ವಿವಾದಕ್ಕೆ ಕಾರಣವಾದ ಮುಖ್ಯಮಂತ್ರಿ ಹೆಚ್ ಡಿ ಕುಮರಸ್ವಾಮಿ ಹೇಳಿಕೆ

ಬೆಂಗಳೂರು, ಜು.12- ನಾಲ್ಕು ವರ್ಷದಿಂದ ಎಲ್ಲಿ ಮಲಗಿದ್ದೆ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮರಸ್ವಾಮಿ ನೀಡಿದ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ನಡುವೆ ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ಇನ್ನಷ್ಟು ಕಾವೇರಿದೆ.

ಕಬ್ಬಿಗೆ ಬಾಕಿ ಪಾವತಿಸುವಂತೆ ರೈತರು ಪ್ರತಿಭಟನೆ ನಡೆಸುವ ವೇಳೆ ಮಹಿಳೆ ಜಯಶ್ರೀ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ನಾಲಾಯಕ್ ಎಂದು ಟೀಕಿಸಿದ್ದರು.

ಅದಕ್ಕೆ ಇಂದು ಬೆಂಗಳೂರು ಕೃಷಿ ವಿವಿಯ ಕೃಷಿ ಮೇಳದಲ್ಲಿ ಮಾತನಾಡಿದ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು, ಜಯಶ್ರೀ ಹೇಳಿಕೆಗೆ ಆಕ್ರೋಶ ವ್ಯಕ್ತ ಪಡಿಸಿದ್ದರು.
ಪ್ರತಿಭಟನೆಯಲ್ಲಿ ರೈತ ಮಹಿಳೆಯೊಬ್ಬರು ಕೊರಳಿಗೆ ಹಸಿರು ಶಾಲು ಹಾಕಿಕೊಂಡು ನನ್ನನ್ನು ನಾಲಾಯಕ್ ಎಂದು ಟೀಕೆ ಮಾಡಿದ್ದಾರೆ. ನಾನು ಅಧಿಕಾರಕ್ಕೆ ಬಂದು ಆರು ತಿಂಗಳಾಗಿದೆ. ಕಬ್ಬು ಬಾಕಿ ಇರುವುದು ನಾಲ್ಕು ವರ್ಷದಿಂದ. ಇಷ್ಟು ದಿನ ಎಲ್ಲಿ ಮಲಗಿದ್ಯಮ್ಮ ತಾಯಿ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. ಆಕೆ ಒಂದು ದಿನವಾದರೂ ಕೃಷಿ ಕೆಲಸ ಮಾಡಿದ್ದಾಳೋ ಇಲ್ವೋ ಎಂದು ಕೇಳಿದರು.

ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಖುದ್ದು ಜಯಶ್ರೀ ಅವರು, ನಾನು ಪ್ರತಿಭಟನೆಯ ವೇಳೆ ನಾನು ಬಾಯಿ ತಪ್ಪಿ ಮಾತನಾಡಿದ್ದೇನೆ. ಅದಕ್ಕೆ ಕ್ಷಮೆ ಕೇಳುತ್ತೇನೆ. ಆದರೆ ಅವರು ಮುಖ್ಯಮಂತ್ರಿಯಂತಹ ಜವಬ್ದಾರಿಯುತ ಸ್ಥಾನದಲ್ಲಿರುವ ಕುಮಾರಸ್ವಾಮಿಯವರಿಂದ ಇಂತಹ ಹೇಳಿಕೆಗಳನ್ನು ನಿರೀಕ್ಷಿಸಿರಲಿಲ್ಲ. ನಾಲ್ಕು ವರ್ಷದಿಂದ ಎಲ್ಲಿ ಮಲಗಿದ್ದೆ ಎಂದು ಕೇಳುವ ಮೂಲಕ ಅವರು ನನ್ನ ನೈತಿಕತೆಯನ್ನು ಪ್ರಶ್ನೆ ಮಾಡಿದ್ದಾರೆ. ಇದು ಇಡೀ ಹೆಣ್ಣು ಕುಲಕ್ಕೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಈ ಹೇಳಿಕೆಯನ್ನು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ವಿರೋಧಿಸಿದ್ದಾರೆ. ಮುಖ್ಯಮಂತ್ರಿ ತಮ್ಮ ಘನತೆಗೆ ತಕ್ಕಂತೆ ಮಾತನಾಡಬೇಕು. ರೈತರನ್ನು ತಪ್ಪಾಗಿ ಬಿಂಬಿಸಬಾರದು ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಕೂಡಲೇ ತಮ್ಮ ಹೇಳಿಕೆ ಕ್ಷಮೆ ಕೇಳಬೇಕು ಇಲ್ಲವಾದರೆ ರಾಜ್ಯದ್ಯಂತ ರೈತರು ನಾಳೆಯಿಂದ ಬೀದಿಗಿಳಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಬಿಜೆಪಿಯ ಹಿರಿಯ ಶಾಸಕ ಕೆ.ಎಸ್.ಈಶ್ವರಪ್ಪ ಹಾಗೂ ಅಶ್ವಥನಾರಾಯಣ ಅವರು ಆಕ್ರೋಶ ವ್ಯಕ್ತ ಪಡಿಸಿ, ಕುಮಾರ ಸ್ವಾಮಿ ರೈತರನ್ನು ಕೀಳಾಗಿ ಚಿತ್ರಿಸಬಾರದು. ಕೂಡಲೇ ಕ್ಷಮೆ ಕೇಳದಿದ್ದರೆ ಮುಂದೆ ನಡೆಯುವ ಅಧಿವೇಶನದಲ್ಲಿ ಈ ಬಗ್ಗೆ ಗಂಭೀರವಾದ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಆದರೆ ಕುಮಾರ ಸ್ವಾಮಿ ಬೆಂಬಲಕ್ಕೆ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ನಿಂತಿದ್ದಾರೆ.
ಕುಮಾರಸ್ವಾಮಿ ಅವರ ತಂದೆಯವರು ಆಗಿರುವ ದೇವೇಗೌಡರು, ನಮ್ಮ ಸರ್ಕಾರವೇನು ರೈತರ ಮೇಲೆ ಗೋಲಿಬಾರ್ ನಡೆಸಿದ್ದಾರಾ. ಕಬ್ಬು ಬೆಳೆಗಾರರ ಸಮಸ್ಯೆ ಏನು ಏಕಾಏಕಿ ಉದ್ಭವಿಸಿದ್ದಲ್ಲ. ಅದನ್ನು ಹೇಗೆ ಬಗೆ ಹರಿಸಬೇಕು ಎಂದು ನನಗೆ ಗೋತ್ತಿದೆ. ಪ್ರಧಾನಿಯಾಗಿ ಕೆಲಸ ಮಾಡಿದ ನನಗೆ ಆಡಳಿತ ಗೋತ್ತಿದೆ ಎಂದು ಹೇಳಿದ್ದಾರೆ.

ಕುಮಾರ ಸ್ವಾಮಿ ಅವರ ಸಹೋದರರಾಗಿರುವ ರೇವಣ್ಣ ಅವರು ಮಾತನಾಡಿ, ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಿ ಕಬ್ಬು ಬೆಳೆಗೆ ಬೆಂಬಲ ನೀಡಬೇಕು. ಅದನ್ನು ಬಿಟ್ಟು ಕುಮಾರಸ್ವಾಮಿಯವರನ್ನು ಹಿಡಿದುಕೊಂಡು ಎಳೆದಾಡಿದ್ದರೆ ಹೇಗೆ. ಕುಮಾರಸ್ವಾಮಿ ಅಥವಾ ರಾಜ್ಯ ಸರ್ಕಾರದ ಬಳಿ ನೋಟು ಪ್ರಿಂಟ್ ಮಾಡುವ ಮಿಷನ್ ಇದ್ಯಾ ಎಂದು ತಿರುಗೇಟು ನೀಡಿದ್ದಾರೆ.

ಈ ನಡುವೆ ಬೆಳಾವಿಯಲ್ಲಿ ಪ್ರತಿಭಟನೆ ನಡೆಸಿದ ರೈತರನ್ನು ಬಂಧಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ಇದು ರೈತ ಸಮುದಾಯವನ್ನು ಇನ್ನಷ್ಟು ಕೆರಳಿಸಿದೆ.

CM H D Kumaraswamy,GKVK,farmers protest

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ