ಕಬ್ಬನ್ ಉದ್ಯಾನವನದಲ್ಲಿ ನಾಳೆ ಸಮಾನ ಮನಸ್ಕ ನಿವೃತ್ತ ನೌಕರರ ಸಭೆ

ಬೆಂಗಳೂರು, ನ.28- ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಂಘಟನೆಯನ್ನು ನಿಷ್ಕ್ರಿಯಗೊಳಿಸಿರುವ ಕುರಿತಂತೆ ಸುದೀರ್ಘ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲು ನಾಳೆ ಬೆಳಗ್ಗೆ ಕಬ್ಬನ್‍ಪಾರ್ಕ್ ಉದ್ಯಾನವನದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಸಮಾನ ಮನಸ್ಕ ನಿವೃತ್ತ ನೌಕರರ ಸಭೆ ಏರ್ಪಡಿಸಲಾಗಿದೆ.

ಸಭೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಹಲವು ನಿವೃತ್ತ ಪದಾಧಿಕಾರಿಗಳು, ಜಿಲ್ಲಾ ಹಾಗೂ ತಾಲೂಕು ಶಾಖೆಗಳ ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸುವರು.

ಅ.30ರಂದು ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದಲ್ಲಿ ನಡೆದ ಸರ್ವಸದಸ್ಯರ ಸಭೆಯಲ್ಲಿ ಸಂಘದ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು ಸದಸ್ಯರಿಗೆ ಸಂಘದ ಲೆಕ್ಕಪತ್ರಗಳನ್ನು ಲೆಕ್ಕ ಪರಿಶೋಧಕರಿಂದ ತಪಾಸಣೆಗೊಳಪಡಿಸದೆ ನಿಯಮಾನುಸಾರ ಮಾಹಿತಿ ಸಲ್ಲಿಸಿ ಸರ್ಕಾರದಿಂದ ನವೀಕರಿಸದೆ ತಪ್ಪು ಮಾಹಿತಿ ನೀಡಿರುವುದರಿಂದ ಗೊಂದಲಗಳು ಉದ್ಭವಿಸಿವೆ. ಅಲ್ಲದೆ, ಆಡಳಿತ ಮಂಡಳಿ ನಿವೃತ್ತ ನೌಕರರ ಆರೋಗ್ಯ ಭಾಗ್ಯ ಯೋಜನೆ ಅನುಷ್ಠಾನ ಮತ್ತು 6ನೆ ವೇತನ ವರದಿಗಳ ಶಿಫಾರಸು ಅನುಷ್ಠಾನ ಸೇರಿದಂತೆ ವಿವಿಧ ಬೇಡಿಕೆಗಳು ನಿಷ್ಕ್ರಿಯವಾಗಿದ್ದು, ಈ ಎಲ್ಲ ಸವಲತ್ತುಗಳನ್ನು ಕಲ್ಪಿಸಲು ಅಸಹಾಯಕವಾಗಿದೆ.

ಈ ನಿಟ್ಟಿನಲ್ಲಿ ಮುಂದಿನ ಸಭೆಯಲ್ಲಿ ಚರ್ಚಿಸಿ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಡಾ.ಎಲ್.ಭೆರಪ್ಪ , ಮಾಜಿ ಗೌರವಾಧ್ಯಕ್ಷ ಎಂ.ವಿ.ರಾಜಶೇಖರಯ್ಯ, ರಂಗೇಗೌಡ ಮತ್ತಿತರರು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ