
ನವದೆಹಲಿ: ಆಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆಗೆ ಭಾರತ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಆಯೋಜನೆಯಾಗಿರುವ ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿರುವ ಭಾರತ ತಾಲಿಬಾನಿ ನಾಯಕರ ಜತೆ ಮಾತುಕತೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಮಾಸ್ಕೋದಲ್ಲಿ ಆಫ್ಘಾನಿಸ್ತಾನ ಮತ್ತು ತಾಲಿಬಾನ್ ನಾಯಕರ ಅನಧಿಕೃತ ಮಟ್ಟದ ಚರ್ಚೆ ನಡೆಯಲಿದೆ. ವೇಳೆ ಭಾರತದ ನಾಯಕರೂ ಕೂಡ ಉಪಸ್ಥಿತರಿರಲಿದ್ದಾರೆ.
ಈ ಕುರಿತು ಮಾಹಿತಿ ನೀಡಿರಕುವ ವಿದೇಶಾಂಗ ಕಾರ್ಯದರ್ಶಿ ರವೀಶ್ ಕುಮಾರ್ ಅವರು, ಇದೇ ನವೆಂಬರ್ 9ರಂದು ಭಾರತ ಮಾಸ್ಕೋ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಸಭೆಯ ನಡುವೆಯೇ ತಾಲಿಬಾನ್ ನಾಯಕರೊಂದಿಗೂ ಚರ್ಚೆ ನಡೆಯಲಿದೆ. ಈ ಬಗ್ಗೆ ತಮಗೆ ಮಾಸ್ಕೋ ಮಾಹಿತಿ ನೀಡಿದ್ದು, ಈ ಸಭೆ ಅಧಿಕೃತ ಮಟ್ಟದ ಸಭೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆಗಾಗಿ ಇರುವ ಎಲ್ಲ ಮಾರ್ಗಗಳನ್ನೂ ಭಾರತ ಸರ್ಕಾರ ಉತ್ತೇಜಿಸುತ್ತದೆ. ಹೀಗಾಗಿ ಸ್ವತ: ಭಾರತವೇ ತಾಲಿಬಾನ್ ನಾಯಕರೊಂದಿಗೆ ಮಾತಕತೆ ನಡೆಸಲು ಸಿದ್ಧವಾಗಿದೆಯಾದರೂ ಈ ಸಭೆ ಅನಧಿಕೃತ ಮಟ್ಟದಲ್ಲಿರುತ್ತದೆ. ಭಾರತದಂತೆಯೇ ಆಫ್ಘಾನಿಸ್ತಾನದಲ್ಲಿಯೂ ಕೂಡ ಏಕತೆ ಮತ್ತು ಬಹುತ್ವ, ಭದ್ರತೆ, ಸ್ಥಿರತೆ ಮತ್ತು ಸಮೃದ್ಧಿಯನ್ನು ತರಲು ಭಾರತ ತನ್ನ ಯತ್ನ ನಡೆಸಲಿದೆ ಎಂದು ಹೇಳಿದ್ದಾರೆ.
ಇನ್ನು ಆಫ್ಘಾನಿಸ್ತಾನ ವಿಚಾರಕ್ಕೆ ಸಂಬಂಧಿಸಿದಂತೆ ತಾಲಿಬಾನ್ ನೊಂದಿಗೆ ರಷ್ಯಾ ಮಾತುಕತೆ ಆಯೋಜನೆ ಮಾಡಿರುವುದು ಇದು ಎರಡನೇ ಬಾರಿಯಾಗಿದ್ದು, ಈ ಹಿಂದೆ ತನ್ನ ನೇತೃತ್ವದಲ್ಲೇ ರಷ್ಯಾ ಆಪ್ಘಾನಿಸ್ತಾನ ಮತ್ತು ತಾಲಿಬಾನ್ ನಾಯಕರನ್ನು ಚರ್ಚೆಗೆ ಆಹ್ವಾನಿಸಿತ್ತು, ಇದೀಗ ಇದೇ ಮೊದಲ ಬಾರಿಗೆ ಭಾರತವನ್ನು ಚರ್ಚೆಗೆ ಆಹ್ವಾನಿಸಿದೆ.