ನ.15ರಿಂದ ಮೂರು ದಿನಗಳ ಕಾಲ ರಾಜ್ಯದಲ್ಲಿ ಮಳೆ: ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ

ಬೆಂಗಳೂರು, ನ.11-ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ವಾಯುಭಾರ ಕುಸಿತ ಚಂಡಮಾರುತವಾಗಿ ಪರಿವರ್ತನೆಯಾಗಿದ್ದು, ನ.15ರಿಂದ ಮೂರು ದಿನಗಳ ಕಾಲ ರಾಜ್ಯದಲ್ಲಿ ಮಳೆಯಾಗಲಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಂಡಮಾರುತಕ್ಕೆ ಗಜ ಎಂಬ ಹೆಸರಿಡಲಾಗಿದೆ. ಅಂಡಮಾನ್ ದ್ವೀಪದ ಕಡೆಯಿಂದ ಚಂಡಮಾರುತ ಬರುತ್ತಿದೆ. ನ.14 ಅಥವಾ 15ರಂದು ತಮಿಳುನಾಡಿನ ಕರಾವಳಿ ತಲುಪುವ ನಿರೀಕ್ಷೆ ಇದೆ. ಚಂಡಮಾರುತದ ಪ್ರಭಾವದಿಂದ ನಮ್ಮ ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ಮೂರು ದಿನಗಳ ಕಾಲ ಮಳೆಯಾಗುವ ನಿರೀಕ್ಷೆ ಇದೆ. ನ.15ರಂದು ಮಳೆ ಪ್ರಾರಂಭವಾಗುವ ಸಾಧ್ಯತೆಗಳಿವೆ. 16ರಂದು ಹೆಚ್ಚಿನ ಮಳೆಯನ್ನು ನಿರೀಕ್ಷಿಸಲಾಗುತ್ತಿದೆ. 17ವರೆಗೂ ರಾಜ್ಯದಲ್ಲಿ ಮಳೆಯಾಗುವ ಮುನ್ಸೂಚನೆಗಳಿವೆ ಎಂದರು.

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಗಜ ಚಂಡಮಾರುತ ತೀವ್ರಗೊಳ್ಳುವ ಸಾಧ್ಯತೆಗಳಿದ್ದು, ಯಾವ ಕಡೆಗೆ ಮುನ್ನುಗ್ಗಲಿವೆ ಎಂಬ ಆಧಾರದ ಮೇಲೆ ರಾಜ್ಯದಲ್ಲಾಗುವ ಮಳೆ ಪ್ರಮಾಣವನ್ನು ನಿರ್ಧರಿಸಲಾಗುವುದು. ಇನ್ನೆರಡು ದಿನಗಳ ನಂತರ ಮಳೆ ನಿರ್ದಿಷ್ಟ ಲಕ್ಷಣ ಗೋಚರವಾಗಲಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ