ಕೊಡಗು ಸಂತ್ರಸ್ತ ಮಕ್ಕಳ ವಿದ್ಯಾಭ್ಯಾಸ ವೆಚ್ಛ ಭರಿಸಲು ಮುಂದಾದ ನಿರ್ದೇಶಕ, ಬೆನಕ ತಂಡದ ರೂವಾರಿ ಟಿ.ಎ.ನಾಗಾಭರಣ

Varta Mitra News

ಬೆಂಗಳೂರು, ನ.13- ಕೊಡಗಿನಲ್ಲಿ ಸಂತ್ರಸ್ತ ಮಕ್ಕಳ ವಿದ್ಯಾಭ್ಯಾಸದ ಖರ್ಚನ್ನು ವಹಿಸಿಕೊಳ್ಳುವುದಾಗಿ ನಿರ್ದೇಶಕ, ಬೆನಕ ತಂಡದ ರೂವಾರಿ ಟಿ.ಎ.ನಾಗಾಭರಣ ತಿಳಿಸಿದರು.

ಕೊಡಗಿನ ಸಂಕಷ್ಟಗಳಿಗೆ ಧ್ವನಿಯಾಗುವ ಉದ್ದೇಶದಿಂದ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಪೀಪಲ್ ಫಾರ್ ಪೀಪಲ್ ತಂಡ ಆಯೋಜಿಸಿರುವ ಕೊಡಗಿಗಾಗಿ ರಂಗ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉತ್ತಮವಾದ ಕೆಲಸವನ್ನು ಈ ತಂಡ ಮಾಡುತ್ತಿದೆ. ನನ್ನಿಂದಾದ ಸಹಾಯವನ್ನು ನಾನು ಮಾಡುತ್ತೇನೆ. ಮೊದಲನೆಯದಾಗಿ ಸಂತ್ರಸ್ತ ಮಕ್ಕಳ ವಿದ್ಯಾಭ್ಯಾಸದ ಖರ್ಚನ್ನು ಭರಿಸುತ್ತೇನೆ ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಮಾತನಾಡಿ, ದೇಶಾದ್ಯಂತ ಕೊಡಗಿನಲ್ಲಿ ನಡೆದ ಪ್ರವಾಹಕ್ಕೆ ಜನರು ಮಿಡಿದಿದ್ದಾರೆ. ಸರ್ಕಾರ ಕೂಡ ತನ್ನ ಶಕ್ತಿ ಮೀರಿ ಕೆಲಸ ಮಾಡಿದೆ. ನಮ್ಮ ಸಂಘ ನೆರವು ನೀಡಿದೆ. ತಂಡದ ಸಮಾಜಮುಖಿ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.

ಸಂಚಾರಿ ತಂಡದ ಮುಖ್ಯಸ್ಥೆ ಮಂಗಳಾ ಮಾತನಾಡಿ, ನಿರಂತರವಾಗಿ ಪರಿಸರವಾಗಿ ಮೇಲೆ ನಡೆದ ದೌರ್ಜನ್ಯದ ಪರಿಣಾಮ ಕೊಡಗಿನ ಮೇಲಾಗಿದೆ. ಇದು ಎಚ್ಚರಿಕೆಯ ಗಂಟೆ, ಜನ ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಘೋರ ದುರಂತ ಎದುರಾಗಲಿದೆ ಎಂದು ಹೇಳಿದರು.

ಪೀಪಲ್ ಫಾರ್ ಪೀಪಲ್ ತಂಡ ಕೊಡಗಿನ ಜನರ ಬದುಕನ್ನು ಕಟ್ಟಿಕೊಡುವ ಕೆಲಸ ಮಾಡುತ್ತಿದೆ. ಇದು ಅತ್ಯಂತ ಶ್ರೇಷ್ಠವಾದದ್ದು ಎಂದರು.
ಕಾರ್ಯಕ್ರಮದಲ್ಲಿ ಹಾಜರಿದ್ದ ಕೊಡಗಿನ ನಿರಾಶ್ರಿತರಾದ ಭವಾನಿ ಮತ್ತು ಲಲಿತಾ ತಮ್ಮ ಅನುಭವಗಳನ್ನು ಹಂಚಿಕೊಂಡರಲ್ಲದೆ, ತಮ್ಮ ಕುಟುಂಬಕ್ಕೆ ಜೀವನಾದಾರವಾಗಿದ್ದ ಎರಡು ಎಕರೆ ಕಾಫಿ ತೋಟ ಸರ್ವನಾಶವಾಗಿದೆ. ಮುಂದೇನು ಎಂಬ ಚಿಂತೆ ಕಾಡುತ್ತಿದೆ ಎಂದು ಅಲವತ್ತುಗೊಂಡರು.

ಮಕ್ಕಳಾದ ಭವಾನಿ, ಲಲಿತಾ, ಶ್ರೇಯಾ ಮುಂತಾದವರು ಮಾತನಾಡುತ್ತಿದ್ದಾಗ ಎಲ್ಲರ ಮನ ಕರಗಿ ಕಣ್ಣಾಲಿಗಳು ತೇವವಾದವು.
ಯುವ ನಿರ್ದೇಶಕ ಕೆ.ಎಂ.ಚೇತನ್ಯ, ತಂಡದ ವಿಶ್ವಾಸ್ ಭಾರದ್ವಾಜ್, ಪ್ರಸ್ತಾವನಾ, ಸದಸ್ಯರಾದ ಅಂಬಿಕಾ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್, ಖ್ಯಾತ ಗಾಯಕಿ ಸ್ಪರ್ಶ ಆರ್.ಕೆ. ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ