ಉಪಚುನಾವಣೆಗೆ ನಾಳೆ ಮತದಾನ

ಬೆಂಗಳೂರು,ನ.2- ಮುಂದಿನ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗಿರುವ ರಾಜ್ಯದ ಮೂರು ಲೋಕಸಭೆ, ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ನಾಳೆ ಮತದಾನ ನಡೆಯಲಿದೆ.
ಮುಕ್ತ ಮತ್ತು ನ್ಯಾಯಸಮ್ಮತ ಮತದಾನ ನಡೆಯಲು ಚುನಾವಣಾ ಆಯೋಗ ಎಲ್ಲ ರೀತಿಯ ಬಿಗಿಭದ್ರತೆಗಳನ್ನು ಕೈಗೊಂಡಿದೆ. ಕಣದಲ್ಲಿ ಒಟ್ಟು 31 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಕಾಂಗ್ರೆಸ್, ಜೆಡಿಎಸ್,ಬಿಜೆಪಿ ಹಾಗೂ ಪಕ್ಷೇತರ ಅ ಭ್ಯರ್ಥಿಗಳ ಹಣೆಬರಹವನ್ನು ಮತದಾರ ಬರೆಯಲಿದ್ದಾನೆ.
ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದ್ದು, ಮಂಗಳವಾರ ಫಲಿತಾಂಶ ಪ್ರಕಟವಾಗಲಿದೆ. ಈಗಾಗಲೇ ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಕಣದಿಂದ ಹಿಂದೆ ಸರಿದಿರುವ ಕಾರಣ ಜೆಡಿಎಸ್‍ನಿಂದ ಸ್ಪರ್ಧಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ಉಳಿದಂತೆ ಮಂಡ್ಯ, ಶಿವಮೊಗ್ಗ, ಬಳ್ಳಾರಿ ಮತ್ತು ಜಮಖಂಡಿ ಕ್ಷೇತ್ರಗಳ ಸೋಲು ಗೆಲುವಿನ ಲೆಕ್ಕಾಚಾರ ಅರಂಭವಾಗಿದೆ. ಮತದಾನ ನಡೆಯುವ ಐದು ಜಿಲ್ಲೆಗಳಲ್ಲೂ ಶಾಲಾಕಾಲೇಜು ಮತ್ತು ಸರ್ಕಾರಿ ಕಚೇರಿಗಳಿಗೆ ಸಾರ್ವತ್ರಿಕ ರಜೆ ನೀಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ