ಆನ್‍ಲೈನ್ ಮದ್ಯ ಮಾರಾಟ ನಿಲ್ಲಿಸುವಂತೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಸೂಚನೆ

ಬೆಂಗಳೂರು, ನ.2- ಆನ್‍ಲೈನ್ ಮದ್ಯ ಮಾರಾಟವನ್ನು ತಕ್ಷಣ ನಿಲ್ಲಿಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೂಚಿಸಿದ್ದಾರೆ.
ಖಾಸಗಿ ಹೊಟೇಲ್‍ನಲ್ಲಿ ನಡೆದ ಬೆಂಗಳೂರು ಟ್ರಾಮಾ ಕೋರ್ಸ್-2018 ಸಮಾವೇಶದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಬಂಧಪಟ್ಟ ಕಡತ ಪರಿಶೀಲಿಸಿ ಆನ್‍ಲೈನ್ ಮದ್ಯ ಮಾರಾಟ ತಡೆಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಆನ್‍ಲೈನ್‍ನಲ್ಲಿ ಮದ್ಯ ಮಾರಾಟ ಹಿಂದಿನ ಸರ್ಕಾರದ ಅವಧಿಯಲ್ಲಿ ಕೈಗೊಂಡ ನಿರ್ಧಾರ. ಇದರಿಂದ ಯಾರೋ ಒಬ್ಬ ಗುತ್ತಿಗೆದಾರನಿಗೆ ಲಾಭ ಮಾಡಿಕೊಡುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು.

ಶಿವಮೊಗ್ಗ ಜಿಲ್ಲೆಗೆ ತಾವು ಭೇಟಿ ನೀಡಿದ ನಂತರ ಮದ್ಯ ಮಾರಾಟ ಹೆಚ್ಚಳವಾಗಿದೆ ಎಂಬ ಬಿಜೆಪಿ ಮುಖಂಡ ಆಯನೂರು ಮಂಜುನಾಥ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ತಾವು ಶಿವಮೊಗ್ಗ ಪ್ರವಾಸ ಮುಗಿಸಿ ಬಂದ ನಂತರ ಅಲ್ಲಿ ಬಿಜೆಪಿಯವರು ಭಯಭೀತರಾಗಿದ್ದು, ಅಲ್ಲಿ ಮದ್ಯ ಮಾರಾಟ ಹೆಚ್ಚಾಗಿರಬಹುದು ಎಂದು ವ್ಯಂಗ್ಯವಾಡಿದರು.

ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಕಣದಿಂದ ಹಿಂದೆ ಸರಿದಿರುವುದಕ್ಕೆ ದೈವ ಪ್ರೇರಣೆ ಕಾರಣವಿರಬಹುದು. ನಮಗೆ ಅಭ್ಯರ್ಥಿಯನ್ನು ಹಣ ಕೊಟ್ಟು ಖರೀದಿಸುವ ಅಗತ್ಯವಿಲ್ಲ. ನಾವು ಪ್ರಚಾರಕ್ಕೆ ಹೋಗದಿದ್ದರೂ ಅಲ್ಲಿನ ಜನತೆ ಗೆಲ್ಲಿಸಿದ್ದಾರೆ ಎಂದು ಹೇಳಿದ ಅವರು ವಿಧಾನ ಪರಿಷತ್‍ನ ಎರಡು ನಾಮಕರಣ ಸದಸ್ಯತ್ವ ಸ್ಥಾನಗಳನ್ನು ಕಾಂಗ್ರೆಸ್‍ಗೆ ನೀಡಲಾಗಿದ್ದು, ಒಂದು ಸ್ಥಾನವನ್ನು ನಮ್ಮ ಪಕ್ಷಕ್ಕೆ ಉಳಿಸಿಕೊಂಡಿದ್ದಾರೆ. ಅವರನ್ನು ನೇಮಕ ಮಾಡಲಾಗುವುದು ಎಂದರು.
ರೈತರ ಸಮಾವೇಶ: ಉಪಚುನಾವಣೆ ಪ್ರಕ್ರಿಯೆ ಮುಗಿದ ಬಳಿಕ ಬೃಹತ್ ರೈತರ ಸಮಾವೇಶ ನಡೆಸಿ ಋಣಮುಕ್ತ ಪ್ರಮಾಣ ಪತ್ರ ನೀಡಲಾಗುತ್ತದೆ. ದೀಪಾವಳಿ ಮಾತ್ರವಲ್ಲ, ಪ್ರತಿ ತಿಂಗಳು ನಾಡಿನ ಜನತೆಗೆ ಒಂದೊಂದು ಸಿಹಿ ಸುದ್ದಿ ನೀಡಲು ತೀರ್ಮಾನಿಸಲಾಗಿದೆ. ಅದಕ್ಕೆ ಪೂರಕ ಯೋಜನೆಗಳನ್ನು ಸಿದ್ಧಪಡಿಸಲಾಗಿದೆ ಎಂದರು.

ರಾಜ್ಯದ ಪ್ರಮುಖ ಆಸ್ಪತ್ರೆಗಳಿಗೆ ಆಧುನಿಕ ಉಪಕರಣಗಳನ್ನು ನೀಡಲಾಗುತ್ತಿದೆÉ. ಹೆದ್ದಾರಿಗಳಲ್ಲಿ 10ಕ್ಕೂ ಹೆಚ್ಚು ಟ್ರಾಮಾ ಸೆಂಟರ್‍ಗಳನ್ನು ತೆರೆಯಲಾಗಿದೆ. ಆದರೂ ಸಾಲುತ್ತಿಲ್ಲ. ಜನತಾ ದರ್ಶನದಲ್ಲಿ ವೈದ್ಯಕೀಯ ಸಹಾಯಕ್ಕಾಗಿ ಸಾವಿರಾರು ಮಂದಿ ಬರುತ್ತಿದ್ದಾರೆ. ಖಾಸಗಿ ವೈದ್ಯಕೀಯ ಸಂಸ್ಥೆಗಳ ಸಹಕಾರವೂ ಬೇಕಾಗಿದೆ. ಖಾಸಗಿ ವೈದ್ಯರು ಬಡ ರೋಗಿಗಳ ಬಗ್ಗೆ ಸಹಾನುಭೂತಿ ತೋರಿಸಬೇಕು, ನೆರವು ನೀಡಬೇಕು ಎಂದರು.
ರೈತರ ಸಾಲಮನ್ನಾದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಎಷ್ಟು ರೈತರು ಸಾಲ ಪಡೆದಿದ್ದಾರೆ ಎಂಬ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತದೆ. 45 ಸಾವಿರ ಕೋಟಿ ಸಾಲಮನ್ನಾ ಎಂದರೆ ಸಣ್ಣ ಮೊತ್ತವಲ್ಲ. ಮಾಹಿತಿ ಕೊಟ್ಟಿರುವವರ ವಿವರವನ್ನು ಉಸ್ತುವಾರಿ ಸಮಿತಿ ಪರಿಶೀಲಿಸುತ್ತಿದೆ. ಚುನಾವಣೆ ನಂತರ ಸಾಲಮನ್ನಾವಾದ ರೈತರಿಗೆ ಋಣಮುಕ್ತ ಪ್ರಮಾಣ ಪತ್ರ ನೀಡಲಾಗುವುದು ಎಂದರು.

ಖಾಸಗಿ ಬಸ್‍ಗಳವರು ಸ್ವೇಚ್ಛಾಚಾರವಾಗಿ ದರ ಹೆಚ್ಚಳ ಮಾಡುತ್ತಿದ್ದು, ಈ ಬಗ್ಗೆ ದೂರುಗಳು ಬಂದಿವೆ. ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು.
ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಡವರಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಸಿಗುತ್ತಿಲ್ಲ. ಖಾಸಗಿ ಆಸ್ಪತ್ರೆಯಿಂದ ಮಾತ್ರ ಎಲ್ಲರಿಗೂ ಸೂಕ್ತ ಸೇವೆ ಒದಗಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳ ಸಹಕಾರವೂ ಅಗತ್ಯ. ಕೈಗೆಟಕುವ ದರದಲ್ಲಿ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಬೇಕು ಎಂದು ಹೇಳಿದರು.

ಜಯದೇವ, ಕಿದ್ವಾಯಿ, ವಿಕ್ಟೋರಿಯಾ ಆಸ್ಪತ್ರೆಗಳಿಗೆ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ಒದಗಿಸಲಾಗಿದೆ. ಜಿಲ್ಲಾಮಟ್ಟದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ತೆರೆಯಲಾಗುವುದು. ಆರೋಗ್ಯ ಕ್ಷೇತ್ರದಲ್ಲಿ ರಾಜ್ಯ ಮುಂಚೂಣಿ ಸಾಧಿಸಬೇಕಿದೆ. ಆ ಮೂಲಕ ಬಡವರಿಗೂ ಉತ್ತಮ ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕಿದೆ ಎಂದರು.
ಜನತಾದರ್ಶನದಲ್ಲಿ ವೈದ್ಯಕೀಯ ನೆರವು ಕೇಳಿಕೊಂಡು ಬರುವವರು ಹೆಚ್ಚುಮಂದಿ ಇದ್ದು, ಅವರಿಗೆಲ್ಲ ಸೂಕ್ತ ದರದಲ್ಲಿ ಸೌಲಭ್ಯ ದೊರೆಯಬೇಕಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ