14 ವರ್ಷಗಳ ನಂತರ ಬಿಜೆಪಿಯ ಭದ್ರಕೋಟೆಯನ್ನು ಭೇದಿಸಿ ಬಳ್ಳಾರಿಯಲ್ಲಿ ಬಾವುಟ ಹಾರಿಸಿದ ಕಾಂಗ್ರೆಸ್

ಬೆಂಗಳೂರು, ನ.6-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದೂರಾಲೋಚನೆ ಮತ್ತು ಸಚಿವ ಡಿ.ಕೆ.ಶಿವಕುಮಾರ್ ಅವರ ರಣವ್ಯೂಹ ಬಿಜೆಪಿಯನ್ನು ಛಿದ್ರ ಮಾಡಿದ್ದು, ಬಳ್ಳಾರಿಯ ಭದ್ರಕೋಟೆಯನ್ನು 14 ವರ್ಷಗಳ ನಂತರ ಭೇದಿಸಿ ಮತ್ತೊಮ್ಮೆ ಕಾಂಗ್ರೆಸ್ ಬಾವುಟ ಹಾರಿಸಿದೆ.

ಐದು ಕ್ಷೇತ್ರಗಳ ಉಪಚುನಾವಣೆ ಪೈಕಿ ಬಳ್ಳಾರಿ ಮತ್ತು ಶಿವಮೊಗ್ಗ ಮೂರೂ ಪಕ್ಷಗಳಿಗೂ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಮಂಡ್ಯ ಲೋಕಸಭೆ ಮತ್ತು ರಾಮನಗರ ವಿಧಾನಸಭೆ ಚುನಾವಣೆಯ ಫಲಿತಾಂಶ ಕನ್ನಡಿಯಷ್ಟು ಸ್ಪಷ್ಟವಾಗಿತ್ತು. ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವುದು ನಿಶ್ಚಿತ ಎಂದು ಹೇಳಲಾಗುತ್ತಿದ್ದರೂ ಕೊನೆ ಕ್ಷಣದಲ್ಲಿ ಒಂದಷ್ಟು ಗೊಂದಲಗಳಾದವು. ಆದರೆ ಅಂತಿಮವಾಗಿ ಜಮಖಂಡಿ ಕೂಡ ಕಾಂಗ್ರೆಸ್ ಪಾಲಿಗೆ ಒಲಿದಿದೆ.

ಬಳ್ಳಾರಿ ಲೋಕಸಭೆ ಚುನಾವಣೆ ರಾಷ್ಟ್ರ ರಾಜಕಾರಣದ ಗಮನ ಸೆಳೆದಿತ್ತು.1999ರಲ್ಲಿ ಸೋನಿಯಾಗಾಂಧಿಯವರು ಸುಷ್ಮಾ ಸ್ವರಾಜ್ ಅವರ ವಿರುದ್ಧ ಸ್ಪರ್ಧಿಸಿ ಜಯಗಳಿಸಿ ನಂತರ ರಾಜೀನಾಮೆ ನೀಡಿದ್ದರಿಂದ 2004ರಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‍ನ ಕೊಲ್ಲೂರು ಬಸವನಗೌಡ ಆಯ್ಕೆಯಾಗಿದ್ದನ್ನು ಬಿಟ್ಟರೆ ಅನಂತರ ನಡೆದ ಮೂರು ಚುನಾವಣೆಗಳಲ್ಲೂ ಕಾಂಗ್ರೆಸ್ ನಿರ್ನಾಮವಾಗಿತ್ತು.

ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳ ಪೈಕಿ 6ರಲ್ಲಿ ಕಾಂಗ್ರೆಸ್ ಜಯಗಳಿಸಿತ್ತು. ಆದರೂ ಲೋಕಸಭೆಯನ್ನು ಗೆದ್ದುಕೊಳ್ಳುವ ವಿಶ್ವಾಸ ಕಾಂಗ್ರೆಸ್ಸಿಗರಲ್ಲಿ ಇರಲಿಲ್ಲ. 2014ರ ಚುನಾವಣೆಯಲ್ಲಿ ಶ್ರೀರಾಮುಲು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎನ್.ವೈ.ಹನುಮಂತಪ್ಪ ಅವರನ್ನು 85 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು.

ಬಳ್ಳಾರಿಯಲ್ಲಿ ಗಣಿಧಣಿಗಳಾದ ರೆಡ್ಡಿ ಸಹೋದರರು ಮತ್ತು ಶ್ರೀರಾಮುಲು ಅವರು ಅನಭಿಷಿಕ್ತ ದೊರೆಗಳಂತೆ ಮೆರೆಯುತ್ತಿದ್ದರು. ಅವರಿಗೆ 2014ರ ಉಪಚುನಾವಣೆಯಲ್ಲಿ ಇದೇ ಡಿ.ಕೆ.ಶಿವಕುಮಾರ್ ಕಾಂಗ್ರೆಸ್‍ನ ಎನ್.ವೈ.ಗೋಪಾಲಕೃಷ್ಣ ಅವರನ್ನು ಗೆಲ್ಲಿಸಿಕೊಳ್ಳುವ ಮೂಲಕ ಮರ್ಮಾಘಾತ ನೀಡಿದ್ದರು.
ಈಗಿನ ಲೋಕಸಭೆ ಉಪಚುನಾವಣೆಯಲ್ಲೂ ಮತ್ತೊಮ್ಮೆ ಗಣಿಧಣಿಗಳ ಧೂಳು ಅಡಗಿಸುವಲ್ಲಿ ಡಿ.ಕೆ.ಶಿವಕುಮಾರ್ ಯಶಸ್ವಿಯಾಗಿದ್ದಾರೆ. ಬಳ್ಳಾರಿ ಲೋಕಸಭೆ ಚುನಾವಣೆಯನ್ನು ಕಾಂಗ್ರೆಸ್‍ಗಿಂತಲೂ ಬಿಜೆಪಿ ಅತ್ಯಂತ ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿತ್ತು. ಅದಕ್ಕಾಗಿ ಜಾತಿಯ ಟ್ರಂಪ್ ಕಾರ್ಡ್‍ನ್ನು ಬಳಸಿ ಮತಗಳನ್ನು ವಿಭಜಿಸುವ ಪ್ರಯತ್ನ ನಡೆದಿತ್ತು.

ಬಳ್ಳಾರಿ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಜೈಲಿಗೆ ಹೋಗುತ್ತಾರೆ ಎಂದು ಶ್ರೀರಾಮುಲು ಬಹಿರಂಗವಾಗಿ ಹೇಳಿದ್ದರು. ಫಲಿತಾಂಶ ಪ್ರಕಟಗೊಳ್ಳಲಿ ನಾನು ಎಲ್ಲಿರುತ್ತೇನೆ, ಶ್ರೀರಾಮುಲು ಅಣ್ಣ ಎಲ್ಲಿರುತ್ತಾರೆ ಎನ್ನುವುದು ಗೊತ್ತಾಗಲಿದೆ ಎಂದು ಡಿ.ಕೆ.ಶಿವಕುಮಾರ್ ಖಡಕ್ ಸವಾಲು ಹಾಕಿದ್ದರು.

ಬಳ್ಳಾರಿಯ ಉಪಚುನಾವಣಾ ಕಣದಲ್ಲಿ ಬಿಜೆಪಿ ಇನ್ನಿಲ್ಲದಷ್ಟು ಮೈ ಪರಚಿಕೊಂಡಿತ್ತು. ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಹೊರಗಿನವರು ಎಂಬ ಅಪಪ್ರಚಾರ ನಡೆದಿತ್ತು. ಅದಕ್ಕೆ ಪ್ರತಿಯಾಗಿ ಶಾಂತಾ ಆಂಧ್ರದ ಸೊಸೆ ಎಂದು ಕಾಂಗ್ರೆಸ್ ಟಾಂಗ್ ನೀಡಿತ್ತು. ಚುನಾವಣಾ ಕಣದಲ್ಲಿ ಏಕಾಂಗಿಯಾಗಿ ಹೋರಾಡುತ್ತಿದ್ದ ಸ್ನೇಹಿತ ಶ್ರೀರಾಮುಲುಗೆ ಬೆಂಬಲವಾಗಿ ಗಣಿಧಣಿ ಜನಾರ್ಧನರೆಡ್ಡಿ ಮೊಳಕಾಲ್ಮೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಚಮಾಗೋಚರವಾಗಿ ವಾಗ್ದಾಳಿ ನಡೆಸಿದ್ದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರೀರಾಮುಲು ಮೇಲೆ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳನ್ನು ಪ್ರಸ್ತಾಪಿಸಿದ್ದನ್ನೇ ಬಿಜೆಪಿ ಅಸ್ತ್ರವನ್ನಾಗಿ ಬಳಸಿಕೊಂಡು ಪ್ರಚಾರ ನಡೆಸಿತ್ತು.
ಅಂತಿಮವಾಗಿ ಏನೆಲ್ಲಾ ಸರ್ಕಸ್ ನಡೆದರೂ 14 ವರ್ಷಗಳ ಸಾಮ್ರಾಜ್ಯವನ್ನು ಗಣಿಧಣಿಗಳು ಹಾಗೂ ಬಿಜೆಪಿ ಪಾಳಯ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.

ಫಲಿಸಿದ ಸಿದ್ದು ತಂತ್ರ:
ಬಳ್ಳಾರಿ ಕ್ಷೇತ್ರದ ಟಿಕೆಟ್ ಹಂಚಿಕೆಯಲ್ಲಿ ಸಾಕಷ್ಟು ಪೈಪೆÇೀಟಿ ಎದುರಾಗಿತ್ತು. ಡಿ.ಕೆ.ಶಿವಕುಮಾರ್ ವಿರುದ್ಧ ಬಂಡಾಯದ ಬಾವುಟ ಹಿಡಿದಿದ್ದ ಸಚಿವ ರಮೇಶ್ ಜಾರಕಿ ಹೊಳಿ ಅವರು ತಮ್ಮ ಬೆಂಬಲಿಗ ಶಾಸಕರಾದ ನಾಗೇಂದ್ರ ಅವರ ಸಹೋದರ ವೆಂಕಟೇಶ್ ಪ್ರಸಾದ್‍ಗೆ ಟಿಕೆಟ್ ಕೊಡಿಸಬೇಕು ಎಂದು ಹಠಕ್ಕೆ ಬಿದ್ದಿದ್ದರು.
ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ನಾಗೇಂದ್ರ ಅವರ ಸಹೋದರ ನಿಮಗೆ ಟಿಕೆಟ್ ನೀಡಿದರೆ ಕಾಂಗ್ರೆಸ್‍ನಲ್ಲಿ ನಮಗೆ ಹಿನ್ನಡೆಯಾಗಲಿದೆ ಎಂದು ಶಾಸಕರಾದ ತುಕಾರಾಮ್ ಸೇರಿದಂತೆ ಅನೇಕ ಹಿರಿಯರು ಆಕ್ಷೇಪ ವ್ಯಕ್ತಪಡಿಸಿದ್ದರು.

ಈ ಗೊಂದಲಗಳನ್ನು ಬಗೆಹರಿಸುವ ಸಲುವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಪರಿಷತ್ ಸದಸ್ಯ ಉಗ್ರಪ್ಪ ಅವರನ್ನು ಕಣಕ್ಕಿಳಿಸುವುದಾಗಿ ನಿರ್ಣಯ ತೆಗೆದುಕೊಂಡರು. ಒಳಗಿನ ಗುಂಪುಗಾರಿಕೆಗಳನ್ನು ಬಿಟ್ಟು ಉಗ್ರಪ್ಪ ಅವರನ್ನು ಗೆಲ್ಲಿಸಿ ಎಂದು ತಾಕೀತು ಮಾಡಿದ್ದರು.

ಒಂದು ಹಂತದಲ್ಲಿ ಉಗ್ರಪ್ಪ ಅವರು ಅಭ್ಯರ್ಥಿಯಾಗುತ್ತಿದ್ದಂತೆ ಬಳ್ಳಾರಿ ಕ್ಷೇತ್ರ ಕಾಂಗ್ರೆಸ್ ಕೈ ತಪ್ಪಿತು ಎಂಬ ಅರ್ಥದಲ್ಲಿ ವ್ಯಾಖ್ಯಾನಗಳು ಕೇಳಿ ಬಂದವು. ಆದರೆ ರಣಾಂಗಣದಲ್ಲಿ ಬಲವಾಗಿ ಭೀಮಾರ್ಜುನರಂತೆ ನಿಂತ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಬಿಜೆಪಿಯ ಸೇನೆಯನ್ನು ಛಿದ್ರಗೊಳಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಅವರ ರಣತಂತ್ರ ಫಲಿಸಿದೆ. ಹಗಲು-ರಾತ್ರಿ ಸಾಮಾನ್ಯ ಕಾರ್ಯಕರ್ತರಂತೆ ಮನೆ ಮನೆ ಸುತ್ತಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಬ್ಬರವಿಲ್ಲದೆ ತನ್ನಷ್ಟಕ್ಕೆ ತಾನು ಮಾಡಿದ ಪ್ರಯತ್ನ ಯಶಸ್ಸು ನೀಡಿದೆ.
ಇಲ್ಲಿ ಉಗ್ರಪ್ಪ ಅವರು ಗೆದ್ದಿದ್ದಾರೆ ಎಂಬುದಕ್ಕಿಂತಲೂ ಸಿದ್ದರಾಮಯ್ಯ ಅವರ ರಾಜಕೀಯ ಮುಂದಾಲೋಚನೆ ಮತ್ತು ಡಿ.ಕೆ.ಶಿವಕುಮಾರ್ ಅವರ ಕಾರ್ಯಕ್ಷಮತೆ ಗೆಲುವು ಸಾಧಿಸಿದೆ ಎಂದರೆ ತಪ್ಪಾಗಲ್ಲ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ