ಜನಾರ್ದನರೆಡ್ಡಿ ಜಾಮೀನು ಅರ್ಜಿಯ ತೀರ್ಪು ನಾಳೆಗೆ ಮುಂದೂಡಿಕೆ

ಬೆಂಗಳೂರು, ನ.13- ಗೋಲ್ಡ್‍ಡೀಲ್ ಪ್ರಕರಣದಲ್ಲಿ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ಗಾಲಿ ಜನಾರ್ದನರೆಡ್ಡಿ ಜಾಮೀನು ಅರ್ಜಿಯ ತೀರ್ಪನ್ನು ನ್ಯಾಯಾಲಯ ನಾಳೆಗೆ ಮುಂದೂಡಿದೆ. ಹಾಗಾಗಿ ಜನಾರ್ದನ ರೆಡ್ಡಿ ಇಂದೂ ಕೂಡ ಜೈಲಿನಲ್ಲೇ ಕಳೆಯುವಂತಾಗಿದೆ
ಆ್ಯಂಬಿಡೆಂಟ್ ಕಂಪೆನಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಫರೀದ್ ಅವರಿಗೆ ಜಾರಿ ನಿರ್ದೇಶನಾಲಯದಿಂದ ನೆರವು ಕೊಡಿಸಲು 20 ಕೋಟಿ ಕಿಕ್‍ಬ್ಯಾಕ್ ಪಡೆದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಿಸಿಬಿಯಿಂದ ಬಂಧನಕ್ಕೊಳಗಾಗಿದ್ದ ಜನಾರ್ದನರೆಡ್ಡಿ ಅವರಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿತ್ತು.
ನಿನ್ನೆ ಕೇಂದ್ರ ಸಚಿವ ಅನಂತ್‍ಕುಮಾರ್ ನಿಧನದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ರಜೆ ಇದ್ದಿದ್ದರಿಂದ ಜಾಮೀನು ಅರ್ಜಿ ಸಲ್ಲಿಸಲು ರೆಡ್ಡಿ ವಕೀಲರಿಗೆ ಸಾಧ್ಯವಾಗಿರಲಿಲ್ಲ. ರೆಡ್ಡಿ ವಕೀಲರು ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದು, ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ಇದೆ.

ಈ ಪ್ರಕರಣ ರಾಜಕೀಯ ಪ್ರೇರಿತವಾಗಿದ್ದು, ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಹಾಗೂ ತನಿಖಾಧಿಕಾರಿಗಳು ಪೂರ್ವಾಗ್ರಹ ಪೀಡಿತರಂತೆ ತನಿಖೆ ನಡೆಸುತ್ತಿದ್ದು, ಅವರನ್ನು ಬದಲಾಯಿಸುವಂತೆ ಕೋರಿ ರೆಡ್ಡಿ ಪರ ವಕೀಲರು ಹೈಕೋರ್ಟ್‍ಗೆ ಎರಡು ರಿಟ್ ಪಿಟಿಷನ್‍ಗಳನ್ನು ಸಲ್ಲಿಸಿದ್ದಾರೆ. ಆ ಅರ್ಜಿಗಳ ವಿಚಾರಣೆಯೂ ಬಾಕಿ ಇದೆ. ಈ ನಡುವೆ ಬಂಧನಕ್ಕೊಳಗಾಗಿರುವ ರೆಡ್ಡಿ ಅವರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ತೀರ್ಪನ್ನು ನಾಳೆ ನೀಡುವುದಾಗಿ ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ