ್ ರೇಡಿಯೇಷನ್ ಆಂಕಾಲಾಜಿಯ ಡಾ.ಮಾತಂಗಿ ಜೆ, ಅವರು ಈ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿ,ಒಂದು ಸ್ತನದಲ್ಲಿ ಕ್ಯಾನ್ಸರ್ ಕಾಣಿಸಿಕೊಂಡಿದ್ದರೆ ವೈದ್ಯರು ಎರಡೂ ಸ್ತನಗಳನ್ನು ಪರೀಕ್ಷಿಸುತ್ತಾರೆ. ಎರಡೂ ಸ್ತನಗಳಲ್ಲಿನ ಗಡ್ಡೆಗಳ ಪ್ರಮಾಣ ಅಥವಾ ಗಾತ್ರದಲ್ಲಿ ವ್ಯತ್ಯಾಸ ಇರಬಹುದು ಮತ್ತು ಅದಕ್ಕೆ ತಕ್ಕಂತೆ ಚಿಕಿತ್ಸೆಯನ್ನು ನೀಡಬಹುದು ಎನ್ನುತ್ತಾರೆ.

ಇಂದು ರಮ್ಯಾ ಕ್ಯಾನ್ಸರ್‍ನಿಂದ ಮುಕ್ತರಾಗಿದ್ದು, ಕಳೆದ ಮೂರು ವರ್ಷಗಳಿಂದ ಯಾವುದೇ ಸಮಸ್ಯೆಗಳನ್ನು ಎದುರಿಸಿಲ್ಲ.
ಈ ಸಂದರ್ಭದಲ್ಲಿ ಮಾತನಾಡಿದ ಬಿಜಿಎಸ್ ಗ್ಲೆನೀಗಲ್ಸ್ ಗ್ಲೋಬಲ್ ಹಾಸ್ಪಿಟಲ್ಸ್‍ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಶೈಲಜಾ ಸುರೇಶ್ ಅವರು, ಬೆಂಗಳೂರಿನ ಬಿಜಿಎಸ್ ಗ್ಲೆನೀಗಲ್ಸ್ ಹಾಸ್ಪಿಟಲ್ಸ್‍ನಲ್ಲಿ ನಾವು ಅತ್ಯುತ್ತಮವಾದ ಸ್ತನ ಕ್ಯಾನ್ಸರ್ ತಜ್ಞರನ್ನು ಹೊಂದಿದ್ದೇವೆ. ಈ ಸ್ತನ ಕ್ಯಾನ್ಸರ್‍ನಿಂದ ಬಳಲುತ್ತಿರುವ ಮಹಿಳೆಯರಿಗೆ ಉತ್ತಮ ರೀತಿಯ ಚಿಕಿತ್ಸೆ ನೀಡುತ್ತಿದ್ದಾರೆ. ಈ ನಮ್ಮ ತಜ್ಞ ವೈದ್ಯರ ತಂಡ ಉತ್ತಮ ಫಲಿತಾಂಶ ಬರುವ ರೀತಿಯಲ್ಲಿ ಸಾಧ್ಯತೆ ಇರುವ ಚಿಕಿತ್ಸೆಗಳನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ