ಹಿಂದಿನ ಯುಪಿಎ ಸರ್ಕಾರ ಛತ್ತೀಸ್ ಗಢದ ಜನರ ಸಮಸ್ಯೆಗಳತ್ತ ಗಮನವನ್ನೂ ಕೊಡಲಿಲ್ಲ: ಪ್ರಧಾನಿ ವಾಗ್ದಾಳಿ

ರಾಯ್ಪುರ: ಕಾಂಗ್ರೆಸ್ ಪಕ್ಷದ ರಿಮೋಟ್ ಕಂಟ್ರೋಲ್ ನಂತಿದ್ದ ಯುಪಿಎ ಸರ್ಕಾರ ಎಂದಿಗೂ ಛತ್ತೀಸ್ ಗಢದ ಸಮಸ್ಯೆಗಳತ್ತ ಗಮನ ಹರಿಸಲೇ ಇಲ್ಲ ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ನೇತೃತ್ವದ ಹಿಂದಿನ ಯುಪಿಎ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಛತ್ತೀಸ್ಗಢ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಮಹಾಸಮುಂದ್ ನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ, ರಾಜ್ಯದಲ್ಲಿ ನಕ್ಸಲರ ವಿರುದ್ಧ ಹೋರಾಟ ನಡೆಸಲು ರಮಣ್ ಸಿಂಗ್ ಅವರು ಅಂದಿನ ಯುಪಿಎ ಸರ್ಕಾರದ ಸಹಾಯ ಕೇಳಿದ್ದರು. ಹೆಚ್ಚಿನ ಸೇನಾಬಲ ಕಳಿಸುವಂತೆ ಮನವಿ ಮಾಡಿದ್ದರು. ಆದರೆ ಕಾಂಗ್ರೆಸ್ ನ ರಿಮೋಟ್ ಕಂಟ್ರೋಲ್ ಆಗಿದ್ದ ಸರ್ಕಾರ ಅವರ ಮನವಿಯನ್ನು ಪರಿಗಣಿಸಿರಲಿಲ್ಲ ಎಂದು ಹೇಳಿದ್ದಾರೆ.

ಯುಪಿಎ ಸರ್ಕಾರದ ಸಹಾಯವನ್ನು ಪಡೆಯದೆಯೇ ರಮಣ್ ಸಿಂಗ್ ರಾಜ್ಯವನ್ನು ಉತ್ತಮ ರೀತಿಯಲ್ಲಿ ನಡೆಸಿದ್ದಾರೆ. ಛತ್ತೀಸ್ಗಢ ಕೂಡ ಭಾರತದ ಒಂದು ಭಾಗವೆಂದು ಕಾಂಗ್ರೆಸ್ ತಿಳಿದಿರಲಿಲ್ಲ. ಸಾಕಷ್ಟು ಋಣಾತ್ಮಕ ವಾತಾವರಣವಿದ್ದರೂ ರಮಣ್ ಸಿಂಗ್ ಅವರು ರಾಜ್ಯ ಅಭಿವೃದ್ಧಿಗಾಗಿ ಶ್ರಮಪಟ್ಟಿದ್ದಾರೆಂದು ತಿಳಿಸಿದರು.

ಕಾಂಗ್ರೆಸ್ ಪಕ್ಷದ ನಾಲ್ಕು ತಲೆಮಾರುಗಳು ದೇಶದಲ್ಲಿ ಆಡಳಿತ ನಡೆಸಿದೆ. ಜನರ ಭವಿಷ್ಯವೇನಾಯಿತು? ಕೇವಲ ಒಂದು ಕುಟುಂಬದ ಬಗ್ಗೆಯಷ್ಟೇ ಚಿಂತಿಸಿದ್ದರು. ಆದರೆ, ಜನರ ಕಲ್ಯಾಣ ಕುರಿತಂತೆ ಎಂದಿಗೂ ಆಲೋಚಿಸಿರಲಿಲ್ಲ. ಇಂತಹವರು ಜನರ ಆಶಾಭಾವನೆಗಳನ್ನು ಪೂರ್ಣಗೊಳಿಸುತ್ತಾರೆಂದು ಹೇಗೆ ನಂಬುವುದು? ಎಂದು ಪ್ರಶ್ನಿಸಿದ್ದಾರೆ.

ಛತ್ತೀಸ್ಗಢ ರಾಜ್ಯ ಕುರಿತಂತೆ ಮಾತನಾಡಿದ ಅವರು, ಛತ್ತೀಸ್ಗಢ ರಾಜ್ಯಕ್ಕೆ ಇದೀಗ 18 ವರ್ಷಗಳಾಗಿವೆ. ರಾಜ್ಯ ಸಾಕಷ್ಟು ಹೊಸ ಗುರಿಗಳನ್ನು ಹೊಂದಿದೆ. ರಾಜ್ಯಕ್ಕಿದು ಅತ್ಯಂತ ಕಠಿಣ ಸಮಯವಾಗಿದೆ. ಮಕ್ಕಳಿಗೆ 18 ವರ್ಷಗಳಾದಾಗ ಪೋಷಕರು ಅವರ ಭವಿಷ್ಯದ ಬಗ್ಗೆ ಹೇಗೆ ಚಿಂತಿಸುತ್ತಾರೋ ಹಾಗೆ ಇಂದು ಛತ್ತೀಸ್ಗಢದ ಭವಿಷ್ಯದ ಬಗ್ಗೆ ಯೋಚಿಸಬೇಕಿದೆ. ರಾಜ್ಯದ ಕಲ್ಯಾಣದ ಬಗ್ಗೆ ಚಿಂತನೆ ನಡೆಸುವಂತೆ ಜನರ ಬಳಿ ಮನವಿ ಮಾಡಿಕೊಳ್ಳುತ್ತೇನೆ. ಈಗಾಗಲೇ ಒಂದು ಬಾರಿ ಅವಕಾಶ ನೀಡಿದ್ದೀರಿ. ಮತ್ತೊಮ್ಮೆ ಅವಕಾಶ ನೀಡಿ ಎಂದು ಕೇಳಿಕೊಳ್ಳುತ್ತೇನೆ ಎಂದರು.

PM Modi,Chhattisgarh,BJP Rally

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ