ನಾ ಕಂಡಂತೆ ಅಂಬಿ ಅಣ್ಣ: ರೆಬಲ್ ಸ್ಟಾರ್ ಕುರಿತ ನೆನಪಿನ ಬುತ್ತಿ ಬಿಚ್ಚಿಟ್ಟ ಹಿರಿಯ ಪತ್ರಕರ್ತ ಲಿಂಗರಾಜು

ಮಂಡ್ಯ: ರೆಬೆಲ್ ಸ್ಟಾರ್ ಅಂಬರೀಶ್ ಇನ್ನು ನೆನಪು ಮಾತ್ರ. ಸ್ನೇಹಮಹಿ ಅಂಬರೀಷ್, ತಮ್ಮಲ್ಲಿನ ವಿಶೇಷ ಗುಣದಿಂದ ನಾಡಿನಾದ್ಯಂತವಲ್ಲದೆ, ಇಡೀ ರಾಷ್ಟಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಅಂತೆಯೇ ಪತ್ರಕರ್ತರ ಜೊತೆ ಕೂಡ ವಿಶೇಷ ಪ್ರೀತಿ ಅಭಿಮಾನ ಇಟ್ಟಿದ್ದ ಅಂಬರೀಶ್, ನನ್ನನ್ನೂ ಸೇರಿದಂತೆ ಮಂಡ್ಯದ ಪತ್ರಕರ್ತರಿಗೆ ಪ್ರೀತಿಪಾತ್ರರು.

ಮೊದಲು ನನಗೆ ಅಂಬರೀಶ್ ಅವರ ಪರಿಚಯವಾಗಿದ್ದು ನಾನು ದೂರದರ್ಶನ ಸುದ್ದಿಸಂಗ್ರಹಣಾಕಾರನಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ. ಅವರು ಪ್ರಥಮ ಬಾರಿಗೆ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಫರ್ಧಿಸಿದ್ದರು. ಆ ವೇಳೆ ಪ್ರಚಾರಕ್ಕೆ ಹೋದೆಡೆಯಲ್ಲೆಲ್ಲ ನಾನು ಸುದ್ದಿಗಾಗಿ ಅವರ ಜೊತೆ, ಜೊತೆಯಲ್ಲಿ ತೆರೆಳುತ್ತಿದ್ದೆ. ಅಲ್ಲಿಂದ ನನ್ನ ಅಂಬರೀಷ್ ಅಣ್ಣನ ಸ್ನೇಹ ಸಹೋದರರ ಸಂಬಂಧದಂತೆ ಇಲ್ಲಿಯವರೆಗೂ ಬೆಳೆದು ಬಂದಿತ್ತು. ಅಂದಿನ ದಿನಗಳಲ್ಲಿ ಯಾವುದೇ ಖಾಸಗಿ ಸುದ್ದಿವಾಹಿನಿಗಳಿರಲಿಲ್ಲ. ನಾನೊಬ್ಬನೇ ವಾಹಿನಿ ಸುದ್ದಿ ಸಂಗ್ರಹಣಾ ಕಾರನಾಗಿದ್ದ ಸಂದರ್ಭ. ಆ ಕಾರಣದಿಂದ ನನ್ನ ಮೇಲೆ ವಿಶೇಷ ಪ್ರೀತಿ ತೋರುತ್ತಿದ್ದರು. ಅವರ ಪ್ರೀತಿ ತುಂಬಿದ ಗಡಸು ಧ್ವನಿಯಲ್ಲೆ ನನ್ನನ್ನು ಮಾತ್ನಾಡಿಸುತ್ತಿದ್ದರು. ಪಾಂಡವಪುರ ತಾಲ್ಲೂಕು, ದೊಡ್ಡಬ್ಯಾಡರಹಳ್ಳಿ ನನ್ನ ಹುಟ್ಟೂರು ಆ ಕಾರಣದಿಂದ ಎಂದೂ ನನ್ನ ಹೆಸರಿಡಿದು ಮಾತ್ನಾಡಿಸುತ್ತಿರಲಿಲ್ಲ ಅಂಬಿ ಅಣ್ಣ. ನನ್ನನ್ನ ಲೇ ಬ್ಯಾಡ್ರಹಳ್ಳಿ ಬಾರೋ ಇಲ್ಲಿ, ಹೋಗೊಲೋ ಬ್ಯಾಡ್ರಹಳ್ಳಿ ಎಂದೇ ಸಂಭೋದಿಸುತ್ತಿದ್ದರು.

ಅಂಬರೀಶ್ ಅವರಿಗೆ ಅಗಾಧ ವಾದ ನೆನಪಿನ ಶಕ್ತಿ ಇತ್ತು. ಒಬ್ಬ ವ್ಯಕ್ತಿ ಒಂದು ಬಾರಿ ಪರಿಚಯವಾಗಿಬಿಟ್ಟರೆ ಎಂದೂ ಅವರನ್ನ ಮರೆಯುತ್ತಿರಲಿಲ್ಲ. ಅವರ ಹೆಸರನ್ನಿಡಿದೇ ಕರೆದು ಗಡಸು ಧ್ವನಿಯಲ್ಲೇ ಪ್ರತೀಯಿಂದ ಮಾತ್ನಾಡಿಸುವ ಪ್ರವೃತ್ತಿ ಅವರದ್ದು. ನಾನು ದೂರದರ್ಶನದಿಂದ ವೃತ್ತಿ ಪ್ರಾರಂಭಿಸಿ, ೧೯೯೮ ರಲ್ಲಿ ಪ್ರಾರಂಭವಾದ ಉದಯ ಟಿವಿ ಯಲ್ಲೂ ಕೆಲಸ ನಿರ್ವಹಿಸುತ್ತಾ ಬಂದೆ. ಮಾಧ್ಯಮ ಕ್ಷೇತ್ರದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಾ ಬಂದವನು ನಾನು. ಸುಮಾರು ಇಪ್ಪತ್ತೆರಡು ವರ್ಷಗಳ ಕಾಲ ನನ್ನ ಮತ್ತು ಅಂಬರೀಶ್ ಅವರ ಒಡನಾಟವಿತ್ತು. ಈ ಒಂದು ಕಾರಣದಿಂದ ನಾನು ಅಂಬಿ ಅಣ್ಣನ ಜೊತೆ ಸ್ವಲ್ಪ ಸಲಿಗೆಯಿಂದಲೇ ಮಾತನಾಡುತ್ತಿದ್ದೆ. ಅವರೂ ಕೂಡ ತಮ್ಮ ಗಡಸು ಧ್ವನಿಯಲ್ಲೇ ನನ್ನನ್ನು ಮಾತ್ನಾಡಿಸುತ್ತಿದ್ದರು.

ಸಂಸದರಾಗಿದ್ದ ಕಾಲದಲ್ಲಿ ಅಂಬರೀಷ್ ಅಣ್ಣ ಯಾವುದೋ ಒಂದು ಕಾರ್ಯಕ್ರಮದ ನಿಮಿತ್ತ ನಮ್ಮ ಗ್ರಾಮಕ್ಕೆ ಬಂದಿದ್ದರು. ಆಗ ನಾನು, ಅಣ್ಣ ನಮ್ಮ ಗ್ರಾಮದ ದೇವರು ಶ್ರೀ ಬ್ರಹ್ಮಲಿಂಗೇಶ್ವರ ಸ್ವಾಮಿ ದೇವಸ್ಥಾನವಿದೆ ಅಲ್ಲಿಗೆ ಹೋಗೋಣ ಬನ್ನಿ ನಿಮ್ಮ ರಾಜಕೀಯ ಭವಿಷ್ಯ ಚೆನ್ನಾಗಿರುತ್ತೆ ಎಂದೆ. ಅದಕ್ಕವರು ಕೂಡಲೇ ಒಪ್ಪಕೊಳ್ಳಲಿಲ್ಲ ಸ್ವಲ್ಪ ಹೊತ್ತು ಏನೋ ಯೋಚನೆ ಮಾಡ್ತಿದ್ದರು ನಾನು ಹೇ ಬಾಅಣ್ಣ ಅಂತ ಬಲವಂತ ಮಾಡ್ದೆ. ಸೂಕ್ಷ್ಮ ಮತಿ ಅಂಬರೀಷಣ್ಣ, ಲೋ ಮಗನೇ ನೀನು ಏನೋ ಉದ್ದೇಶ ಇಟ್ಕೊಂಡು ಕರ್ಕೊಂಡು ಹೋಗ್ತಾ ಇದೀಯಾ ನಡಿ ಅಂತ ಬಂದ್ರು. ದೇವಸ್ಥಾನದಲ್ಲಿ ಪೂಜೆ ಮುಗಿಸಿ ಹೊರಗಡೆ ಬಂದ್ವಿ, ನಾನು ಆ ದೇವಸ್ಥಾನದ ಇತಿಹಾಸ ಹೇಳ್ಕೊಂಡು ಬಂದು ಒಂದು ಬೇಡಿಕೆ ಇಟ್ಟೆ. ಅಣ್ಣ ಇಲ್ಲಿಗೆ ಸುಮಾರು ಹದಿನೈದು ಗ್ರಾಮದ ಜನತೆ ಆಗಮಿಸ್ತಾರೆ. ಇಲ್ಲಿ ಮದುವೆ ಸೇರಿದಂತೆ ಶುಭಕಾರ್ಯಗಳು ನಡೆಯುತ್ತಿರುತ್ತವೆ ಇಲ್ಲಿಗೆ ಒಂದು ಸಮುದಾಯ ಭವನದ ಅವಶ್ಯಕತೆ ಇದ್ದು, ತಾವು ತಮ್ಮ ಅನುದಾನದಲ್ಲಿ ಒಂದು ಐದುಲಕ್ಷ ಅನುದಾನ ಕೊಡ್ಸಿ ಎಂದು ಪೀಠಿಕೆ ಹಾಕಿದೆ. ತಕ್ಷಣ ಅವರು, ಹಾಂ ಮಗನೆ, ಅದಕ್ಕೇ ನೀನು ಅಷ್ಟೊಂದು ಪುಸಲಾಯ್ಸಿ ಕರ್ಕೊಂಡು ಬಂದಿದ್ದು. ನನಗೆ ಗೊತ್ತಿಲ್ವೇನೊ ಲೋ ನಿನ್ನಂತಹವರನ್ನ ಎಷ್ಟು ಜನ ನೋಡಿಲ್ಲಾ ನಾನು ಅಂತ ಅವರ ಗಡಸು ಧ್ವನಿಯಲ್ಲೇ ಕುಟುಕಿದರು.

ಆಮೇಲೆ ಅವರ ದೊಡ್ಡ ಮನಸ್ಸು ಎಷ್ಟಿತ್ತೆಂದರೆ, ನಾನು ಕೇಳಿದ್ದು ಐದು ಲಕ್ಷ, ಆದರೇ, ಅವರು ಹೇಳಿದ್ರು. ಐದು ಲಕ್ಷ ಕೊಟ್ಟರೆ, ಕಲ್ಯಾಣಮಂಟಪ ಮಾಡ್ಬಿಡ್ತಿಯಾ…!? ಅಂದ್ರು. ಅಣ್ಣ ನೀವು ಇಷ್ಟು ಕೊಟ್ಟರೆ, ಬೇರೆ ಕಡೆಯಿಂದ ಇನ್ನುಳಿದ ಸಂಪನ್ಮೂಲ ತಂದು ಮಾಡೋದು ಅಂತ ನಮ್ಮ ತೀರ್ಮಾನ ಮಾಡಿದ್ದೀವಿ ಅಂದೆ. ಅದಕ್ಕೆ ಅವರು ನಮ್ಮ ಕಾಳಜಿ ಕಂಡು, ಅಲ್ಲೆ ಇದ್ದ ಇಂಜಿನಿಯರ್ ಒಬ್ಬರನ್ನ ಕರೆದ್ರು, ರೀ ಈ ಕಲ್ಯಾಣ ಮಂಟಪಕ್ಕೆ ಒಂದೊಳ್ಳೆ ಪ್ಲಾನ್ ಹಾಕಿ, ಎಷ್ಟು ಖರ್ಚಾಗುತ್ತದೆ ಎಷ್ಟಿಮೇಟ್ ಕೊಡಿ, ಅಷ್ಟು ಹಣ ನನ್ನ ಅನುದಾನ ಕೊಡ್ತೀನಿ ಅಂದ್ರು. ಇಂತಹ ಒಂದು ದೊಡ್ಡಗುಣ ಅಂಬರೀಶ್ ಅವರದ್ದು.

ಅಂಬರೀಷ್ ಅವರು, ಕೇವಲ ನಮ್ಮ ಗ್ರಾಮಕ್ಕೆ ಮಾತ್ರ ಅನುದಾನ ಕೊಟ್ಟವರಲ್ಲಾ, ಇಡೀ ಜಿಲ್ಲೆಗೆ ಬಹುತೇಕ ಗ್ರಾಮಗಳ ಶಾಲೆಗಳು, ಕಲ್ಯಾಣ ಮಂಟಪ ಗಳಿಗೆ ತಮ್ಮ ಅನುದಾನ ಕೊಟ್ಟು ಸಂಸದರ ನಿಧಿಯನ್ನು ಸದ್ಬಳಕೆ ಮಾಡಿದರು. ಇದರಿಂದ ಕೂಡ ಇಡೀ ಜಿಲ್ಲೆಯ ಜನರ ಪ್ರೀತಿಗೆ ಪಾತ್ರರಾದವರು ಅಣ್ಣ.

ಇದಲ್ಲದೆ, ನಮ್ಮ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೂ ಕೂಡ ಹೆಚ್ಚಿನ ಅನುದಾನ ಕೊಟ್ಟು ಸಂಘದ ಬೆಳವಣಿಗೆಗೆ ಭದ್ರಬುನಾದಿ ಹಾಕಿ, ಪತ್ರಕರ್ತರಿಗೆ ತುಂಬಾ ಪ್ರಿಯವಾದರು ಅಂಬರೀಷ್ ಅಣ್ಣ.

ಅಂಬರೀಶ್ ಅಣ್ಣ ಹಲವಾರು ಬಾರಿ ಬೆಂಗಳೂರಿನ ತಮ್ಮ ನಿವಾಸಕ್ಕೆ ಮಂಡ್ಯ ಜಿಲ್ಲೆಯ ಪತ್ರಕರ್ತರನ್ನು ಕರೆಸಿ ತಾವೇ ಖುದ್ದು ನಿಂತು ಆತಿಥ್ಯವನ್ನ ನೀಡಿದ್ದರು. ಅವರ ಅಂದಿನ ಆತಿಥ್ಯ ಎಂದಿಗೂ ಮರೆಯಲಾಗದ ವಿಷಯ.

ಕಳೆದ ಮೂರು ವರ್ಷಗಳ ಹಿಂದೆ ಅವರು ಅನಾರೋಗ್ಯ ಪೀಡಿತರಾಗಿ ಸಿಂಗಪೂರ್ ನಲ್ಲಿ ಚಿಕಿತ್ಸೆ ಪಡೆದು ವಾಪಸ್ಸಾಗಿ ಪ್ರಥಮ ಬಾರಿಗೆ ಮಂಡ್ಯಕ್ಕೆ ಆಗಮಿಸಿತ್ತಿದ್ದ ಸಂದರ್ಭ. ಜಿಲ್ಲೆಯ ಗಡಿ ಭಾಗದಿಂದ ಸಾವಿರಾರು ಮಂದಿ ಅಭಿಮಾನಿಗಳು ಜಮಾಯಿದ್ದರು. ತೆರೆದ ವಾಹನದಲ್ಲಿ ಅಂಬರೀಷಣ್ಣ ನೆರೆದಿದ್ದ ಅಭಿಮಾನಿಗಳಿಗೆ ನಮಸ್ಕಾರ ಮಾಡ್ತಾ, ಕೈ ಬೀಸ್ಕೊಂಡು ಮೆರವಣಿಗೆಯಲ್ಲಿ ಬರ್ತಾ ಇದ್ದರು. ಆ ಗುಂಪಿನಲ್ಲಿ ರಸ್ತೆ ಬದಿಯಲ್ಲಿ ವಿನ್ಸಿ ನಾನೊಂದು ಕಡೆ ನಿಂತಿದ್ದೆ. ನನ್ನನ್ನ ನೋಡಿದ ಕೂಡ್ಲೇ, ಲೇ ಬ್ಯಾಡ್ರಹಳ್ಳಿ ಅಂತ ಕೂಗಿ, ಟಾಟಾ ಮಾಡಿದ್ದು, ಅವರ ಪ್ರೀತಿ ಮತ್ತು ಅಗಾಧವಾಗಿದ್ದ ನೆನಪಿನ ಶಕ್ತಿಗೆ ಸಾಕ್ಷಿಯಾಗಿತ್ತು.

ನನ್ನ ಮತ್ತು ಅಂಬರೀಷ್ ಅಣ್ಣ ಅವರ ನಡುವೆ ಬರೀ ಪ್ರೀತಿ ಸಂಭಾಷಣೆ ಮಾತ್ರ ಇರ್ಲಿಲ್ಲ. ಕೆಲವು ಸಲ ಮಾತಿನ ಚಕಮಕಿ ಯೂ ಕೂಡ ನಡೆದಿತ್ತು. ಮಂಡ್ಯ ಜಿಲ್ಲೆಯ ಅಮೃತ ಮಹೋತ್ಸವದ ಪ್ರಯುಕ್ತ ಸ್ಟೇಡಿಯಂನಲ್ಲಿ ಅದ್ದೂರಿ ರಸಮಂಜರಿ ಕಾರ್ಯಕ್ರಮ ಇತ್ತು. ಆ ಕಾರ್ಯ ಕ್ರಮಕ್ಕೆ ಮಾಧ್ಯಮ ಕ್ಯಾಮೆರಾ ಗಳಿಗೆ ಪ್ರವೇಶ ನೀಡಿರ್ಲಿಲ್ಲಾ. ಆಗ ನನ್ನ ಮತ್ತು ಅಂಬರೀಶ್ ಅಣ್ಣನ ನಡುವೆ ಮಾತಿನ ಚಕಮಕಿ ನಡೀತು. ನನಗೂ ಬೈದು ಎಲ್ಲರನ್ನೂ ಹೊರಗೆ ಕಳುಹಿಸ್ಬಿಟ್ರು. ನಮಗೆ ಬೇಸರವಾಗಿ ಆಗ ನಾವು ಮುನಿಸ್ಕೊಂಡು ಬಂದ್ವಿ.

ಮತ್ತೆ ಮಾರನೇ ದಿನ ಗಾಂಧಿಭವನಲ್ಲಿ ಹಿರಿಯ ಪತ್ರಕರ್ತರಿಗೆಲ್ಲಾ ಸನ್ಮಾನ ಸಮಾರಂಭ ಇತ್ತು. ನಾನು ಬೇಸರದಲ್ಲಿ ಅವರಕಡೆ ನೋಡ್ದೆ ಕುಳ್ತಿದ್ದೆ. ವೇದಿಕೆಯಲ್ಲಿ ಕೂತಿದ್ದ ಅವರು, ಎಂದಿನ ಪ್ರೀತಿ ತುಂಬಿದ ಗಡಸು ಧ್ವನಿಯಲ್ಲಿ ಕೂಗಿ ಮಾತ್ನಾಡಿಸಿ, ಅವರ ನಿಷ್ಕಲ್ಮಸ ಮನಸ್ಥಿತಿಯನ್ನು ಪ್ರದರ್ಶಿಸಿದರು. ಇದೊಂದು ಮರೆಯಲಾಗದ ಸಂದರ್ಭ.

ಅಂಬರೀಶ್ ಅವರ ಇಂತಹ ಗುಣಗಳೆ, ಅವರ ಬಗ್ಗೆ ಎಲ್ಲರಲ್ಲೂ ಅಭಿಮಾನ ಬೆಳೆಯಲು ಕಾರಣವಾಗಿತ್ತು. ಬೇಡಿ ಹೋದ ನಮ್ಮ ಜಿಲ್ಲೆಯ ಕೆಲವು ಪತ್ರಕರ್ತರು ಸೇರಿದಂತೆ ಸಾಕಷ್ಟು ಮಂದಿಗೆ ಸಹಾಯ ಮಾಡಿದ್ದಾರೆ.

ಇಂತಹ ಸ್ನೇಹ ಜೀವಿ, ಕರುಣಾಮಯಿ ಅಣ್ಣನನ್ನು ಕಳಕೊಂಡು ಪತ್ರಕರ್ತರು ಮಾತ್ರವಲ್ಲಾ, ಜಿಲ್ಲೆಯ ಜನತೆ ಕಂಗಾಲಾಗಿದ್ದಾರೆ ಎಂದರೆ ಅತಿಶೋಕ್ತಿಯಾಗಲಾರದು.‌ ಐ ಮಿಸ್ ಯೂ ಅಣ್ಣಾ. ಆ ಭಗವಂತ ನಿನ್ನಾತ್ಮಕ್ಕೆ ಚಿರಶಾಂತಿ ನೀಡಲಿ, ನಿಮ್ಮ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥನೆ.

Rebel Star Ambarish, Memories, Journalist Lingaraju

500 Internal Server Error

Internal Server Error

The server encountered an internal error or misconfiguration and was unable to complete your request.

Please contact the server administrator, webmaster@push.vartamitra.com and inform them of the time the error occurred, and anything you might have done that may have caused the error.

More information about this error may be available in the server error log.

Additionally, a 500 Internal Server Error error was encountered while trying to use an ErrorDocument to handle the request.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ