ಟಿಪ್ಪು ಜಯಂತಿ ಆಚರಣೆಗೆ ವಿರೋಧ: ರಾಜ್ಯಾದ್ಯಂತ ಬಿಜೆಪಿ ಬೃಹತ್ ಪ್ರತಿಭಟನೆ

ಬೆಂಗಳೂರು,ನ.9- ರಾಜ್ಯ ಸರ್ಕಾರದ ವತಿಯಿಂದ ನಾಳೆ ಟಿಪ್ಪು ಜಯಂತಿ ಆಚರಣೆ ಮಾಡುತ್ತಿರುವುದನ್ನು ವಿರೋಧಿಸಿ ಬಿಜೆಪಿ ಇಂದು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸಿತು.

ರಾಜಧಾನಿ ಬೆಂಗಳೂರು, ಮೈಸೂರು, ಮಡಿಕೇರಿ, ತುಮಕೂರು, ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ, ದಕ್ಷಿಣಕನ್ನಡ, ಉಡುಪಿ, ಕಾರವಾರ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಬಳ್ಳಾರಿ ಸೇರಿದಂತೆ ಎಲ್ಲೆಡೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ಕ್ರಮವನ್ನು ತೀವ್ರವಾಗಿ ವಿರೋಧಿಸಿದರು.

ಬೆಂಗಳೂರಿನಲ್ಲಿ ಶಾಸಕ ಆರ್.ಅಶೋಕ್, ಬಿಬಿಎಂಪಿ ಸದಸ್ಯರು ಸೇರಿದಂತೆ ಮತ್ತಿತರ ಬಿಜೆಪಿ ಮುಖಂಡರು ಮೈಸೂರು ಬ್ಯಾಂಕ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಯಾವುದೇ ಕಾರಣಕ್ಕೂ ಸರ್ಕಾರ ಟಿಪ್ಪು ಜಯಂತಿ ಮಾಡಬಾರದು ಎಂದು ಒತ್ತಾಯಿಸಿದರು.

ಇನ್ನೊಂದೆಡೆ ಬಿಜೆಪಿಯಿಂದ ಸಾಮಾಜಿಕ ಜಾಲತಾಣದಲ್ಲಿ ಅರೆಸ್ಟ್ ಮಿ(ನನ್ನನ್ನು ಬಂಧಿಸಿ) ಎಂಬ ಅಭಿಯಾನವನ್ನು ಆರಂಭಿಸಲಾಗಿದೆ. ಯಾವುದೇ ಕಾರಣಕ್ಕೂ ಮತಾಂಧ ಟಿಪ್ಪುವಿನ ಜಯಂತಿಯನ್ನು ಸರ್ಕಾರ ಆಚರಣೆ ಮಾಡಲೇಬಾರದು. ಒಂದು ವೇಳೆ ಮಾಡುವಂತಿದ್ದರೆ ನಿಮ್ಮ ನಿಮ್ಮ ಪಕ್ಷದ ವತಿಯಿಂದ ಕಚೇರಿಗಳಲ್ಲಿ ಮಾಡಿಕೊಳ್ಳಿ. ಸರ್ಕಾರದ ವತಿಯಿಂದ ಆಚರಣೆ ಮಾಡುತ್ತಿರುವುದಕ್ಕೆ ನಮ್ಮ ವಿರೋಧವಿದೆ.

ಒಂದು ವೇಳೆ ವಿರೋಧ ಮಾಡುವವರನ್ನು ಬಂಧಿಸುವುದಾದರೆ ನನ್ನನ್ನು ಬಂಧಿಸಿ ಎಂದು ಹ್ಯಾಶ್ ಟ್ಯಾಗ್ ಮಾಡಲಾಗಿದೆ. ಇದನ್ನು ಅನೇಕರು ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಇದಕ್ಕೆ ಪರ ವಿರೋಧ ಅಭಿಪ್ರಾಯವೂ ಕೂಡ ವ್ಯಕ್ತವಾಗಿದೆ. ನಾನು ಟಿಪ್ಪು ಜಯಂತಿಯನ್ನು ಬಹಿರಂಗವಾಗಿಯೇ ವಿರೋಧಿಸುತ್ತೇನೆ. ಆತ ಹಿಂದೂ ಧರ್ಮದ ವಿರೋಧಿ ಎಂಬುದರಲ್ಲಿ ಎರಡು ಮಾತಿಲ್ಲ. ಸರ್ಕಾರದ ವತಿಯಿಂದ ಆಚರಣೆ ಮಾಡುವುದಾದರೆ ನೀವು ನನ್ನ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರು ಹಾಕಬಾರದು ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ, ಸಂಸದ ಪ್ರತಾಪ್ ಸಿಂಹ, ಶಾಸಕ ಸಿ.ಟಿ.ರವಿ ಸೇರಿದಂತೆ ಅನೇಕರು ಬಹಿರಂಗವಾಗಿಯೇ ಹೇಳಿದ್ದಾರೆ.

ನಾವು ಟಿಪ್ಪು ಜಯಂತಿಯನ್ನು ವಿರೋಧಿಸುತ್ತೇವೆ. ಬಂಧಿಸುವುದಾದರೆ ನಮ್ಮನ್ನು ಬಂಧಿಸಿ ಎಂದು ಸಿ.ಟಿ.ರವಿ ಸರ್ಕಾರಕ್ಕೆ ಬಹಿರಂಗ ಸವಾಲು ಹಾಕಿದ್ದಾರೆ.
ಇನ್ನು ಮೈಸೂರು, ರಾಯಚೂರು, ಕೊಡಗು, ಚಿತ್ರದುರ್ಗ ಸೇರಿದಂತೆ ಅನೇಕ ಕಡೆ ಟಿಪ್ಪು ಜಯಂತಿ ಆಚರಣೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ಬಂಧಿಸಿ.. ಬಂಧಿಸಿ… ನಮ್ಮನ್ನು ಬಂಧಿಸಿ. ನಾವು ಬಹಿರಂಗವಾಗಿಯೇ ಟಿಪ್ಪು ಜಯಂತಿಯನ್ನು ವಿರೋಧಿಸುತ್ತೇವೆ. ಸರ್ಕಾರ ಪೆÇಲೀಸರ ಮೂಲಕ ಪ್ರತಿಭಟನೆಯನ್ನು ಹತ್ತಿಕ್ಕುವುದಾದರೆ ಅದನ್ನು ಎದುರಿಸಲು ಸಿದ್ದ ಎಂದು ಸವಾಲು ಹಾಕಿದ್ದಾರೆ.

ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕರಾದ ನಾಗೇಂದ್ರ, ರಾಮದಾಸ್, ಹರ್ಷವರ್ಧನ, ಮಡಿಕೇರಿಯಲ್ಲಿ ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ, ತುಮಕೂರಿನಲ್ಲಿ ಶಾಸಕ ಜ್ಯೋತಿಗಣೇಶ್, ಮಾಧುಸ್ವಾಮಿ, ಮಸಾಲೆ ಜಯರಾಂ, ಬಿ.ಸಿ.ನಾಗೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಸಂಸದ ಜಿ.ಎಚ್.ಬಸವರಾಜ್ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬಿಗಿಬಂದೋಬಸ್ತ್:
ಟಿಪ್ಪು ಜಯಂತಿಯನ್ನು ಪ್ರಬಲವಾಗಿ ವಿರೋಧಿಸುತ್ತಿರುವ ಮಡಿಕೇರಿ, ಚಿತ್ರದುರ್ಗ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ,ಉತ್ತರ ಕನ್ನಡ ಸೇರಿದಂತೆ ಬಿಜೆಪಿ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಯಿತು.

ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಡಿಕೇರಿ, ಚಿತ್ರದುರ್ಗ, ರಾಯಚೂರಿನಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿತ್ತು. ಪ್ರತಿಭಟನಾನಿರತರನ್ನು ಪೆÇಲೀಸರು ವಶಕ್ಕೆ ಪಡೆದರು. ಈ ವೇಳೆ ಅಲ್ಲಲ್ಲಿ ತಳ್ಳಾಟ, ಕೂಗಾಟ, ಮಾತಿನ ಚಕಮಕಿಯೂ ನಡೆಯಿತು. ನಾಳೆ ಟಿಪ್ಪು ಜಯಂತಿ ಆಚರಣೆ ಹಿನ್ನೆಲೆಯಲ್ಲಿ ರಾಜ್ಯದ ನಾನಾ ಕಡೆ ಬಿಗಿಭದ್ರತೆಗಳನ್ನು ಕೈಗೊಳ್ಳಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ