ಕಾಯ ಕಾದಂಬರಿ ಬಿಡುಗಡೆ

ಬೆಂಗಳೂರು, ನ.11- ಪುಸ್ತಕಗಳು ಓದುಗನ ಚಿಂತನೆಯನ್ನು ಬೆಳೆಸಿದಾಗ ಮಾತ್ರ ಉತ್ತಮ ಕೃತಿಯಾಗಲು ಸಾಧ್ಯ ಎಂದು ಲೇಖಕ ಡಾ.ನಟರಾಜ್ ಹುಳಿಯಾರ್ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಅಮರೆಂದ್ರ ಹೊಲ್ಲಂಬಳ್ಳಿ ಅವರ ಕಾಯ ಕಾದಂಬರಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಸಮಸ್ಯೆಗೆ ಸೀಮಿತವಾದ ಚೌಕಟ್ಟುಗಳಿರುವುದಿಲ್ಲ. ಓದುಗರ ಆಲೋಚನೆ ಬೇರೆ ರೀತಿಯಲ್ಲಿರುತ್ತದೆ. ಉತ್ತಮ ಕೃತಿ ಓದುಗನ ಆಲೋಚನೆಯನ್ನು ವಿಸ್ತರಿಸುವಂತೆ ಮಾಡಬೇಕು. ಆತನಲ್ಲಿ ಸೂಕ್ಷ್ಮ ಗ್ರಹಿಕೆಯನ್ನು ಬೆಳೆಸಬೇಕು ಎಂದು ಅಭಿಪ್ರಾಯಪಟ್ಟರು.

ಕಾದಂಬರಿಗಳ ಓದಿವಿಕೆ ಪರಕಾಯ ಪ್ರವೇಶವಿದ್ದಂತೆ. ಆಯಾ ಕಾಲಘಟ್ಟದ ಸಂಸ್ಕøತಿ, ಆಲೋಚನೆಗಳನ್ನು ತಾನೇ ಅನುಭವಿಸಿದಂತೆ ಓದುಗ ಮಗ್ನನಾಗಬೇಕು. ಇತ್ತೀಚೆಗೆ ಪ್ರಗತಿಪರ ವಲಯದಲ್ಲಿ ಹೊಸ ಆಲೋಚನೆಗಳು ಚರ್ಚೆಗೆ ಒಳಗಾಗುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದರು.
ಸಿನಿಮಾ ನಿರ್ದೇಶಕ ಬಿ.ಎಂ.ಗಿರಿರಾಜ್ ಮಾತನಾಡಿ, ಅಮರೇಂದ್ರ ಅವರ ಕಾಯ ಕಾದಂಬರಿ ಸಮಾಜದಲ್ಲಿನ ಸಣ್ಣತನಗಳನ್ನು ಮೀರಿ ಆತ್ಮಾವಲೋಕನ ಮಾಡಿಕೊಳ್ಳಲು ಮಾರ್ಗದರ್ಶನ ನೀಡುತ್ತದೆ. ಇಂತಹ ಕೃತಿಗಳು ಹೆಚ್ಚಾಗಿ ಜನರ ಕೈಗೆ ತಲುಪಬೇಕು. ಸಮಾಜ ಆಧುನಿಕತೆಗೆ ಹೊಂದಿಕೊಂಡಂತೆ ಸಣ್ಣತನಗಳಿಗೆ ಒಗ್ಗಿಕೊಳ್ಳುತ್ತಿದ್ದು, ಅದನ್ನು ಮೀರಿ ಬೆಳೆಯುವ ಪರಿಪಾಠವನ್ನು ಕಾದಂಬರಿಕಾರರು, ಲೇಖಕರು ಹುಟ್ಟುಹಾಬೇಕು ಎಂದು ಹೇಳಿದರು.

ಲೇಖಕ ಡಾ.ಬಿ.ಸಿ.ನಾಗೇಂದ್ರ ಕುಮಾರ್ ಮಾತನಾಡಿ, ಕಾದಂಬರಿ ದೇಹ ಹಾಗೂ ಕೋಟಲೆಗಳ ಸಂಘರ್ಷದ ಕಥಾನಕವಾಗಿದೆ. ದೇಶೀಯತೆ ಕಳೆದುಕೊಳ್ಳುತ್ತಿರುವ ತನ್ನ ಅಸ್ಮಿತೆಯನ್ನು ಬಹಳ ಅಚ್ಚುಕಟ್ಟಾಗಿ ದಾಖಲಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಓದಿಗಿಂತಲೂ ಟಿವಿ ಹಾಗೂ ದೃಶ್ಯಮಾಧ್ಯಮಗಳನ್ನು ನೋಡುವ ಸಂಸ್ಕøತಿ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಕಾಯ ಕಾದಂಬರಿ ಓದುವ ಸಂಸ್ಕøತಿಯನ್ನು ಮರುಜೀವನಗೊಳಿಸುತ್ತದೆ ಎಂದರು.

ಕಾದಂಬರಿಯಲ್ಲಿ ತೃತೀಯ ಲಿಂಗಿಗಳ ಬದುಕನ್ನು ಸವಿಸ್ತಾರವಾಗಿ ಕಟ್ಟಿಕೊಡಲಾಗಿದೆ. ಕಾಮದ ವಿವಿಧ ಪ್ರಾಕಾರಗಳನ್ನು ಚರ್ಚಿಸಲಾಗಿದೆ. ಹೆಣ್ಣು-ಗಂಡು ಎಂಬ ಲಿಂಗ ತಾರತಮ್ಯ ಮಾಡುವವರು ಕಾಯ ಕಾದಂಬರಿಯನ್ನು ಒಮ್ಮೆ ಓದಬೇಕೆಂದು ಅವರು ಸಲಹೆ ನೀಡಿದರು.

ಜಾನಪದ ವಿದ್ವಾಂಸ ಡಾ.ಸಣ್ಣರಾಮ, ಪ್ರತಿಷ್ಠಾನದ ಅಧ್ಯಕ್ಷ ಎಂ.ಪ್ರಕಾಶ್‍ಮೂರ್ತಿ, ಲೇಖಕರಾದ ಬೇಲೂರು ರಘುನಂದನ್, ಆರ್.ರಾಮಲಿಂಗಪ್ಪಶೆಟ್ಟಿ, ಕಾದಂಬರಿ ಕರ್ತೃ ಅಮರೇಂದ್ರ ಹೊಲ್ಲಂಬಳ್ಳಿ ಮತ್ತಿತರರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ