ಆರ್‌ಬಿಐ ಸ್ವಾಧೀನಪಡಿಸಿಕೊಳ್ಳಲು ಮೋದಿ ಸರಕಾರದ ಯತ್ನ: ಚಿದಂಬರಂ

ಕೋಲ್ಕೊತಾ: ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಲು ನರೇಂದ್ರ ಮೋದಿ ಸರಕಾರ ಆರ್‌ಬಿಐಯನ್ನೇ ‘ವಶಪಡಿಸಿಕೊಳ್ಳಲು’ ಮುಂದಾಗಿದೆ ಎಂದು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಆರೋಪಿಸಿದರು. ಅಂತಹ ಯಾವುದೇ ಪ್ರಯತ್ನ ನಡೆಸಿದಲ್ಲಿ ಪರಿಣಾಮ ‘ಮಾರಣಾಂತಿಕ’ವಾಗಬಹುದು ಎಂದೂ ಅವರು ಎಚ್ಚರಿಸಿದರು.

ಕೇಂದ್ರ ಬ್ಯಾಂಕಿನ ನಿರ್ದೇಶಕರನ್ನು ಆಯ್ದ ನಾಮನಿರ್ದೇಶಿತರಿಂದ ನಿಯಂತ್ರಿಸುತ್ತಿದ್ದು, ನವೆಂಬರ್ 19ರಂದು ನಡೆಯುವ ಆರ್‌ಬಿಐ ನಿರ್ದೇಶಕ ಮಂಡಳಿ ಸಭೆಯಲ್ಲಿ ತನ್ನ ಪ್ರಸ್ತಾವಗಳಿಗೆ ಸಮ್ಮತಿ ಪಡೆದುಕೊಳ್ಳಲು ಸರಕಾರ ಎಲ್ಲ ಪ್ರಯತ್ನ ನಡೆಸುತ್ತಿದೆ ಎಂದು ಚಿದಂಬರಂ ಟೀಕಿಸಿದರು.

ವಿತ್ತೀಯ ಕೊರತೆ ಬಿಕ್ಕಟ್ಟಿನಿಂದ ಸರಕಾರಕ್ಕೆ ಭಯ ಹುಟ್ಟಿದೆ. ಚುನಾವಣೆ ವರ್ಷದಲ್ಲಿ ವೆಚ್ಚವನ್ನು ಹೆಚ್ಚಿಸಲು ಸರಕಾರ ಬಯಸಿದೆ. ಎಲ್ಲ ಮಾರ್ಗಗಳೂ ವಿಫಲವಾದ ಬಳಿಕ ಆರ್‌ಬಿಐ ಮೀಸಲು ನಿಧಿಯಿಂದ 1 ಲಕ್ಷ ಕೋಟಿ ರೂ.ಗಳನ್ನು ನೀಡುವಂತೆ ಸರಕಾರ ಬೇಡಿಕೆ ಸಲ್ಲಿಸಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಮಾಜಿ ವಿತ್ತಸಚಿವರು ಆರೋಪಿಸಿದರು.

ಆರ್‌ಬಿಐ ಗವರ್ನರ್ ತಮ್ಮ ನಿಲುವಿಗೆ ಅಂಟಿಕೊಂಡಲ್ಲಿ ಆರ್‌ಬಿಐ ಕಾಯ್ದೆಯ ಸೆಕ್ಷನ್‌ 7ನ್ನು ಜಾರಿಗೊಳಿಸಲು ಕೇಂದ್ರ ಸಿದ್ಧವಾಗಿದೆ. ಆ ಮೂಲಕ ಸರಕಾರದ ಖಾತೆಗೆ 1 ಲಕ್ಷ ಕೋಟಿ ರೂ.ಗಳನ್ನು ವರ್ಗಾಯಿಸುವಂತೆ ಆರ್‌ಬಿಐಗೆ ನಿರ್ದೇಶನ ನೀಡಲಿದೆ ಎಂದು ಚಿದಂಬರಂ ಹೇಳಿಕೊಂಡರು.

ನವೆಂಬರ್ 19ರಮದು ಆರ್‌ಬಿಐ ನಿರ್ದೇಶಕ ಮಂಡಳಿ ಸಭೆ ನಡೆಯಲಿದೆ. ಆರ್‌ಬಿಐ ನಿರ್ದೇಶಕ ಮಂಡಳಿಯಲ್ಲಿ ಸರಕಾರ ತನ್ನದೇ ಆಯ್ಕೆಯ ನಾಮನಿರ್ದೇಶಿತರನ್ನು ತುಂಬಿದೆ. ಆ ಮೂಲಕ ಸಭೆಯಲ್ಲಿ ಸರಕಾರದ ಪ್ರಸ್ತಾವಗಳಿಗೆ ಒಪ್ಪಿಗೆ ಪಡೆದುಕೊಳ್ಳುವ ಪ್ರಯತ್ನ ನಡೆಸಿದೆ’ ಎಂದು ಚಿದಂಬರಂ ಹೇಳಿದರು.

‘ಆರ್‌ಬಿಐ ಸರಕಾರದ ನಿರ್ದೇಶನವನ್ನು ಉಲ್ಲಂಘಿಸಿದರೆ ಅಥವಾ ಆರ್‌ಬಿಐ ಗವರ್ನರ್ ರಾಜೀನಾಮೆ ನೀಡಿದರೆ- ಎರಡೂ ಸನ್ನಿವೇಶಗಳಲ್ಲಿ ಗಂಭೀರ ಪರಿಣಾಮ ಉಂಟಾಗಲಿದೆ’ ಎಂದು ಅವರು ಎಚ್ಚರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ