ಉದ್ಯೋಗ ಸೃಷ್ಟಿಗೆ ಪ್ರಧಾನಿ ಮೋದಿ ಸರ್ಕಾರ ಬೋಂಡಾ ಮಾಡುವಂತೆ ಸಲಹೆ ನೀಡಿದೆ: ಲೇಖಕ ಹಾಗೂ ಚಿಂತಕ ಡಾ.ಜಿ.ರಾಮಕೃಷ್ಣ

Varta Mitra News

ಬೆಂಗಳೂರು, ನ.4- ನಾನು ಶ್ರೇಷ್ಠ, ನನ್ನ ಆಡಳಿತ ಶ್ರೇಷ್ಠ ಎಂಬ ಗೀಳಿನಿಂದ ಬಳಲುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶದ ವಾಸ್ತವ ಸ್ಥಿತಿಗತಿಗಳು ದೂರವಾಗಿಬಿಟ್ಟಿವೆ ಎಂದುÀ ಲೇಖಕ ಹಾಗೂ ಚಿಂತಕ ಡಾ.ಜಿ.ರಾಮಕೃಷ್ಣ ಹೇಳಿದರು.
ಗಾಂಧಿಭವನದಲ್ಲಿಂದು ಭಾರತ ಕಮ್ಯುನಿಸ್ಟ್ ಪಕ್ಷ ಬೆಂಗಳೂರು ಜಿಲ್ಲಾ ಮಂಡಳಿ ವತಿಯಿಂದ ಆಯೋಜಿಸಿದ್ದ ಮೋದಿ ಆಡಳಿತ ಒಂದು ವಿಮರ್ಷೆ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಉದ್ಯೋಗ ಸೃಷ್ಟಿಗಾಗಿ ಕೈಗೊಂಡಿರುವ ಕ್ರಮಗಳ ಕುರಿತು ಸಾರ್ವಜನಿಕರು ಕೇಳಿದ ಪ್ರಶ್ನೆಗೆ ನರೇಂದ್ರ ಮೋದಿ ಸರ್ಕಾರ ಬೋಂಡಾ ಮಾಡುವಂತೆ ಸಲಹೆ ನೀಡಿದೆ ಎಂದು ರಾಮಕೃಷ್ಣ ವ್ಯಂಗ್ಯವಾಡಿದರು.
ಸುಪ್ರೀಂಕೋರ್ಟ್ ತೀರ್ಪುಗಳನ್ನು ಕಾರ್ಯಗತಗೊಳಿಸಬೇಕಾದ ಕೇಂದ್ರ ಸರ್ಕಾರ ಅನುಷ್ಠಾನ ಯೋಗ್ಯ ತೀರ್ಪುಗಳನ್ನು ನೀಡಬೇಕೆಂದು ಹೇಳುತ್ತಿರುವುದು ಆಡಳಿತಾಂಗ ನ್ಯಾಯಾಂಗದ ಮೇಲೆ ಸಾಧಿಸುತ್ತಿರುವ ಹಿಡಿತ ಎಂದು ಹೇಳಿದರು.

ತೋರಿಕೆಯ ಅಭಿವೃದ್ಧಿಗೂ, ನೈಜ ಅಭಿವೃದ್ಧಿಗೂ ಸಾಕಷ್ಟು ವ್ಯತ್ಯಾಸವಿದೆ. ದೇಶದ ಜನರ ಮೇಲೆ ಪ್ರೇಮವಿಲ್ಲದ ಮೋದಿಯವರ ದೌರ್ಭಾಗ್ಯ ಯೋಜನೆಗಳಿಗೆ (ನೋಟು ಅಮಾನ್ಯೀಕರಣ) ಪ್ರಾಣ ಕೊಟ್ಟವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಸ್ವದೇಶಿ ಎಚ್‍ಎಎಲ್‍ಅನ್ನು ರಕ್ಷಣಾ ಸಚಿವರೇ ಕೆಲಸಕ್ಕೆ ಬಾರದ ಕಂಪೆನಿ ಎಂದು ಅಲ್ಲಗಳೆದಿದ್ದಾರೆ. ರಫೇಲ್‍ನ ಯುದ್ಧ ವಿಮಾನ ಖರೀದಿ ಕುರಿತು ವಹಿವಾಟಿನ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ (ಪೂರ್ಣ ಮಾಹಿತಿ ವಿವರ) ಸೂಚನೆಯನ್ನು ಕೇಂದ್ರ ಸರ್ಕಾರ ನಿರಾಕರಿಸುವ ಮೂಲಕ ಭ್ರಷ್ಟಾಚಾರಕ್ಕೆ ಅನುಕೂಲವಾಗುವಂತೆ ಕಾನೂನುಗಳನ್ನು ರೂಪಿಸಲು ಮುಂದಾಗಿದೆ ಎಂದು ಆರೋಪಿಸಿದರು.
ಮೋದಿ ಆಡಳಿತದ ವಾಸ್ತವ ಸ್ಥಿತಿಯನ್ನು ನಿರ್ದಿಷ್ಟವಾಗಿ ದೇಶದ ಜನ ಅರ್ಥ ಮಾಡಿಕೊಳ್ಳಬೇಕಿದೆ. ಶಿಕ್ಷಣ ಕ್ಷೇತ್ರದಲ್ಲಿನ ಬಹುದೊಡ್ಡ ದೋಷವನ್ನು ಮೋದಿ ಸರ್ಕಾರ ಕಾಣದಂತೆ ವರ್ತಿಸುತ್ತಿದೆ. ಇಲ್ಲದ ವಿಶ್ವವಿದ್ಯಾಲಯಗಳಿಗೆ ಹಣ ಬಿಡುಗಡೆ ಮಾಡಿ ಹಿಂಬಾಗಿಲಿನಿಂದ ಮತ್ತೆ ಹಣ ಪಡೆದುಕೊಳ್ಳುತ್ತಿದೆ. ಇಂತಹದ್ದನ್ನೆಲ್ಲ ನಮ್ಮ ದೇಶದ ಜನ ಅರ್ಥಮಾಡಿಕೊಳ್ಳಬೇಕಿದೆ ಎಂದು ರಾಮಕೃಷ್ಣ ಹೇಳಿದರು.

ಪತ್ರಕರ್ತ ಡಾ.ಸಿದ್ದನಗೌಡ ಪಾಟೀಲ್ ಮಾತನಾಡಿ, ಕಾಂಗ್ರೆಸ್ ಕೂಡ ಬಿಜೆಪಿಗಿಂತ ಭಿನ್ನವಾಗಿಲ್ಲ. ಸಾಮಾಜಿಕವಾಗಿ, ಸಾಂಸ್ಕøತಿಕವಾಗಿ ಕಾಂಗ್ರೆಸ್ ಬಿಜೆಪಿಯ ಒಂದು ಭಾಗವೇ ಆಗಿದೆ ಎಂದರು.

ಕಾಂಗ್ರೆಸ್ ಅವರದ್ದು ಮೌನ ನೀತಿ, ಬಿಜೆಪಿಯವರದ್ದು ಆಕ್ರಮಣ ನೀತಿ ಎಂದು ಹೇಳಿದರು.
ದೇಶದಲ್ಲಿ ಕಾಂಗ್ರೆಸ್ ರಾಜಕೀಯ ಪಕ್ಷವಾಗಿ ಉಳಿದಿಲ್ಲ. ಕುಲ, ಮತವಾದಿಗಳಿಗೆ ಹೇಗೆ ಪ್ರತಿರೋಧ ನೀಡಬೇಕೆಂಬುದು ಕಾಂಗ್ರೆಸ್ ತಿಳಿದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಸಿಪಿಐ ಬೆಂಗಳೂರು ಜಿಲ್ಲಾ ಮಂಡಳಿಯ ಕಾರ್ಯದರ್ಶಿ ಜಿ.ಬಾಬು, ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಎಂ.ಡಿ.ಹರಿಗೋವಿಂದು, ಪತ್ರಕರ್ತ ಡಾ.ಸಿದ್ದನಗೌಡ, ಭಾರತೀಯ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಮುರಳೀಧರ್ ಮತ್ತಿತರರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ