ಅಯೋಧ್ಯಾ ಧರ್ಮಸಭೆ; ಬಿಗಿ ಪೊಲೀಸ್ ಭದ್ರತೆ

ಅಯೋಧ್ಯಾ: ರಾಮಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ವಿಶ್ವ ಹಿಂದು ಪರಿಷತ್‌ನಿಂದ ಅಯೋಧ್ಯೆಯಲ್ಲಿ ಧರ್ಮ ಸಂಸದ್‌ ಆಯೋಜಿಸಲಾಗಿರುವ ಹಿನ್ನಲೆಯಲ್ಲಿ ಲಕ್ಷಾಂತರ ಜನರು, ಸಾಧು-ಸಂತರು ಅಯೋಧ್ಯೆಯಲ್ಲಿ ಬೀಡು ಬಿಟ್ಟಿದ್ದಾರೆ. ಇಡೀ ಅಯೋಧ್ಯಾ ನಗರ ಕೇಸರಿಮಯವಾಗಿದೆ. ಮುಂಜಾಗೃತಾ ಕ್ರಮವಾಗಿ ಅಯೋಧ್ಯೆಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ.

ಈ ಕುರಿತು ಮಾತನಾಡಿರುವ ಅಯೋಧ್ಯೆ ಡಿಐಜಿ ಓಂಕಾರ್ ಸಿಂಗ್​, ನಾವು ಎಲ್ಲ ವ್ಯವಸ್ಥೆಗಳನ್ನ ಮಾಡಿದ್ದೇವೆ. ಪಾರ್ಕಿಂಗ್​, ಬೈಪಾಸ್​ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಇದಕ್ಕೂ ಮೊದಲು ಹೆಚ್ಚುವರಿ ​ ಡೈರೆಕ್ಟರ್ ಜನರಲ್ ಆನಂದ ಕುಮಾರ್​ ಮಾತನಾಡಿ, ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತ ಎಲ್ಲ ಕ್ರಮಕೈಗೊಂಡಿದೆ. ಹಾಗೂ ಸಿದ್ಧತೆಗಳನ್ನು ಮಾಡಿಕೊಂಡಿದೆ. ಸುಪ್ರೀಂಕೋರ್ಟ್​ ನಿರ್ದೇಶನದಂತೆ ಕ್ರಮಕೈಗೊಳ್ಳಲಾಗಿದೆ.​

ಹೆಚ್ಚುವರಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಮತ್ತು 700 ಪೊಲೀಸ್‌ ಪೇದೆಗಳನ್ನು ಅಯೋಧ್ಯೆಯಲ್ಲಿ ನಿಯೋಜಿಸಲಾಗಿದೆ. 42 ಪ್ರಾಂತೀಯ ಸಶಸ್ತ್ರ ಪಡೆ, ಐದು ಕ್ಷಿಪ್ರ ಕಾರ್ಯಾಚರಣೆ ಪಡೆ ಮತ್ತು ಭಯೋತ್ಪಾದನಾ ವಿರೋಧಿ ಪಡೆಯ ಕಮಾಂಡೋಗಳನ್ನು ಸ್ಥಳದಲ್ಲಿ ನೇಮಿಸಲಾಗಿದೆ. ಡ್ರೋನ್‌ ಕ್ಯಾಮರಾ ಮೂಲಕ ಕಣ್ಣಿಡಲಾಗಿದೆ.

ಇನ್ನೊಂದೆಡೆ ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅಯೋಧ್ಯೆಗೆ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದು, ರಾಮಮಂದಿರ ನಿರ್ಮಾಣಕ್ಕಾಗಿ ಒತ್ತಡ ಹೇರಲು ಮುಂದಾಗಿದ್ದಾರೆ. ಶಿವಸೇನೆಯ ಸಾವಿರಾರು ಕಾರ್ಯಕರ್ತರು ಅಯೋಧ್ಯೆಗೆ ಆಗಮಿಸಿದ್ದಾರೆ.

Ayodhya,Ram Mandir,VHP,Dharma Sabha,security tightened

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ