ಉಪ ಚುನಾವಣಾ ರಣ ಕಣ: ಕುಣಿಯಲಾರಂಭಿಸಿದ ಕುರುಡು ಕಾಂಚಾಣ

ಬೆಂಗಳೂರು, ನ.1- ಉಪ ಚುನಾವಣಾ ರಣ ಕಣದಲ್ಲಿ ಕುರುಡು ಕಾಂಚಾಣ ಕುಣಿಯಲಾರಂಭಿಸಿದೆ.
ಮೂರು ಲೋಕಸಭಾ ಕ್ಷೇತ್ರ ಹಾಗೂ 2 ವಿಧಾನಸಭಾ ಕ್ಷೇತ್ರಗಳಿಗೆ ನ.3ರಂದು ನಡೆಯಲಿರುವ ಉಪ ಚುನಾವಣೆಗೆ ಬಹಿರಂಗ ಪ್ರಚಾರ ಇಂದು ಸಂಜೆ ಅಂತ್ಯಗೊಳ್ಳುತ್ತಿರುವ ನಡುವೆ ಮತದಾರರ ಮನವೊಲಿಸಲು ಹಣ ತೈಲಿಯೇ ಹರಿಯತೊಡಗಿದೆ.

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಕಣದಿಂದ ಹಿಂದೆ ಸರಿದಿದ್ದು, ಉಳಿದ ನಾಲ್ಕು ಕ್ಷೇತ್ರಗಳಲ್ಲಿ ಮತದಾರರ ಮನಗೆಲ್ಲಲು ಅಭ್ಯರ್ಥಿಗಳು ನಾನಾ ಆಮಿಷಗಳನ್ನು ಒಡ್ಡುತ್ತಿದ್ದಾರೆ.

ಗಲ್ಲಿ ಗಲ್ಲಿಗಳಲ್ಲಿ ಸಭೆಗಳು, ಸಮುದಾಯಗಳ ಸಭೆಗಳು ನಡೆಯುತ್ತಿವೆ. ದೇವಸ್ಥಾನಗಳು, ಛತ್ರಗಳಲ್ಲಿ ಸಭೆಗಳನ್ನು ನಡೆಸಿ ಮತದಾರರಿಗೆ ವಿವಿಧ ಆಮಿಷಗಳನ್ನು ಒಡ್ಡುತ್ತಿದ್ದಾರೆ.

ಯುವ ಸಂಘಟನೆ, ಸ್ತ್ರೀಶಕ್ತಿ ಸಂಘಗಳು, ವಿವಿಧ ಸಮುದಾಯಗಳ ಮುಖಂಡರನ್ನು ಭೇಟಿ ಮಾಡುತ್ತಿರುವ ವಿವಿಧ ಪಕ್ಷಗಳ ಕಾರ್ಯಕರ್ತರು ತಮ್ಛ್ಮ ಪಕ್ಷದ ಅಭ್ಯರ್ಥಿ ಪರ ಮತಯಾಚನೆ ಮಾಡುತ್ತಿರುವುದಲ್ಲದೆ, ಹಣ ಹಾಗೂ ವಿವಿಧ ಗಿಫ್ಟ್‍ಗಳನ್ನು ನೀಡುತ್ತಿದ್ದಾರೆ.
ಹಲವೆಡೆ ನೇರವಾಗಿ ಮತದಾರರಿಗೆ ಹಣ ಸಂದಾಯವಾಗುತ್ತಿದ್ದರೆ ಇನ್ನು ಕೆಲವೆಡೆ ದೇವಸ್ಥಾನಗಳ ಅಭಿವೃದ್ಧಿಗಳ ಮೂಲಕ ಹಣ ನೀಡಲಾಗುತ್ತಿದೆ. ಇನ್ನು ಹಲವೆಡೆ ಸ್ತ್ರೀಶಕ್ತಿ ಸಂಘಗಳ ಸದಸ್ಯರನ್ನು ಪ್ರವಾಸ ಕಳುಹಿಸುವ ಭರವಸೆ ನೀಡಲಾಗುತ್ತಿದೆ.
ದೀಪಾವಳಿ ಹಬ್ಬ ಹತ್ತಿರ ಬರುತ್ತಿರುವುದರಿಂದ ಹಬ್ಬದ ಹೆಸರಿನಲ್ಲಿ ಹಬ್ಬಕ್ಕೆ ಬೇಕಾದ ಪದಾರ್ಥಗಳು, ಸೀರೆ ಮತ್ತಿತರ ವಸ್ತುಗಳನ್ನು ನೀಡಿ ಮತದಾರರ ಮನಗೆಲ್ಲುವ ಪ್ರಯತ್ನ ಕೂಡ ಹಲವೆಡೆ ಮಾಡಲಾಗುತ್ತಿದೆ.

ಪ್ರತಿ ಬೂತ್‍ಗಳಿಗೆ ಇಂತಿಷ್ಟು ಹಣ ಎಂದು ರಾಜಕೀಯ ಪಕ್ಷಗಳು ಪ್ರತಿದಿನ ನೀಡುತ್ತಿದ್ದಾರೆ. ಕೆಲವೆಡೆ ನೇರವಾಗಿ ಮತದಾರರಿಗೆ ಹಣ ತಲುಪುತ್ತಿಲ್ಲ ಎಂಬ ಅಸಮಾಧಾನ ಕೇಳಿಬರುತ್ತಿದೆ.

ಕಾರ್ಯಕರ್ತರು ಮನೆ ಮನೆಗೆ ತೆರಳಿ ಮದ್ಯ, ಹಣ ಹಂಚುವ ಕಾರ್ಯದಲ್ಲಿ ನಿರತರಾಗಿರುವುದು ಹಲವೆಡೆ ಕಂಡುಬಂದಿದೆ. ಚುನಾವಣಾ ಆಯೋಗ ಎಲ್ಲೆಡೆ ಹದ್ದಿನ ಕಣ್ಣಿಟ್ಟಿದೆ. ಆಯೋಗ ಚಾಪೆ ಕೆಳಗೆ ನುಸುಳಿದರೆ ರಂಗೋಲಿ ಕೆಳಗೆ ನುಸುಳುತ್ತಿರುವ ವಿವಿಧ ಪಕ್ಷಗಳ ಕಾರ್ಯಕರ್ತರು ಮತದಾರರನ್ನು ಸೆಳೆಯುವ ಯತ್ನದಲ್ಲಿ ನಿರತರಾಗಿದ್ದಾರೆ.

ಇದುವರೆಗೆ ಕೇವಲ ಪ್ರಚಾರ, ಬಹಿರಂಗ ಸಭೆ, ಮೆರವಣಿಗೆ, ರೋಡ್ ಶೋ ಮಾತ್ರ ನಡೆಯುತ್ತಿತ್ತು. ಈಗ ಹಣ, ಮದ್ಯದ ಹೊಳೆ ಹರಿಯತೊಡಗಿದೆ. ಮೂರು ಲೋಕಸಭಾ ಕ್ಷೇತ್ರದಿಂದ 300 ಕೋಟಿ, ವಿಧಾನಸಭಾ ಕ್ಷೇತ್ರಕ್ಕೆ 100 ಕೋಟಿ ರೂ.ಹಣ ಖರ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ.

ಈಗಾಗಲೇ ರಾಜಕೀಯ ಪಕ್ಷಗಳ ನಾಯಕರು, ಹಲವು ಕಡೆಗಳಿಂದ ಹಣ ಕ್ರೋಢೀಕರಿಸಿ ಅಗತ್ಯವಿರುವೆಡೆ ಸಂಗ್ರಹಿಸಿಕೊಂಡು ಇಂದಿನಿಂದ ಮತದಾರರಿಗೆ ವಿತರಿಸಲು ಪ್ರಾರಂಭಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಚುನಾವಣಾ ಆಯೋಗ ಯಾವುದೇ ಅಕ್ರಮ ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಆದರೂ ಹಲವೆಡೆ ಮತವೊಂದಕ್ಕೆ 500, 1000 ರೂ. ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ